ಭದ್ರಾ ಕಾಲುವೆ ಹೂಳು ತೆಗೆಸಲು ಎಸ್‍ಎಆರ್ ಆಗ್ರಹ

ದಾವಣಗೆರೆ :

    ಭದ್ರಾ ಬಲದಂಡೆ ಮುಖ್ಯ ಕಾಲುವೆ ಅಚ್ಚುಕಟ್ಟಿನ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಪೂರೈಸಲು ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಸಬೇಕೆಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಎಸ್.ಎ.ರವೀಂದ್ರನಾಥ ಆಗ್ರಹಿಸಿದ್ದಾರೆ.

    ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದರೂ ಬಲದಂಡೆ ಮುಖ್ಯ ಕಾಲುವೆ ಅಚ್ಚುಕಟ್ಟಿನ ಕೊನೆಯ ಭಾಗಗಳಾದ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಪೂರೈಸದ ಕಾರಣ ಬೆಳೆಗಳು ಒಣಗಿದ್ದು, ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

     ನೀರಾವರಿ ಇಲಾಖೆ ಅಧಿಸೂಚನೆಯಂತೆ ಕಾಲುವೆಗಳ ಮೂಲಕ ರೊಟೇಷನ್ ಪದ್ಧತಿಯಲ್ಲಿ ನೀರನ್ನು ಪೂರೈಸಬೇಕಾಗಿದೆ. ಕಾಲುವೆಗಳಲ್ಲಿ ಹೂಳು ತುಂಬಿರುವುದರಿಂದ ಸರಾಗವಾಗಿ ನೀರು ಮುಂದಕ್ಕೆ ಹರಿಯದ ಕಾರಣಕ್ಕೆ ಕೊನೆ ಭಾಗದ ರೈತರಿಗೆ ನೀರನ್ನು ಪೂರೈಸಲಾಗದ ಸ್ಥಿತಿ ಇದೆ. ಇದರಿಂದ ರೈತರು ಬೆಳೆಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

      ಅಚ್ಚುಕಟ್ಟು ವ್ಯಾಪ್ತಿಯ ಮೂರೂ ತಾಲೂಕುಗಳ ಕೊನೆ ಭಾಗಕ್ಕೆ ಸಮರ್ಪಕ ನೀರು ಪೂರೈಸಬೇಕಾದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆಸುವ ಅವಶ್ಯಕತೆ ಇದೆ. ಸದ್ಯ ಕಾಲುವೆಯಲ್ಲಿ ಇನ್ನೂ 45 ದಿನಗಳ ಕಾಲ ನೀರು ಹರಿಸದ ಹಿನ್ನೆಲೆಯಲ್ಲಿ ಕಾಲುವೆಗಳೂ ಒಣಗಿವೆ. ಈ ಸಂದರ್ಭದಲ್ಲಿ ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆಸಲು ಸುಲಭವಾಗುತ್ತದೆ. ಆದ್ದರಿಂದ ತಕ್ಷಣವೇ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ ಕಾಲುವೆಗಳ ಹೂಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು. ಮುಂದಿನ ಬೆಳೆಗಾದರೂ ಕಡೇ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.

ಭದ್ರಾ ನಾಲೆಗೆ ನೀರು ಹರಿಸಿ:

      ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಕುಡಿಯುವ ನೀರಿನ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಭದ್ರಾ ನಾಲೆಗೆ ನೀರು ಹರಿಸಬೇಕೆಂದು ಆಗ್ರಹಿಸಿರುವ ರವೀಂದ್ರನಾಥ್, ಜಿಲ್ಲಾ ಕೇಂದ್ರಕ್ಕೆ ಕುಡಿಯುವ ನೀರು ಪೂರೈಸಲು ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆಗಳಲ್ಲಿ ನೀರು ಸಂಗ್ರಹಿಸಿದ್ದು ಖಾಲಿಯಾಗಿದ್ದು, ಈವರೆಗೆ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲವೂ ಕ್ಷೀಣಿಸಿದ್ದು, ಕೊಳವೆ ಬಾವಿಗಳೂ ಬತ್ತಿ ಹೋಗಿವೆ.

      ಆದ್ದರಿಂದ ಕುಡಿಯುವ ನೀರು ಪೂರೈಸಲು ಕಷ್ಟಸಾಧ್ಯವಾಗಿದೆ. ಹೀಗಾಗಿ ತಕ್ಷಣವೇ ದಾವಣಗೆರೆ ಜನತೆಗೆ ಕುಡಿಯುವ ನೀರು ಪೂರೈಸಲು ತುರ್ತಾಗಿ ಭದ್ರಾ ಅಣೆಕಟ್ಟೆಯಿಂದ 500 ಕ್ಯೂಸೆಕ್ಸ್ ನೀರನ್ನು ಭದ್ರಾ ನಾಲೆಗೆ ಬಿಡುಗಡೆ ಮಾಡಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅವರು ನೀರಾವರಿ ಸಚಿವರನ್ನು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link