ದಾವಣಗೆರೆ:
ಕೊಳಗೇರಿಗಳ ಜನರ ಸಮಸ್ಯೆಗಳಿಗೆ ಬಿಜೆಪಿ ಕಾರ್ಯಕರ್ತರು ಸ್ಪಂದಿಸಿದರೆ, ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯ ದೊರೆಯಲಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಪಕ್ಷದ ಜಿಲ್ಲಾ ಸ್ಲಂ ಮೋರ್ಚಾದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಲಂ ಜನರ, ಬಡವ ಮೂಲಭೂತ ಸೌಲಭ್ಯಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದರ ಜತೆಗೆ, ಅವರಿಗಾಗಿ ಸೇವಾ ಕಾರ್ಯಕಗಳನ್ನು ಪಕ್ಷದ ಕಾರ್ಯಕರ್ತರು ಕೈಗೊಳ್ಳಲು ಮುಂದಾಗಬೇಕು. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಮರಳಿ ನರೇಂದ್ರ ಮೋದಿ ಅವರನ್ನು ಪ್ರಧಾನಿಮಂತ್ರಿಯಾಗಿಸಲು ಸಹಕಾರಿಯಾಗಲಿದೆ ಎಂದರು.
ಕೊಳಚೆ ಪ್ರದೇಶದಲ್ಲಿ ವಾಸಿಸುವ ಸ್ಲಂ ಜನರು ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ಸ್ವಚ್ಛತೆ, ರಸ್ತೆ ಹೀಗೆ ಮೂಲಭೂತ ಸೌಲಭ್ಯಗಳನ್ನಷ್ಟೇ ಕೇಳುತ್ತಾರೆ ಹೊರತು, ದೊಡ್ಡ ಮಟ್ಟದ ಯಾವ ಬೇಡಿಕೆಗಳನ್ನು ಇಡುವುದಿಲ್ಲ. ಆದರೆ, ಶ್ರೀಮಂತರಿಗೆ ಎಷ್ಟೇ ಸೇವೆ ಮಾಡಿದರೂ ಮತ್ತಷ್ಟು ಬೇಕೆಂಬ ಆಸೆ ಹೊಂದುತ್ತಾರೆ. ಆದ್ದರಿಂದ ನಮ್ಮ ಪಕ್ಷದಿಂದ ಬಡವರು, ದಲಿತರು, ಹಿಂದುಳಿದವರಿಗೆ ಸರ್ಕಾರಿ ಸೌಲಭ್ಯಗಳನ್ನು ಕೊಡಿಸಲು ಮುಂದಾಗಿ, ಅವರ ಮನಸ್ಸು ಗೆಲ್ಲಬೇಕು ಎಂದು ಸ್ಲಂ ಮೋರ್ಚಾ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಸ್ಲಂ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಂ. ಮುನಿಕೃಷ್ಣ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಗೆಲುವಿಗೆ ಸ್ಲಂ ಮೋರ್ಚಾ ಹೆಚ್ಚಿನ ಕೆಲಸ ಮಾಡಬೇಕಿದೆ. ಅಲ್ಲದೇ, ಪಕ್ಷಕ್ಕಾಗಿ ಶ್ರಮಿಸುತ್ತಿರುವ ಸ್ಲಂ ಮೋರ್ಚಾದ ಕಾರ್ಯಕರ್ತರ ಗುರುತಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದಿಂದ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸ್ಲಂ ಮೋರ್ಚಾದ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಡಾ. ರಮೇಶ್ ಸವಣೂರು ಮಾತನಾಡಿ, ಸುದೀರ್ಘ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವು ಸರಿಪಡಿಸಲು ಸಾಧ್ಯವಾಗದಷ್ಟು ಹಾಳುಗೆಡವಿದ್ದ ಅರ್ಥವ್ಯವಸ್ಥೆಯನ್ನಾಗಲೀ, ಕಾನೂನು ತೊಂದರೆಗಳನ್ನು ಪ್ರಧಾನಿ ಮೋದಿ ಸುಧಾರಣೆಗೆ ತರುತ್ತಿದ್ದಾರೆ. ಮೋದಿ ಅವರಿಗೆ ಪುನಹ 5 ವರ್ಷ ಅವಕಾಶ ದೇಶದ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ಸ್ಲಂಗಳಲ್ಲಿನ ಶೇ. 20ರಷ್ಟು ಮತಗಳನ್ನು ನಮ್ಮ ಪಕ್ಷಕ್ಕೆ ಸಿಗುವಂತಾಗಲು ಪ್ರಯತ್ನಿಸಿ 2019ರಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಸಂಕಲ್ಪ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸ್ಲಂ ಮೋರ್ಚಾದ ಕಾರ್ಯದರ್ಶಿ ಚನ್ನಗಿರಿ ತಾಲ್ಲೂಕಿನ ಪಟ್ಲಿ ನಾಗರಾಜ್ ಹಾಗೂ ಹೊನ್ನಾಳಿ ತಾಲ್ಲೂಕಿನ ಅಧ್ಯಕ್ಷ ರಂಗನಾಥ್ ಮತ್ತು ಜಗಳೂರು ತಾಲ್ಲೂಕಿನ ಅಧ್ಯಕ್ಷೆ ಲೋಕಮ್ಮ ಓಬಳೇಶ್ ನಾಯ್ಕ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷ ಸಭೆಯಲ್ಲಿ ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಮಾಲತೇಶ್ ಭಂಡಾರಿ. ರಾಜ್ಯ ಕಾರ್ಯದರ್ಶಿ ಕೃಷ್ಣ ಪಿಸಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಾಲೇಕಲ್ ಶಶಿಧರ್, ಬೋವಿ ನಾರಾಯಣಪ್ಪ, ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ, ಮಹಿಳಾ ಕಾರ್ಯದರ್ಶಿ ದ್ರಾಕ್ಷಾಯಣಮ್ಮ, ಶಿವರಾಜ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








