ಬೆಂಗಳೂರು
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸತತ ಮೂರು ವರ್ಷಗಳ ಕಾಲ ಬರ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೆಂಗು ಬೆಳೆಗೆ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದಲೇ ಪರಿಹಾರ ಪ್ಯಾಕೆಜ್ ಪ್ರಕಟಿಸಿದೆ.
ಒಟ್ಟು 178 ಕೋಟಿ ರೂ ಮೊತ್ತದ ಪ್ಯಾಕೇಜ್‍ಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಹಾಳಾಗಿರುವ ಪ್ರತಿ ಹೆಕ್ಟೇರ್ ತೆಂಗು ಬೆಳೆಗೆ 18 ಸಾವಿರ ರೂ ಇಲ್ಲವೆ ಪ್ರತಿಯೊಂದು ತೆಂಗಿನ ಮರಕ್ಕೆ 400 ರೂ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಯಾವ ರೀತಿ ಪರಿಹಾರ ನೀಡಬೇಕು ಎನ್ನುವ ಬಗ್ಗೆ ತೋಟಗಾರಿಕಾ ಇಲಾಖೆ ವರದಿ ಆಧಾರದ ಮೇಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಂಸದೀಯ ವ್ಯಹಾರಗಳ ಸಚಿವ ಕೃಷ್ಣ ಭೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.
ತುಮಕೂರು, ಹಾಸನ, ಚಾಮರಾಜ ನಗರ ಮಂಡ್ಯ, ಚಿತ್ರದುರ್ಗ ಸೇರಿ ಎಂಟು ಜಿಲ್ಲೆಗಳ ರೈತರಿಗೆ ಈ ಪರಿಹಾರ ಪ್ಯಾಕೆಜ್‍ನಿಂದ ಅನುಕೂಲವಾಗಲಿದೆ. ಒಟ್ಟು 44,547 ಹೆಕ್ಟೇರ್ ನಲ್ಲಿನ ತೆಂಗು ಬೆಳೆ ನಷ್ಟವಾಗಿದೆ ಎಂದರು.
ಹಾಸನ ಎಂಜಿನಿಯರಿಂಗ್ ಕಾಲೇಜಿನ ಉನ್ನತೀಕರಣಕ್ಕೆ 55 ಕೋಟಿ ರೂ .ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಯ ಭೂಮಿ ಬಳಸಿಕೊಂಡು ರಸ್ತೆ ಅಗಲೀಕರಣ, ಸೇತುವೆ ನಿರ್ಮಾಣ ಮಾಡುವ ಸಂಬಂಧ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ರಕ್ಷಣಾ ಇಲಾಖೆಯಿಂದ 45,165 ಚದರ ಮೀಟರ್ ಭೂಮಿ ಪಡೆಯಲು ತೀರ್ಮಾನಿಸಲಾಗಿದೆ. ಅದಕ್ಕೆ ಬದಲು ಬೇರೊಂದು ಕಡೆ ಅದಕ್ಕೆ ಸಮನಾದ ಭೂಮಿ ನೀಡಲು ನಿರ್ಧರಿಸಲಾಗಿದೆ ಎಂದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತ ಮತ್ತಿತರ ಸಂಘಟನೆಗಳ ಮೇಲೆ ದಾಖಲಾಗಿದ್ದ 14 ಪ್ರಕರಣಗಳನ್ನು ಕೈಬಿಡಲಾಗಿದೆ. ಇದರಲ್ಲಿ ತುಮಕೂರಿನ ತ್ಯಾಜ್ಯ ವಿಲೇವಾರಿ ಘಟಕ ವಿರುದ್ಧ ನಡೆಸಿದ ಹೋರಾಟಗಾರರ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








