ಹೊನ್ನಾಳಿ:
ಆಕಸ್ಮಿಕ ಅಗ್ನಿ ಅನಾಹುತದಿಂದ ಸುಮಾರು 50 ಸಾವಿರ ರೂ.ಗಳಷ್ಟು ಮೌಲ್ಯದ ಭತ್ತದ ಹುಲ್ಲು ನಾಶವಾಗಿರುವ ದುರ್ಘಟನೆ ತಾಲೂಕಿನ ದಿಡಗೂರು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ದಿಡಗೂರು ಗ್ರಾಮದ ರೈತ ಎಂ. ಬಸಪ್ಪ ತಮ್ಮ ಕಣದಲ್ಲಿ ಸುಮಾರು ಐದು ಲೋಡ್‍ಗಳಷ್ಟು ಭತ್ತದ ಹುಲ್ಲನ್ನು ಬಣವೆ ಹಾಕಿಕೊಂಡಿದ್ದರು. ಗುರುವಾರ ಮಧ್ಯಾಹ್ನ ಬಣವೆಗೆ ಬೆಂಕಿ ಬಿದ್ದಿರುವ ವಿಷಯ ಗೊತ್ತಾಗಿದೆ. ತಕ್ಷಣ ಗ್ರಾಮಸ್ಥರು ಹೊನ್ನಾಳಿಯ ಅಗ್ನಿಶಾಮಕ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆದರೆ, ಭತ್ತದ ಹುಲ್ಲು ಮಾತ್ರ ಸಂಪೂರ್ಣ ನಾಶವಾಗಿದೆ.
ಜಾನುವಾರುಗಳಿಗೆ ವರ್ಷ ಪೂರ್ತಿ ಹುಲ್ಲು ಬೇಕು. ಹೇಗೋ ಹಣ ಹೊಂದಿಸಿ ಭತ್ತದ ಹುಲ್ಲನ್ನು ಸಂಗ್ರಹಿಸಿದ್ದೆವು. ಈಗ ಜಾನುವಾರುಗಳ ಹುಲ್ಲಿಗಾಗಿ ಏನು ಮಾಡುವುದು ಎಂದು ದಿಕ್ಕುತೋಚದಂತಾಗಿದೆ ಎಂಬುದಾಗಿ ರೈತ ಎಂ. ಬಸಪ್ಪ ತಮ್ಮ ಅಳಲು ತೋಡಿಕೊಂಡರು.