ಬೆಳೆ ಹಾನಿ ಪರಿಶೀಲಿಸಿ ಅಭಯ ನೀಡಿದ ಎಸ್‍ಎಆರ್

ದಾವಣಗೆರೆ:

    ಮೊನ್ನೆ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಹಾನಿಗೀಡಾದ ದಾವಣಗೆರೆ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲ, ಗದ್ದೆ ಹಾಗೂ ತೋಟಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಾಸಕ ಎಸ್.ಎ.ರವೀಂದ್ರನಾಥ್ ಅವರು, ರೈತರಿಗೆ ಯಾವುದೇ ಅನ್ಯಾಯವಾಗದ ರೀತಿಯಲ್ಲಿ ಪರಿಹಾರ ಕೊಡಿಸುವುದಾಗಿ ಹೇಳಿ, ಸಂತ್ರಸ್ಥ ರೈತರಿಗೆ ಅಭಯ ನೀಡಿದ್ದಾರೆ.

     ಕಳೆದ ಸೋಮವಾರ ರಾತ್ರಿ ಭಾರೀ ಬಿರುಗಾಳಿ ಸಮೇತ ಮಳೆ ಸುರಿದ ಕಾರಣಕ್ಕೆ ಜಿಲ್ಲೆಯ ಹಲವೆಡೆ ಬೆಳೆ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮರಳುತ್ತಿದ್ದಂತೆ ಶಾಸಕ ಎಸ್.ಎ. ರವೀಂದ್ರನಾಥ್ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇತೂರು, ಕಲ್ಪನಹಳ್ಳಿ, ಕಾಡಜ್ಜಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಂತ್ರಸ್ಥ ರೈತರ ಹೊಲ, ಗದ್ದೆ ಹಾಗೂ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     ಫಸಲಿಗೆ ಬಂದಿರುವ ಭತ್ತದ ಬೆಳೆ ಹಾನಿಯಾಗಿರುವುದನ್ನು, ಫಲಕ್ಕೆ ಬಂದಿದ್ದ ನೂರಾರು ಅಡಿಕೆ, ಬಾಳೆ, ಪಪ್ಪಾಯಿ ಮರಗಳೂ ನೆಲಕ್ಕೆ ಉರುಳಿರುವುದನ್ನು ಗಮನಿಸಿದ ಶಾಸಕ ರವೀಂದ್ರನಾಥ್ ಬೇಸರ ವ್ಯಕ್ತಪಡಿಸಿ, ಸಂತ್ರಸ್ಥ ರೈತರಲ್ಲಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಶಾಸಕರ ಎದುರು ಅಳಲು ತೋಡಿಕೊಂಡ ರೈತರು, ಒಂದೆರೆಡು ವಾರಗಳಲ್ಲಿ ಕಟಾವಿಗೆ ಬರಲಿದ್ದ ಭತ್ತದ ಬೆಳೆಯು ಸಂಪೂರ್ಣ ಮಣ್ಣು ಪಾಲಾಗಿದೆ. ವರ್ಷಗಟ್ಟಲೇ ಸಾಕಿ ಬೆಳೆಸಿದ ಅಡಿಕೆ ಗಿಡಗಳು, ಬಾಳೆ ಗಿಡಗಳು ಗಾಳಿ ಹೊಡೆತಕ್ಕೆ ನೆಲಕ್ಕೆ ಉರಳಿವೆ. ಫಲ ನೀಡಲಿದ್ದ ಪಪ್ಪಾಯಿ ಮರಗಳೂ ಹಾಳಾಗಿವೆ. ಆದ್ದರಿಂದ ತಕ್ಷಣವೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.

     ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಬಂದು ಬೆಳೆ ಹಾನಿಯನ್ನು ಪರಿಶೀಲಿಸಿ ಹೋಗಿದ್ದಾರೆ. ಆದರೆ, ಈ ವರೆಗೆ ಅಧಿಕಾರಿಗಳಿಂದ ರೈತರಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾನದಂಡದಂತೆ ನೀರುವ ಅಲ್ಪ ಪರಿಹಾರದಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸಮರ್ಪಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ವೈಜ್ಞಾನಿಕವಾಗಿ ಪರಿಹಾರ ಕೊಡಿಸಬೇಕೆಂದು ಶಾಸಕರನ್ನು ಒತ್ತಾಯಿಸಿದರು.

      ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರವೀಂದ್ರನಾಥ, ಈಗ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಈಗಾಗಲೇ ತಹಶೀಲ್ದಾರ್, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾನಿ ಪರಿಶೀಲಿಸಿದ್ದು, ಸರ್ಕಾರಕ್ಕೆ ಏನು ವರದಿ ಕೊಡುತ್ತಾರೋ ನೋಡೋಣ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

       ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಶಿವರಾಜ ಪಾಟೀಲ್, ಧನಂಜಯ ಕಡ್ಲೇಬಾಳು, ಬಾತಿ ವೀರೇಶ, ವಿರೂಪಾಕ್ಷಪ್ಪ, ಬಸವರಾಜಪ್ಪ, ಬಿ.ಜಿ.ಸಿದ್ದೇಶ, ಬೇತೂರು ಸಂಗನಗೌಡ್ರು, ಎಲ್.ಎನ್.ಕಲ್ಲೇಶ, ಬೇತೂರು ರವಿ, ನಾಗಣ್ಣ, ಕಲ್ಪನಹಳ್ಳಿ ಉಜ್ಜಣ್ಣ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link