ಚಳ್ಳಕೆರೆ ಗಡಿಯೊಳಗೆ ನುಗ್ಗಿದ ಕರಡಿ : ಸುರಕ್ಷಿತವಾಗಿ ಹಿಡಿದು ಕಾಡಿಗೆ ರವಾನೆ.

ಚಳ್ಳಕೆರೆ

      ಬಹಳ ವರ್ಷಗಳ ನಂತರ ಚಳ್ಳಕೆರೆ ತಾಲ್ಲೂಕಿನ ಗಡಿಯೊಳಗೆ ಸೋಮವಾರ ಬೆಳಗಿನ ಜಾವ ಕರಡಿಯೊಂದು ಆಗಮಿಸಿ ಜನರನ್ನು ಭಯಭೀತರನ್ನಾಗಿ ಮಾಡಿತ್ತು. ಈ ಕರಡಿ ಎಲ್ಲಿಂದ ಹೇಗೆ ಬಂತು ಎಂಬ ಬಗ್ಗೆ ಯಾವುದೇ ಸ್ವಷ್ಟ ಮಾಹಿತಿ ಇಲ್ಲವಾದರೂ ಅರಣ್ಯ ಇಲಾಖೆಯ ಚಾಣಾಕ್ಷ ಕಾರ್ಯಚರಣೆಯಿಂದ ಕರಡಿಯನ್ನು ಜನರಿಂದ ರಕ್ಷಿಸಿ ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಕಳುಹಿಸಲಾಯಿತು ಎಂದು ಅರಣ್ಯಾಧಿಕಾರಿ ಎಸ್.ಸುರೇಶ್ ತಿಳಿಸಿದರು.

      ನಗರದ ಅರಣ್ಯ ಇಲಾಖೆಯ ಕಚೇರಿ ಬಳಿ ಕರಡಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಅವರು, ಸೋಮವಾರ ಬೆಳಗ್ಗೆ 6.30ರ ಸಮಯದಲ್ಲಿ ತಾಲೂಕಿನ ಗಡಿಭಾಗವಾದ ದೊಡ್ಡ ಚೆಲ್ಲೂರಿನಲ್ಲಿ ಕಾಣಿಸಿಕೊಂಡ ಕರಡಿ ಜನರನ್ನು ಕಂಡ ಕೂಡಲೇ ಓಡೊಡಿ ಟಿ.ಎನ್.ಕೋಟೆ ಗ್ರಾಮದ ರಮೇಶ್ ಎಂಬುವವರ ತೋಟದಲ್ಲಿ ಬಂದು ಅಡಗಿತ್ತು.

        ಮಾಹಿತಿ ಬಂದ ಕೂಡಲೇ ನಾನು ಮತ್ತು ನಮ್ಮ ಸಿಬ್ಬಂದಿ ವರ್ಗ ಪೊಲೀಸರಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ತೆರಳಿ ಸಾರ್ವಜನಿಕರನ್ನು ಮನವಿ ಮಾಡಿ ಯಾವುದೇ ಕಾರಣಕ್ಕೂ ಕರಡಿಯನ್ನು ಹೊಡೆಯದಂತೆ ಮನವಲಿಸಿ ಜೀವಂತವಾಗಿ ಕರಡಿ ಹಿಡಿಯುವ ಕಾರ್ಯಕ್ಕೆ ಎಲ್ಲರೂ ರಕ್ಷಣೆ ನೀಡುವಂತೆ ತಿಳಿಸಿದ್ದು, ಜನರೂ ಸಹ ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಜೊತೆಯಲ್ಲೇ ಕಾರ್ಯಚರಣೆಯಲ್ಲಿ ತೊಡಗಿದರು ಎಂದು ಸಂತಸ ಪಟ್ಟರು.

       ಬೆಳಗ್ಗೆ 9.30ಕ್ಕೆ ಕರಡಿ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿ ಮಧ್ಯಾಹ್ನ 2.30ಕ್ಕೆ ಮುಗಿಸಿತು ಎಂದು ತಿಳಿಸಿದ ಅವರು, ರಮೇಶ್ ಎಂಬುವವರ ಜಮೀನ ನೆಲದ ಮೇಲೆ ಮಲಗಿದ್ದ ಕರಡಿಯನ್ನು ಅರಣ್ಯ ಇಲಾಖೆಯ ಬಲೆ ಬೀಸಿ ಸಾರ್ವಜನಿಕರ ಸಹಕಾರ ಪಡೆದು ಅದನ್ನು ಜೋಪಾನವಾಗಿ ಇಲಾಖೆಯ ಬೋನ್‍ನಲ್ಲಿ ಬಂಧಿಸಲಾಯಿತು. ಕರಡಿಯ ಯಾವುದೇ ಭಾಗಗಳಿಗೆ ಪೆಟ್ಟಾಗಿರಲಿಲ್ಲ. ಕರಡಿ ಆರೋಗ್ಯವಾಗಿ ಲವಲವಿಕೆಯಿಂದ ಇದ್ದು, ಅದನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಡು ಮಲ್ಲೇಶ್ವರ ಅರಣ್ಯ ಧಾಮಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ಧಾರೆ.

        ಕಳೆದ 2017ರಲ್ಲಿ ಚಳ್ಳಕೆರೆ ತಾಲ್ಲೂಕಿನ ಕರೇಯಾಗಳಹಳ್ಳಿ ಬಳಿ ಆನೆಯೊಂದು ಬಂದು ಸುದ್ದಿ ಮಾಡಿದ್ದು, ನಂತರ ಎರಡು ಚಿರತೆಗಳು ಸಹ ಗಿರಿಯಮ್ಮನಹಳ್ಳಿ ಮತ್ತು ಓಬಳಾಪುರ, ನನ್ನಿವಾಳ ಇತರೆಡೆಗಳಲ್ಲಿ ಗೋಚರಿಸಿದ್ದು, ನಂತರ ಯಾವುದೇ ಕಾಡು ಪ್ರಾಣಿಗಳು ಚಳ್ಳಕೆರೆ ತಾಲ್ಲೂಕಿಗೆ ಆಗಮಿಸಿರಲಿಲ್ಲ. ಮತ್ತೆ 2019ರಲ್ಲಿ ಕರಡಿಯೊಂದು ಆಗಮಿಸಿ ಜನರನ್ನು ಚಕಿತಗೊಳಿಸಿದೆ.

       ಬಾರಿ ಜನಜಂಗುಳಿ :- ಕರಡಿ ಆಗಮನ ಸುದ್ದಿ ಕೇಳುತ್ತಲೇ ದೊಡ್ಡ ಚೆಲ್ಲೂರು, ಚಿಕ್ಕಚೆಲ್ಲೂರು, ಟಿ.ಎನ್.ಕೋಟೆ, ದೊಡ್ಡ ಬೀರನಹಳ್ಳಿ ಮುಂತಾದ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಕಟ್ಟಿಗೆ, ದೊಣ್ಣೆಗಳನ್ನು ಹಿಡಿದು ಕರಡಿಯನ್ನು ಹಿಂಬಾಲಿಸಿದ್ದು, ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ತಲೆನೋವಾಗಿತ್ತು. ಕರಡಿಯನ್ನು ಕೊಂದರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂಬು ಅರಿವಿಲ್ಲದೆ ಜನರು ಕರಡಿಯನ್ನು ಬೆನ್ನತ್ತಿದ್ದರು. ಆದರೆ, ಪೊಲೀಸರು ಮಾತ್ರ ಯಾವುದೇ ಕಾರಣಕ್ಕೂ ಜನರು ಕರಡಿಯ ಬಳಿ ಸುಳಿಯದಂತೆ ತಡೆದಿದ್ದು, ಕರಡಿಯನ್ನು ಜೀವಂತ ಸೆರೆ ಹಿಡಯಲು ಸಹಕಾರಿಯಾಯಿತು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಕರಡಿಯ ಸುರಕ್ಷತೆಯಿಂದ ಬಂಧಿಸಲು ಕಾರಣಕರ್ತರಾದ ಸಾರ್ವಜನಿಕರ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap