ಹೊಳಲ್ಕೆರೆ:
ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಮೂಲಕ ಅವರಿಗೆ ತೊಂದರೆ ಕೊಟ್ಟಲ್ಲಿ ಅರಾಜಕತೆ ಉಂಟು ಮಾಡುವುದರ ಜತೆಗೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿತಂಗಾಗುತ್ತದೆ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಎನ್.ಎ.ನಾಗೇಶ್ ಹೇಳಿದರು.
ತಾಲ್ಲುಕಿನ ತಾಳ್ಯ ಗ್ರಾಮದ ಆಂಜನೇಯ ಸ್ವಾಮಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ತಾಲ್ಲುಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ, ಪೋಲೀಸ್ ಇಲಾಖಾ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕಾರ್ಮಿಕರಲ್ಲಿ ಪುರುಷ ಹಾಗೂ ಮಹಿಳೆ ಎಂಬ ಭೇದಭಾವದಿಂದ ವೇತನದಲ್ಲಿ ವ್ಯತ್ಯಾಸ ಮಾಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸದೇ ಕೆಲಸಕ್ಕೆ ಕಳುಹಿಸಿ ಅವರ ಬಾಲ್ಯಾವಸ್ಥೆಯನ್ನು ಕಸಿದುಕೊಳ್ಳುವುದು, ಪೋಷಕರಿಗೆ ಊಟ, ಬಟ್ಟೆ ಕೊಡದಿರುವುದು ಇವೆಲ್ಲವೊ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ. ಶೋಷಣೆಗೊಳಗಾದವರಿಗೆ ಹಲವಾರು ಕಾನೂನುಗಳಿದ್ದು ಅವುಗಳ ಕುರಿತಾಗಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ಮಾತನಾಡಿ ದೇಶ ಕಟ್ಟುವ ಗುರುತರ ಜವಾಬ್ದಾರಿ ಇಂದಿನ ಯುವಕರ ಮೇಲಿದ್ದು, ವಿದ್ಯಾರ್ಥಿಗಳು ಮಾನವ ಹಕ್ಕುಗಳನ್ನು ಅರಿತು ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಕಲಿಕೆಯ ಜೊತೆಗೆ ಸಂವಿಧಾನಾತ್ಮಕ ಹಕ್ಕುಗಳನ್ನು ಅರಿತರೆ ಜೀವನ ಸುಗಮವಾಗಿ ನಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಮಾನವ ಹಕ್ಕುಗಳ ಕಾಯ್ದೆ ಮತ್ತು ಮಹತ್ವ ಕುರಿತು ವಕೀಲ ಎಸ್,ವಿಜಯ್ ಕಾಲ್ಕೆರೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್, ಪಿಯು ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ನಾಯ್ಕ್, ಪ್ರೌಢಶಾಲೆ ಪ್ರಾಚಾರ್ಯ ಟಿ.ಎಂ.ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ