ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಪ್ರಾಣದ ಅಪಾಯವನ್ನು ಲೆಕ್ಕಿಸದೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಬೆಸ್ಕಾಂ ಇಲಾಖೆಯಶಸ್ಸಿಯಾಗಿದೆ. ಇಲಾಖೆಯ ಸಿಬ್ಬಂದಿ ವರ್ಗ ಸದಾಕಾಲ ಸಾರ್ವಜನಿಕರ ಸೇವೆಯನ್ನು ಮಾಡುವ ಮೂಲಕ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದು, ಸಿಬ್ಬಂದಿ ವರ್ಗ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಬೆಸ್ಕಾಂ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಿ.ಕೆ.ಸುಭಾಷ್‍ಚಂದ್ರ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ಬೆಸ್ಕಾಂ ಇಲಾಖೆಯಲ್ಲಿ ಹಿರಿಯೂರು ಮತ್ತು ಚಳ್ಳಕೆರೆ ಉಪವಿಭಾಗಗಳ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ಕಾರ್ಮಿಕ ನೌಕರರ ಸುರಕ್ಷಿತ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಮಾಸಿಕ ಸುರಕ್ಷತಾ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಬೆಸ್ಕಾಂಇಲಾಖೆಯ ಪ್ರತಿಯೊಬ್ಬ ನೌಕರರನು ಸಹ ನಮ್ಮ ಇಲಾಖೆಯ ಸಂಪತ್ತು ಆಗಿದ್ದು, ಅವನನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಇಲಾಖೆ ಸುರಕ್ಷತೆ ಸಪ್ತಾಹವನ್ನು ಹಮ್ಮಿಕೊಳ್ಳುವ ಮೂಲಕ ನೌಕರರನ್ನು ಜಾಗೃತಿಗೊಳಿಸುತ್ತಿದೆ ಎಂದರು.
ಜಿಲ್ಲಾ ಕಾರ್ಯನಿರ್ವಹಣಾಕ ಅಭಿಯಂತರ ಮಹಮ್ಮದ್ ಸಾಹೇಬ್ ಮಾತನಾಡಿ, ಸಾಮಾನ್ಯವಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಿಬ್ಬಂದಿ ವರ್ಗ ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯೆ ವಹಿಸುವುದು ಸ್ವಾಭಾವಿಕ. ಇಲಾಖೆಯ ಸಿಬ್ಬಂದಿ ತನ್ನ ಎಲ್ಲಾ ಸಂಕಷ್ಟಗಳನ್ನು ಬದಿಗೊತ್ತಿ ಇಲಾಖೆಯ ಕಾರ್ಯನಿರ್ವಹಿಸುತ್ತಾನೆ. ಅವನದೇಯಾದ ಕುಟುಂಬದ ಜವಾಬ್ದಾರಿ ಇರುತ್ತದೆ. ಈ ಸಂದರ್ಭದಲ್ಲಿ ಬೆಸ್ಕಾಂ ಎಲ್ಲಾ ಸಿಬ್ಬಂದಿ ವರ್ಗ ಅನುಸರಿಸಲೇ ಬೇಕಾದ 12 ಅಂಶಗಳನ್ನು ನಿಮಗೆ ತಿಳಿಸಿದ್ದು, ಪ್ರತಿನಿತ್ಯವೂ ಕರ್ತವ್ಯದಲ್ಲಿ ಅದನ್ನು ಪಾಲಿಸುವಂತೆ ಮನವಿ ಮಾಡಿದರು.
ಪ್ರಾರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಶಿವಪ್ರಸಾದ್, ಪ್ರಸ್ತುತ ಸ್ಥಿತಿಯಲ್ಲಿ ನಮ್ಮ ಇಲಾಖೆ ಎಲ್ಲರಿಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಇಲಾಖೆಯ ಸಿಬ್ಬಂದಿ ವರ್ಗ ರಕ್ಷಣೆಗೆ ಆದ್ಯತೆ ನೀಡಬೇಕಿದೆ. ಯಾವುದೇ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದಲ್ಲಿ ಅಪಾಯವನ್ನು ತಾನೇ ಮೈಮೇಲೆ ಹಾಕಿಕೊಂಡಂತೆ. ಅದ್ದರಿಂದ ನೀವು ಜಾಗೃತರಾಗಬೇಕು, ನಿಮ್ಮ ಕುಟುಂಬವನ್ನು ಸಹ ಸಂರಕ್ಷಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಿ.ಚಿಕ್ಕಣ್ಣ, ತಿಮ್ಮಣ್ಣ, ತಿಮ್ಮರಾಯ, ಲೆಕ್ಕಾಧಿಕಾರಿ ಪ್ರಭುದೇವ್ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ