ತುಮಕೂರು
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಬುಗುಡನಹಳ್ಳಿ ಗ್ರಾಮದಲ್ಲಿರುವ ಶಾಲೆಯಂತೆ ಹೈಟೆಕ್ ಶಾಲೆಯಾಗಿ ಅಭಿವೃದ್ದಿಪಡಿಸುವುದಾಗಿ ಶಾಸಕ ಡಿ ಸಿ ಗೌರೀಶಂಕರ್ ಭರವಸೆ ನೀಡಿದರು
ಬೆಳ್ಳಾವಿಯ ಸರ್ಕಾರಿ ಶಾಲೆಯಲ್ಲಿ ಆರಂಭವಾಗಿರುವ ನೂತನ ಆಂಗ್ಲ ಮಾಧ್ಯಮ ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಅಮೇರಿಕಾದಲ್ಲಿ ಸರ್ಕಾರದ ಒಡೆತನದಲ್ಲಿರುವ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಕರ್ನಾಟಕದ ಶಾಲೆಗಳನ್ನು ಉತ್ತಮಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿದೆ ಎಂದರು.
ಬೆಳ್ಳಾವಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತೀಕರಿಸಿ ಎಲ್ ಕೆ ಜಿ ಹಾಗೂ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ಸರ್ಕಾರ ಆದೇಶಿಸಿದೆ. ಇಲ್ಲಿನ ಎಲ್ ಕೆ ಜಿ ತರಗತಿಗೆ ಈಗಾಗಲೇ 183 ಅರ್ಜಿ ಬಂದಿವೆ ಒಂದನೇ 100 ಮಕ್ಕಳು ದಾಖಲಾಗಿದ್ದಾರೆ, ಸರ್ಕಾರ ನಿಗದಿಗೊಳಿಸಿರುವ ಮಿತಿಗಿಂತ ಹೆಚ್ಚಿನ ಬೇಡಿಕೆ ಬರುತ್ತಿದೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಮಿತಿಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ತಿಳಿಸಿದರು.
ಮಸ್ಕಲ್ ಶಾಲೆಯಲ್ಲಿ ಈಗಾಗಲೇ ಹಲವು ವರ್ಷಗಳಿಂದ ಆಂಗ್ಲ ಮಾಧ್ಯಮ ಶಾಲೆ ಚಾಲ್ತಿಯಲ್ಲಿದೆ, ನೇಮಕವಾಗಿರುವ ಹೆಚ್ಚುವರಿ ಶಿಕ್ಷಕರಿಗೆ ನಾನೇ ಸ್ವಂತ ವೇತನ ಭರಿಸುತ್ತಿದ್ದೇನೆ. ಬೆಳ್ಳಾವಿ ಕರ್ನಾಟಕ ಪಬ್ಲಿಕ್ ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಾಗಿ ಆಂಗ್ಲ ಭಾಷೆ ಬೋಧನೆಗೆ ಹೆಚ್ಚುವರಿ ಶಿಕ್ಷಕರ ಅಗತ್ಯತೆ ಕಂಡುಬಂದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಿ ನಾನೇ ವೇತನ ಪಾವತಿಸುತ್ತೇನೆ, ಮಕ್ಕಳ ಭವಿಷ್ಯ ಮುಖ್ಯ ಎಂದರು
ಮೂವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ಪದವಿ ಕಾಲೇಜು ಬೆಳ್ಳಾವಿ ಗ್ರಾಮಕ್ಕೆ ಮಂಜೂರಾಗಿದೆ, ಈಗಿರುವ ಕೋರ್ಸ ಜೊತೆಗೆ ಹೆಚ್ಚುವರಿ ಕೋರ್ಸ ಆರಂಭಸಲಾಗುವುದು, ಕಾಲೇಜು ಕಟ್ಟಡ ನಿರ್ಮಾಣಕ್ಕೆ 5 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಲೋಕೋಪಯೋಗಿ ಮಂತ್ರಿಗಳು ಈಗಾಗಲೇ ಕಾಲೇಜು ಕಟ್ಟಡ ನಿರ್ಮಾಣಕ್ಕೆ 2 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಶಾಸಕರು ಹೇಳಿದರು.
ಪದವಿ ಪೂರ್ವ ಕಾಲೇಜು ಕಟ್ಟಡ ಶಿಥಿಲವಾಗಿದೆ, ಕಟ್ಟಡ ದುರಸ್ತಿಗಾಗಿ ಸರ್ಕಾರದಿಂದ 1 ಕೋಟಿ ಅನುದಾನ ಮಂಜೂರಾಗಿದೆ ಮುಂದಿನ ಶೈಕ್ಷಣಿಕ ಸಾಲಿನಿಂದ ಪದವಿಪೂರ್ವ ಕಾಲೇಜಿನಲ್ಲಿ ಪಿ ಸಿ ಎಂ ಬಿ ತರಗತಿಗಳು ಆರಂಭವಾಗಲಿವೆ ಎಂದರು ಶಾಸಕನಾಗಿ ಆಯ್ಕೆಯಾದ ಒಂದೇ ವರ್ಷದಲ್ಲಿ ಕ್ಷೇತ್ರದ ಅಭಿವೃದ್ದಿಗೆ 320 ಕೋಟಿ ಅನುದಾನ ತಂದಿದ್ದೇನೆ ನಾನು ಕೊಟ್ಟ ಭರವಸೆ ಐದು ವರ್ಷದ ಅವಧಿಯಲ್ಲಿ ಈಡೇರಿಸದಿದ್ದರೆ ರಾಜಾ ರೋಷವಾಗಿ ಪ್ರಶ್ನಿಸಿ, ನಿಮ್ಮಗಳ ಅಭ್ಯುದಯಕ್ಕೆ ನಾನು ಬದ್ದ ಎಂದರು.
ಸೋರೇಕುಂಟೆ ಭಾಗದಲ್ಲಿ ಸರ್ಕಾರಿ ನೌಕರಿಯಲ್ಲಿವವರಿಗೆ, ಬೇರೆ ತಾಲ್ಲೂಕುಗಳ ರೈತರಿಗೆ, ಶ್ರೀಮಂತರಿಗೆ ಬಗರ್ ಹುಕುಂ ಜಮೀನುಗಳನ್ನು ತಹಶೀಲ್ದಾರ್ ಮಂಜೂರು ಮಾಡಿದ್ದು ಬಡವರಿಗೆ ಅನ್ಯಾಯ ಮಾಡಲಾಗಿದೆ,ಈ ಪಟ್ಟಿ ಅನೂರ್ಜಿತ ಮಾಡುವಂತೆ ಡಿಸಿಗೆ ಮನವಿ ಮಾಡಿದ್ದೇನೆ ತಹಶೀಲ್ದಾರ್ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ತಿಳಿಸಿದ್ದೇನೆ ಎಂದರು
ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ, ಬೆಸ್ಕಾಂ ಸೆಕ್ಷನ್ ಆಫೀಸರ್ ಗೋವಿಂದರಾಜು, ಪ್ರಾಂಶುಪಾಲ ಉಮೇಶ್, ಪಿಡಿಒ ರೇಣುಕಾ, ಜೆಡಿಎಸ್ ಹಿರಿಯ ಮುಖಂಡ ಕೆಂಪನರಸಯ್ಯ, ಮಲ್ಲಿಕಾರ್ಜುನ್, ಮಂಜುನಾಥ್, ಎಸ್ ಡಿ ಎಂ ಸಿ ಅಧ್ಯಕ್ಷ ಉರ್ಮತ್, ಎ ಪಿ ಎಂ ಸಿ ಸದಸ್ಯ ಪ್ರಭಾಕರ್ ಉಪಸ್ಥಿತರಿದ್ದರು.