ದಾವಣಗೆರೆ:
ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾಥಮಿಕ ಪೂರ್ವ ಶಿಕ್ಷಣ ಆರಂಭಿಸಲು ಮುಂದಾಗಿರುವುದರಿಂದ, ಅಂಗನವಾಡಿ ಕೆಂದ್ರಗಳಲ್ಲಿ ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಬೀದಿಪಾಲಾಗುವ ಆತಂಕದಲ್ಲಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಹರಿಹರ ತಾಲೂಕು ಘಟಕದ ಅಧ್ಯಕ್ಷೆ ಬಿ.ಎಸ್.ನಿರ್ಮಲ ಮಾತನಾಡಿ, ಸರ್ಕಾರದ ಮಾತೃ ಪೂರ್ಣ, ಮಾತೃಶ್ರೀ, ಭಾಗ್ಯಲಕ್ಷ್ಮೀ ಸೇರಿದಂತೆ ಇತರೆ ಯೋಜನೆಗಳನ್ನು ಸಾಕಾರಗೊಳಿಸುವುದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳಷ್ಟು ಮುಖ್ಯವಾಗಿದೆ.
ಅಲ್ಲದೇ, ಕಳೆದ ಹಲವು ವರ್ಷಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಲಾಲನೆ, ಪಾಲನೆ ಮಾಡಿಕೊಂಡು ಬಂದಿದ್ದೇವೆ. ಆದರೆ, ರಾಜ್ಯ ಸರ್ಕಾರ ಈಗ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ ಹಾಗೂ ಯುಕೆಜಿ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲು ಮುಂದಾಗಿದ್ದು, ನಾವೆಲ್ಲಾ ಬೀದಿ ಪಾಲಾಗುವ ಸಾಧ್ಯತೆ ಇದೆ ಎಂದು ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ 2500 ಅಂಗನವಾಡಿ ಕೇಂದ್ರಗಳು ಇರುವುದು ಸೇರಿದಂತೆ ರಾಜ್ಯದಲ್ಲಿ ಒಟ್ಟು 62,580 ಅಂಗನವಾಡಿ ಕೇಂದ್ರಗಳು ಮಕ್ಕಳ ಪಾಲನೆ, ಪೋಷಣೆಯಲ್ಲಿ ತೊಡಗಿದ್ದು, ಈ ಕೇಂದ್ರಗಳನ್ನು ನಂಬಿಕೊಂಡೇ ಸಾವಿರಾರು ಅಂಗನವಾಡಿ ನೌಕರರು ಜೀವನ ನಡೆಸುತ್ತಿದ್ದಾರೆ.
ಆದರೆ, ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಪೂರ್ವ ತರಗತಿಗಳನ್ನು ಆರಂಭಿಸಿದರೆ, ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಅಂಗನವಾಡಿಗಳು ಮುಚ್ಚಿಕೊಳ್ಳುವ ಸಾಧ್ಯತೆವಿದ್ದು, ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಾವು ಆಗ ಎಲ್ಲಿಗೆ ಹೋಗಬೇಕೆಂದು? ಪ್ರಶ್ನಿಸಿದರು.
ರಾಜ್ಯ ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲು ಮುಂದಾಗಿರುವುದು ಬಿಟ್ಟು, ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲ ಅಥವಾ ಬಾಲಸ್ನೇಹಿ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಿ, ಇವುಗಳಲ್ಲಿಯೇ ಎಲ್‍ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿ, ಅಂಗನಾಡಿ ನೌಕರರಿಗೆ ಅಧಿಕೃತವಾಗಿ ಈ ಕೆಲಸವನ್ನು ವಹಿಸಿ, ವೇತನ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು.
ಈಗೆಷ್ಟೋ ಅಂಗನವಾಡಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ, ಶೌಚಾಲಯಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆದ್ದರಿಂದ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ, ಈ ಕೇಂದ್ರಗಳಲ್ಲಿ ಎಲ್‍ಕೆಜಿ, ಯುಕೆಜಿ ತರಗತಿ ನಡೆಸಲು ಬೇಕಾಗಿರುವ ಅನುದಾನ ನೀಡಬೇಕು. ಅಂಗನವಾಡಿಯಲ್ಲಿ ಪಡೆಯುತ್ತಿರುವ ಶಾಲಾ ಪೂರ್ವ ಶಿಕ್ಷದ ಆಧಾರದಲ್ಲಿ ಇಲ್ಲಿಂದಲೇ ಮುಂದಿನ ಪ್ರಾಥಮಿಕ ಹಂತರದ ಶಿಕ್ಷಣ ಪಡೆಯಲು ಟಿಸಿ ವರ್ಗಾಯಿಸುವ ಪ್ರಕ್ರಿಯೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಎಸ್.ಬಿ.ಲಲಿತಾ, ಹೆಚ್.ಡಿ.ಜ್ಯೋತಿ, ಎಂ.ಎಸ್.ರೇಣುಕಾ, ಪಿ.ಎನ್.ಸುಜಾತಾ, ಎಂ.ಬಿ.ನಿರ್ಮಲ, ಎ,ಮಂಜಮ್ಮ ಮತ್ತಿತರರು ಹಾಜರಿದ್ದರು.