ಸರ್ಕಾರದ ಜೊತೆ ಸದ್ಬಾವನೆಯಿಂದ ಕೆಲಸ ಮಾಡಬೇಕು

ಚಿತ್ರದುರ್ಗ:

     ಯಾವುದೇ ಕೆಲಸಗಳು ಕಳಪೆಯಾಗಬಾರದೆಂದರೆ ಇಂಜಿನಿಯರ್, ಗುತ್ತಿಗೆದಾರರು ಹಾಗೂ ಸರ್ಕಾರ ಪರಸ್ಪರ ಒಬ್ಬರಿಗೊಬ್ಬರು ಗೌರವ, ನಂಬಿಕೆ, ಸದ್ಬಾವನೆ, ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಸರ್ಕಾರದ ಕಾರ್ಯದರ್ಶಿಗಳು ಲೋಕೋಪಯೋಗಿ ಇಲಾಖೆ ಹಾಗೂ ಬಂದರು ಒಳನಾಡು ಜಲ ಸಾರಿಗೆ ಇಲಾಖೆಯ ಇಂಜಿನಿಯರ್ ಡಾ.ಕೆ.ಎಸ್.ಕೃಷ್ಣರೆಡ್ಡಿ ಕಿವಿಮಾತು ಹೇಳಿದರು.

     ಕರ್ನಾಟಕ ಸರ್ಕಾರಿ ಪದವೀಧರ ಇಂಜಿನಿಯರ್‍ಗಳ ಸಂಘ ಮತ್ತು ಕರ್ನಾಟಕ ಇಂಜಿನಿಯರ್‍ಗಳ ಸೇವಾ ಸಂಘ, ಗುತ್ತಿಗೆದಾರರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರ 158 ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

     ಇಂಜಿನಿಯರ್‍ಗಳ ಸಂಘ ಬಲಿಷ್ಟವಾಗಿ ಬೆಳೆಯಬೇಕು. ಸಮಾಜಕ್ಕೆ ಇಂಜಿನಿಯರ್‍ಗಳು ಏನಾದರೂ ಕೊಡುಗೆ ನೀಡಿದಾಗ ಮಾತ್ರ ಗೌರವ ಸಿಗುತ್ತದೆ. ಸೇವಾವಧಿಯಲ್ಲಿ ಎಷ್ಟು ಒಳ್ಳೆ ಕೆಲಸಗಳನ್ನು ಮಾಡಿದರೂ ಕೆಲವೊಮ್ಮೆ ಸಣ್ಣಪುಟ್ಟ ವೈಯಕ್ತಿಕ ಲೋಪಗಳಿಂದ ಒಳ್ಳೆ ಕೆಲಸಗಳೆಲ್ಲಾ ಮುಚ್ಚಿ ಹೋಗುತ್ತವೆ.

      ಇಂಜಿನಿಯರ್‍ಗಳ ಸೇವಾ ಪಾರದರ್ಶಕವಾಗಿರಬೇಕು. ಗುತ್ತಿಗೆದಾರರು ಹಾಗೂ ಇಂಜಿನಿಯರ್‍ಗಳು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಅಭಿಮಾನವಿಟ್ಟು ಗುಣಮಟ್ಟದ ಕೆಲಸ ಮಾಡದಿದ್ದರೆ ವೈಯಕ್ತಿಕವಾಗಿ ಅಲ್ಲದೆ ಇಡೀ ದೇಶಕ್ಕೆ ಹಾನಿಯಾಗುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಳ್ಳಿ. ಎಸ್ಟಿಮೇಷನ್, ಡಿಸೈನ್ ಮಾಡಬೇಕಾದರೆ ಮೈಯೆಲ್ಲಾ ಎಚ್ಚರವಿರಬೇಕು. ಸಿಮೆಂಟ್ ತಯಾರಿಸಲು ಸುಣ್ಣದಕಲ್ಲು, ಜೇಡಿಮಣ್ಣು, ಮಾನವ ಶ್ರಮ ಬೇಕು. ಅದಕ್ಕಾಗಿ ಅನವಶ್ಯಕವಾಗಿ ಸಿಮೆಂಟನ್ನು ಬಳಸಬೇಡಿ.

      ನೀವುಗಳು ಮಾಡುವ ಕೆಲಸ ಸಮಾಜಕ್ಕೆ ಹೆಚ್ಚು ಉಪಯುಕ್ತವಾಗಿರಬೇಕು. ನನಗೆ ನೀವುಗಳು ಸನ್ಮಾನ ಮಾಡಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಿಮ್ಮಗಳ ಮೇಲೆ ನನ್ನ ನಡೆ ನುಡಿ ಸೂಕ್ಷ್ಮತೆಯಿಂದ ಇರುತ್ತದೆ ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರುಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು.

        ಇಂಜಿನಿಯರ್ ಹಾಗೂ ಗುತ್ತಿಗೆದಾರರು ಬೇರೆ ಬೇರೆ ಎಂದುಕೊಳ್ಳುವುದು ಬೇಡ. ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ ಕೆಲವು ಗುತ್ತಿಗೆದಾರರು ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ರಸ್ತೆ ನಿರ್ಮಾಣ, ಡ್ಯಾಂ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವಾಗ ಅದರ ಬಾಳಿಕೆ ಹಾಗೂ ಭವಿಷ್ಯ ನೀವುಗಳು ಮಾಡುವ ಗುಣಮಟ್ಟದ ಕೆಲಸಗಳ ಮೇಲೆ ನಿಂತಿರುತ್ತದೆ. ಆದ್ದರಿಂದ ಸಮಾಜ ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದರು.

      ಭದ್ರಾಮೇಲ್ದಂಡೆ ಯೋಜನೆ ನಿವೃತ್ತ ಮುಖ್ಯ ಇಂಜಿನಿಯರ್ ಆರ್.ಚೆಲುವರಾಜು ಸನ್ಮಾನ ಸ್ವೀಕರಿಸಿ ಮಾನಾಡುತ್ತ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಕೇವಲ ಇಂಜಿನಿಯರ್ ಆಗಿ ಕೆಲಸ ಮಾಡಲಿಲ್ಲ. ಮೈಸೂರಿನ ದಿವಾನರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೂರಾಲೋಚನೆ, ಶಿಸ್ತು, ದೂರದೃಷ್ಟಿ, ಸಮಯಪ್ರಜ್ಞೆ ಅವರಲ್ಲಿದ್ದುದರಿಂದಲೇ ಇಂದು ಅವರನ್ನು ಯಾರು ಮರೆಯುವಂತಿಲ್ಲ. ಅವರ ಮಾರ್ಗದರ್ಶನದ ಮೇಲೆ ನೀವುಗಳೆಲ್ಲಾ ನಡೆಯಬೇಕಿದೆ ಎಂದು ಹೇಳಿದರು.

      ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ ಜಾರಿಗಾಗಿ ಕಳೆದ ನಲವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸುತ್ತಿರುವ ಫಲವಾಗಿ ಯೋಜನೆ ಮುಗಿಯುವ ಹಂತಕ್ಕೆ ಬಂದಿದ್ದು, ಕಾಮಗಾರಿ ಚುರುಕಿನಿಂದ ಸಾಗುತ್ತಿದೆ. ಹತ್ತು ವರ್ಷಗಳ ಕಾಲ ಭದ್ರಾಮೇಲ್ದಂಡೆ ಯೋಜನೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡಿರುವ ನನಗೆ ರೈತರು, ಹೋರಾಟಗಾರರು, ಇಂಜಿನಿಯರ್‍ಗಳು, ಗುತ್ತಿಗೆದಾರರು ಸಹಕಾರ ನೀಡಿದ್ದರಿಂದ ಯೋಜನೆ ಶೀಘ್ರವಾಗಿ ಜಾರಿ ತರಲು ಹೆಚ್ಚಿನ ಗಮನ ಕೊಟ್ಟು ಕೆಲಸ ಮಾಡಲು ಸಹಾಯವಾಯಿತು ಎಂದು ಎಲ್ಲರ ಸಹಕಾರವನ್ನು ಸ್ಮರಿಸಿದರು.

      ಇಂಜಿನಿಯರ್‍ಗಳ ಕೆಲಸವೆಂದರೆ ಒಬ್ಬರಿಂದ ಆಗುವುದಲ್ಲ. ಟೀಮ್ ವರ್ಕ್ ಮುಖ್ಯ. ಚಿತ್ರದುರ್ಗದಲ್ಲಿ ನಾನು ಸೇವೆ ಸಲ್ಲಿಸಿದ ಅವಧಿಯಲ್ಲಿ ಗುತ್ತಿಗೆದಾರರ ಸಭೆ ಕರೆದು ಅವರ ಸಮಸ್ಯೆಗಳನ್ನು ಕೇಳಬೇಕೆಂದು ಅಂದುಕೊಂಡಿದ್ದೆ ಸಮಯದ ಒತ್ತಡವೋ ಏನೋ ಅವರ ಜೊತೆ ಸಭೆ ನಡೆಸಲು ಆಗಲಿಲ್ಲ. ಭದ್ರಾಮೇಲ್ದಂಡೆ ಯೋಜನೆ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನೊಂದು ವರ್ಷದಲ್ಲಿ ಚಿತ್ರದುರ್ಗ ಇಲ್ಲವೇ ಹಿರಿಯೂರಿನ ವಾಣಿವಿಲಾಸ ಸಾಗರಕ್ಕಾದರೂ ನೀರು ಬರಬಹುದು ಎಂದು ಭರವಸೆ ನೀಡಿದರು.

       ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡುತ್ತ ಇಂಜಿನಿಯರ್‍ಗಳೆಂದರೆ ರಾಷ್ಟ್ರದ ನಿರ್ಮಾಣ ಮಾಡುವವರಿದ್ದಂತೆ. ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಒಬ್ಬ ದಾರ್ಶನಿಕರಿದ್ದಂತೆ. ಕೈಗಾರಿಕೆ, ಕೃಷಿ, ಶಿಕ್ಷಣ, ದೊಡ್ಡ ದೊಡ್ಡ ಅಣೆಕಟ್ಟೆಗಳ ನಿರ್ಮಾಣದಲ್ಲಿ ಅವರ ಪಾತ್ರ ಅಡಗಿದೆ. ಬರೀ ಕರ್ನಾಟಕವಷ್ಟೆ ಅಲ್ಲ. ದೇಶದ ಎಲ್ಲಾ ಭಾಗಗಳಲ್ಲಿಯೂ ವಿಶ್ವೇಶ್ವರಯ್ಯನವರು ಸೇವೆ ಸಲ್ಲಿಸಿ ಇನ್ನು ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಇಂಜಿನಿಯರ್‍ಗಳಾದವರು ಕಟ್ಟಡಗಳನ್ನು ಕಟ್ಟುವ ಮುನ್ನವೇ ಮುಂದೆ ಆಗಬಹುದಾದ ಸಮಸ್ಯೆಗಳನ್ನು ಗಮನಿಸಿ ಗುಣಮಟ್ಟದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

        ಜಿಲ್ಲಾ ಇಂಜಿನಿಯರ್‍ಗಳ ಸಂಘದ ಅಧ್ಯಕ್ಷ ಸತೀಶ್‍ಬಾಬು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಶಿವಮೊಗ್ಗ ವೃತ್ತದ ಸೂಪರಿಂಟೆಂಡೆಂಟ್ ಇಂಜಿನಿಯರ್ ಶಿವಾನಂದ ಬಣಕಾರ್, ಇಂಜಿನಿಯರ್‍ಗಳಾದ ಶ್ರೀನಿವಾಸ್, ಶಿವಕುಮಾರ್, ಎಂ.ನಾಗರಾಜ್, ದೇವರಾಜ್ ವೇದಿಕೆಯಲ್ಲಿದ್ದರು.

        ಗುತ್ತಿಗೆದಾರರು ಹಾಗೂ ನೂರಾರು ಅಭಿಮಾನಿಗಳು ಡಾ.ಕೆ.ಎಸ್.ಕೃಷ್ಣರೆಡ್ಡಿ ಹಾಗೂ ನಿವೃತ್ತ ಮುಖ್ಯ ಇಂಜಿನಿಯರ್ ಚೆಲುವರಾಜ್ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ದುರ್ಗದ ಅಭಿಮಾನವನ್ನು ತೋರ್ಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link