ದಾವಣಗೆರೆ:
ರಾಗಿ ಕೋಯ್ಲಿಗೆ ಹೊಲಕ್ಕೆ ಹೋಗಿದ್ದ ಇಬ್ಬರು ರೈತರ ಮೇಲೆ ಕರಡಿಯೊಂದು ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ರೈತನ ಕಿವಿ ಕಿತ್ತು ಹೋಗಿ ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೊಬ್ಬ ರೈತನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ಯಲೋದಹಳ್ಳಿ ಗ್ರಾಮದ ಸಮೀಪದ ಜಮೀನಿನಲ್ಲಿ ಶುಕ್ರವಾರ ನಡೆದಿದೆ.
ಯಲೋದಹಳ್ಳಿ ಗ್ರಾಮದ ರೈತ ತಿಪ್ಪೇಶಪ್ಪ(65 ವರ್ಷ) ಹಾಗೂ ಹಾಲೇಶಪ್ಪ (55) ಕರಡಿ ದಾಳಿಗೊಳಗಾದ ರೈತರಾಗಿದ್ದಾರೆ. ಯಲೋದಹಳ್ಳಿ ಸಮೀಪದ ನೇರಲಗುಂಡಿ ಗ್ರಾಮದ ಹೊಲದಲ್ಲಿ ಶುಕ್ರವಾರ ಬೆಳಿಗ್ಗೆ 7.30ರ ವೇಳೆ ರಾಗಿ ಕೊಯ್ಯಲು ಹೋಗಿದ್ದರು. ಹೊದಲ್ಲಿ ನಾಲ್ವರು ರೈತರು ರಾಗಿ ಕಟಾವು ಮಾಡುತ್ತಿದ್ದ ವೇಳೆ ಸಮೀಪದಲ್ಲೇ ಇದ್ದ ಕರಡಿ ಈ ಇಬ್ಬರ ಮೇಲೆ ಏಕಾಏಕಿ ದಾಳಿ ನಡೆಸಿದೆ.
ರೈತ ತಿಪ್ಪೇಶಪ್ಪನ ಮೇಲೆ ಏಕಾಏಕಿ ಕರಡಿ ದಾಳಿ ಮಾಡಿದ್ದು, ಉಳಿದ ಮೂವರು ರೈತ ಕೂಲಿ ಕಾರ್ಮಿಕರು ಭಯದಿಂದ ಕೂಗಿಕೊಂಡಿದ್ದು, ಮತ್ತೊಬ್ಬ ರೈತ ಹಾಲೇಶಪ್ಪನು ತಿಪ್ಪೇಶಪ್ಪನ ರಕ್ಷಣೆಗೆ ಧಾವಿಸಿದ್ದು, ಹಾಲೇಶಪ್ಪನ ಮೇಲೂ ಕರಡಿ ದಾಳಿ ನಡೆಸಿದ ಪರಿಣಾಮ ಹಾಲೇಶಪ್ಪನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ತಿಪ್ಪೇಶಪ್ಪನ ಮೇಲೆರಗಿದ ಕರಡಿ ಮೈ, ಹೊಟ್ಟೆ, ತಲೆ, ತೋಳು, ಕಾಲುಗಳಿಗೆ ತೀವ್ರ ತರಚು ಗಾಯಗಳನ್ನು ಮಾಡಿದ್ದು, ಎಡ ಭಾಗದ ಕಿವಿಯನ್ನು ಕಚ್ಚಿದ್ದರಿಂದ ಕಿವಿಯೇ ಕಿತ್ತು ಹೋಗಿದೆ. ಮತ್ತೊಬ್ಬ ರೈತ ಕರಡಿಗಳ ಮೇಲೆ ಜೋರಾಗಿ ಬಾಯಿ ಮಾಡಿಕೊಂಡು, ಕೈಯಲ್ಲಿ ಕುಡುಗೋಲು ಹಿಡಿದುಕೊಂಡು ಧಾವಿಸಿದ್ದರಿಂದ ಪೆಟ್ಟು ಬೀಳುತ್ತಿದ್ದಂತೆಯೇ ಎರಡು ಪುಂಡ ಕರಡಿ, ಮತ್ತೊಂದು ಕರಡಿ ಗುಡ್ಡದ ಕಡೆಗೆ ಓಡಿ ಹೋಗಿವೆ.
ತಕ್ಷಣವೇ ಗಾಯಾಳು ತಿಪ್ಪೇಶಪ್ಪ ಹಾಗೂ ಹಾಲೇಶಪ್ಪನನ್ನು ಸಮೀಪದ ಬಸವಾಪಟ್ಟಣ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತರುಚಿದ ಗಾಯಗಳಾಗಿದ್ದ ಹಾಲೇಶಪ್ಪನನ್ನು ಮನೆಗೆ ಕಳುಹಿಸಿಕೊಡಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ತಿಪ್ಪೇಶಪ್ಪನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆ ತರಲಾಯಿತು. ತಿಪ್ಪೇಶಪ್ಪನ ಕಿವಿ ಕೇಳದಂತಾಗಿದ್ದು, ಎಡ ಭಾಗದ ಕಿವಿಯೇ ಕಿತ್ತು ಹೋಗಿದ್ದರಿಂದಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ವೈದ್ಯರ ಸೂಚನೆಯಂತೆ ಎಸ್ಸೆಸ್ ಹೈಟೆಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ