ಹೊನ್ನಾಳಿ:
ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 5.30ಕ್ಕೆ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಿವಿಧ ಹೂವುಗಳಿಂದ, ಪುಷ್ಪಮಾಲಿಕೆಗಳಿಂದ ರಥವನ್ನು ಭರ್ಜರಿಯಾಗಿ ಅಲಂಕರಿಸಲಾಗಿತ್ತು. ರಥಕ್ಕೆ ಮಂಡಕ್ಕಿ, ಮೆಣಸಿನಕಾಳು, ಬಾಳೆಹಣ್ಣು ಇತ್ಯಾದಿಗಳನ್ನು ಅರ್ಪಿಸುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ರಥಕ್ಕೆ ಅರ್ಪಿಸಿದ ಮೆಣಸಿನಕಾಳುಗಳನ್ನು ತಿಂದರೆ ಒಳ್ಳೆಯದು ಎನ್ನುವ ಭಾವನೆ ಭಕ್ತರಲ್ಲಿ ಇರುವ ಕಾರಣ ನೆಲದ ಮೇಲೆ ಬಿದ್ದ ಮೆಣಸಿನಕಾಳುಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಗ್ರಾಮದ ಪ್ರಮುಖ ಬೀದಿಯಲ್ಲಿ ರಥ ಹರಿಯಿತು.
ದೇವಸ್ಥಾನದ ಬಳಿ ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆಯಲು ಭಕ್ತರ ಮಧ್ಯೆ ಸ್ಪರ್ಧೆಯೇ ಏರ್ಪಟ್ಟಿತ್ತು. ರಥದ ಒಂದು ಭಾಗದ ಗಾಲಿಗಳಿಗೆ ಒಡೆದ ತೆಂಗಿನ ಕಾಯಿಯ ಹೋಳುಗಳನ್ನು ಗ್ರಾಮದ ಹರಿಜನರು ಹಾಗೂ ಇನ್ನೊಂದು ಭಾಗದ ಗಾಲಿಗಳಿಗೆ ಒಡೆದ ತೆಂಗಿನ ಕಾಯಿಯ ಹೋಳುಗಳನ್ನು ಗ್ರಾಮದ ನಾಯಕ ಜನಾಂಗದವರು, ರಥದ ಹಿಂದೆ ಮತ್ತು ಮುಂದೆ ಒಡೆದ ತೆಂಗಿನ ಕಾಯಿಯ ಹೋಳುಗಳನ್ನು ಗ್ರಾಮದ ಮಡಿವಾಳ ಜನಾಂಗದವರು ತೆಗೆದುಕೊಂಡು ಹೋಗುವುದು ವಾಡಿಕೆ. ಅದರಂತೆ ಅವರು ತೆಂಗಿನ ಕಾಯಿಯ ಹೋಳುಗಳನ್ನು ಸಂಗ್ರಹಿಸಿ ತೆಗೆದುಕೊಂಡು ಹೋದರು.ರಥೋತ್ಸವದ ಬಳಿಕ ಜವುಳ, ಮುದ್ರಾಧಾರಣೆ ಇತ್ಯಾದಿ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ 11ಕ್ಕೆ ಸಾಮೂಹಿಕ ವಿವಾಹ ಸಮಾರಂಭ ಜರುಗಿತು. 38 ಜೋಡಿ ನೂತನ ವಧು-ವರರು ದಾಂಪತ್ಯಕ್ಕೆ ಅಡಿ ಇಟ್ಟರು. ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ವ್ಯವಸ್ಥಾಪಕರು, ಬೇಲಿಮಲ್ಲೂರು ಗ್ರಾಮಸ್ಥರು, ಭಕ್ತರು ಇದ್ದರು.
ಏ. 10ರಂದು ಕಂಕಣ ಧಾರಣೆ ನಡೆಸಲಾಗಿತ್ತು. 11ರಂದು ಉಚ್ಚಾಯ ಮಹೋತ್ಸವ, 12ರಂದು ಬೆಳಿಗ್ಗೆ ಅಶ್ವೋತ್ಸವ, ಸಂಜೆ ಧೂಳೋತ್ಸವ, 13ರಂದು ಬೆಳಿಗ್ಗೆ ಗಜೋತ್ಸವಗಳು ನಡೆದಿದ್ದವು. ಸಂಜೆ ಕಳಸ ಸ್ಥಾಪನೆ ಮಾಡಲಾಗಿತ್ತು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಳ್ವಾಡಿ ದುರಂತದ ಹಿನ್ನೆಲೆಯಲ್ಲಿ ಭಕ್ತರಿಗೆ ವಿತರಿಸುವ ಮುನ್ನ ಪ್ರಸಾದವನ್ನು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪರೀಕ್ಷಿಸಿದರು.15ರಂದು ಬೆಳಿಗ್ಗೆ ಭೂತಸೇವೆ, ಸಂಜೆ 4ಕ್ಕೆ ಓಕುಳಿ ನಡೆಯಲಿದೆ.