ಬಳ್ಳಾರಿ
ರಾಜ್ಯದಲ್ಲಿ ನರೇಗಾ ಕಾಮಗಾರಿಗಳ ಅನುಷ್ಠಾನ ಅತ್ಯಂತ ಸಮರ್ಪಕವಾಗಿ ನಡೆಯುತ್ತಿದ್ದು, ರಾಜ್ಯದಲ್ಲಿಯೇ ಗಣಿನಾಡು ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ನರೇಗಾ ಯೋಜನೆಅಡಿ ಅಂತರ್ಜಲ ಚೇತನ ಯೋಜನೆ ಕಾಮಗಾರಿಗಳ ಪ್ರಾರಂಭೋತ್ಸವ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಈ ಮುಂಚಿನಂತೆ ಉದ್ಯೋಗ ಖಾತರಿ ಯೋಜನೆಗಳು ಜರುಗುತ್ತಿಲ್ಲ. ಈಗ ಬಂದು ಕೆಲಸ ಮಾಡಿದರೇ 15 ದಿನಗಳಲ್ಲಿ ಅವರವರ ಖಾತೆಗೆ ಹಣ ಬಂದುಬಿಳುತ್ತದೆ. ಕೂಲಿ ಹಣವನ್ನು ಕೂಡ ರೂ.249ರಿಂದ 275ಕ್ಕೆ ಹೆಚ್ಚಿಸಲಾಗಿದೆ ಮತ್ತು ಕೆಲಸಕ್ಕೆ ನಿರ್ಧಿಷ್ಟ ಗುರಿ ನಿಗದಿಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ನರೇಗಾ ಕೆಲಸದಲ್ಲಿ ಅತ್ಯಂತ ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ದಿ ಆರ್ಟ್ ಆಫ್ ಲಿವಿಂಗ್ ಜತೆಗೂಡಿ ರಾಜ್ಯದಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಮೂರು ವರ್ಷಗಳಲ್ಲಿಯೇ ಮೂವತ್ತು ವರ್ಷಗಳ ಹಿಂದಿನ ಅಂತರ್ಜಲ ಸ್ಥಿತಿಯನ್ನು ನಾವು ಕಾಣಲಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿಸುತ್ತಿರುವವರನ್ನು ಹೊರತುಪಡಿಸಿ ಯಾರೇ ಬಂದರೂ ಜಾಬ್‍ಕಾರ್ಡ್ ಕೊಟ್ಟು ಅವರಿಗೆ ಉದ್ಯೋಗ ಕೊಡುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ನರೇಗಾ ಅಡಿ ಬದು ನಿರ್ಮಾಣ ಮತ್ತು ಕೃಷಿಹೊಂಡಗಳ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗುರಿಯಿಟ್ಟುಕೊಳ್ಳಬೇಡಿ. ಯಾರು ಕೇಳುತ್ತಾರೆ ಅವರಿಗೆಲ್ಲ ಕೊಡಿ ಎಂದರು.
10662 ಹೆಕ್ಟೇರ್ ಬದು ನಿರ್ಮಾಣ: ಕಳೆದ ಎರಡು ತಿಂಗಳ ಅವಧಿಯಲ್ಲಿ 10662 ಹೆಕ್ಟೇರ್ ಬದುನಿರ್ಮಾಣ ಮತ್ತು 1163 ಕೃಷಿಹೊಂಡಗಳನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ಎಂದು ಜಿಪಂ ಸಿಇಒ ಕೆ.ನಿತೀಶ್ ಅವರು ಸಭೆಗೆ ವಿವರಿಸಿದರು.
ಈ ವರ್ಷ ಕೆರೆ ಹೂಳೆತ್ತುವುದನ್ನು ಸ್ಥಗಿತಗೊಳಿಸಿ ಬದುನಿರ್ಮಾಣ ಮತ್ತು ಕೃಷಿಹೊಂಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ವಿವರಿಸಿದ ಜಿಪಂ ಸಿಇಒ ಅವರು ಕಳೆದ ವರ್ಷ 32 ಕೋಟಿ ರೂ. ಖರ್ಚು ಮಾಡಿ 10533 ಹೆಕ್ಟೇರ್ ಬದುನಿರ್ಮಾಣ ಮತ್ತು 5 ಕೋಟಿ ರೂ.ವೆಚ್ಚದಲ್ಲಿ 1333ಕೃಷಿಹೊಂಡಗಳನ್ನು ನಿರ್ಮಾಣ ಮಾಡಲಾಗಿತ್ತು ಎಂದು ವಿವರಿಸಿದರು.
ಇದನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ ಅವರು ಈ ವರ್ಷ ಚೆನ್ನಾಗಿ ಮಾಡಿ ಮತ್ತು ಈಗಾಗಲೇ ನಿರ್ಮಾಣ ಮಾಡಲಾದ ಬದುಗಳಡಿ ಗಿಡಗಳನ್ನು ನೆಡಬೇಕು ಎಂದರು.ನಂತರ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಆಯುಕ್ತ ಅನಿರುದ್ಧಶ್ರವಣ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಶಾಸಕರಾದ ಸೋಮಲಿಂಗಪ್ಪ, ನಾಗೇಂದ್ರ, ಸೋಮಶೇಖರ ರೆಡ್ಡಿ, ಜಿಪಂ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
