ಜಗಳೂರು:
ಹದಿನೈದು ದಿನಗಳೊಳಗಾಗಿ ರಾಜ್ಯಮಟ್ಟದ ಎಲ್ಲಾ ಅಧಿಕಾರಿಗಳನ್ನು ಕರೆಸಿ ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿಗೆ ಒಂದೇ ಹಂತದಲ್ಲಿ ನಿರ್ಧಾರ ತೆಗೆದುಕೊಂಡು ಇತ್ಯರ್ಥಪಡಿಸದಿದ್ದರೆ ಬೆಂಗಳೂರು ಚಲೋ ಹಮ್ಮಿಕೊಂಡು ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಸ್.ವಿ ರಾಮಚಂದ್ರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಜೂ.3 ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆ ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನೀರಾವರಿ ಮುಖ್ಯ ಇಂಜಿನಿಯರ್ ಹೇಳಿ ಹೋದರೆ ಕೆಲಸವಾಗುವುದಿಲ್ಲ. ಇಂತಹ ನೂರು ಸಭೆಗಳು ನಡೆದರೂ ಭದ್ರೆ ನೀರು ಹರಿಯುವುದಿಲ್ಲ. ಒಂದು ಹಂತದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು. ಅಲ್ಲದೇ ತಾಲೂಕಿಗೆ ಬರಬೇಕಾದ 2.40 ಟಿಎಂಸಿ ನೀರು ಹಾಗೂ ಮೂಲ ಮಾರ್ಗವಾಗಿ ಸಂಗೇನಹಳ್ಳಿ ಕೆರೆ ತುಂಬಿಸಿ ಅಲ್ಲಿಂದ ಜಗಳೂರಿಗೆ ಬರಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲಾಧಿಕಾರಿ ಶಿವಮೂರ್ತಿ ಮಾತನಾಡಿ, ಬರಪೀಡಿತ ತಾಲೂಕಿಗೆ ನೀರು ಬಂದರೆ ರೈತರಿಗೆ ಅನುಕೂಲವಾಗುತ್ತದೆ. ಅಪ್ಪರ್ ಭದ್ರಾದಿಂದ 2.40 ಟಿಎಂಸಿ ಬಿಡುಗಡೆಯಾಗಬೇಕು. ಸಮಿತಿಯನ್ನು ಮುಂದುವರಿಸಬೇಕು ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಇಂಜಿನಿಯರ್ ಅಥವಾ ಅಧಿಕಾರಿಗಳಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. ಸರ್ಕಾರದಿಂದಲೇ ಬಗೆಹರಿಯಬೇಕಾಗಿದೆ. ಜಿಲ್ಲಾಡಳಿತ ನಿಮ್ಮೊಂದಿಗೆ ಯಾವಾಗಲು ಇರುತ್ತದೆ ಪ್ರತಿಭಟನೆ, ಬಂದ್‍ಗಳು ಶಾಂತಿಯುತವಾಗಿ ನಡೆಸಬೇಕು ಕಾನೂನು ಉಲ್ಲಂಘನೆ ಮಾಡಬಾರದು ಎಂದು ಸಲಹೆ ನೀಡಿದರು.
ನೀರಾವರಿ ಮುಖ್ಯ ಇಂಜಿನಿರ್ ಶಿವಕುಮಾರ್ ಮಾತನಾಡಿ, ಆಂಧ್ರ ಪ್ರದೇಶದವರು ಕೋಲಾರದ ಮೂಲಕ ಡೈವೆಶನ್ ಮಾಡಿದ್ದರಿಂದ ಹೆಚ್ಚುವರಿಯಾಗಿ 29 ಟಿಎಂಸಿ ನೀರು ಸಿಕ್ಕಿದ್ದರಿಂದ 2.40 ಟಿಎಂಸಿ ನೀರು ಜಗಳೂರು ತಾಲೂಕು ಮತ್ತು ಪಾವಗಡಕ್ಕೆ ಕೊಡಲು ನಿರ್ಧರಿಸಲಾಯಿತು. ಚಿತ್ರದುರ್ಗ ಜಿಲ್ಲೆಯ ಮೂಲಕವಾಗಿ ಜಗಳೂರಿಗೆ ನೀರು ಕೊಡಬೇಕಾಯಿತು. ಸರ್ವೇ ಮಾಡುವ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದವು.
ಸಂಗೇನಹಳ್ಳಿ ಕೆರೆಯಿಂದ 6 ಕಿ.ಮೀ ದೂರ 40 ಮೀ ಎತ್ತರದಿಂದ ಜಗಳೂರಿಗೆ ನೀರು ತರಲು ಕಷ್ಟವಾಗಿದ್ದರಿಂದ ಕಾತ್ರಾಳ್ ಮಾರ್ಗವಾಗಿ ತರಲು ನಿರ್ಧರಿಸಲಾಯಿತು. 2.40 ಟಿಎಂಸಿ ನೀರು ಮತ್ತು ಬೆಳಗಟ್ಟದಿಂದ ಸಂಗೇನಹಳ್ಳಿ ಕೆರೆಗೆ ನೀರು ತರುವ ಬೇಡಿಕೆ ಇದೆ. ಇದನ್ನು ಅಧ್ಯಾಯನ ಮಾಡಿ ನೀರು ಕೊಡುವ ಅವಕಾಶ ಇದ್ದರೆ ಸರ್ಕಾರಕ್ಕೆ ತಾಂತ್ರಿಕ ವರದಿಯನ್ನು ಕಳಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಪಥ ಬದಲಾಯಿಸದಂತೆ ಪಟ್ಟು:
ಸಭೆಯಲ್ಲಿ ಬೆಳಗಟ್ಟ ಮಾರ್ಗದಿಂದ ಸಂಗೇನಹಳ್ಳಿ ಕೆರೆಯಲ್ಲಿ ನೀರು ತುಂಬಿಸಿ ಅಲ್ಲಿಂದ ಜಗಳೂರಿಗೆ ನೀರು ತರಬೇಕು. ಕಾತ್ರಾಳ್ ಮಾರ್ಗವಾಗಿ ನೀರು ಬಂದರೆ ಬಿಡುವುದಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಮಾಡುವಂತಿಲ್ಲವೆಂದು ಹೋರಾಟಗಾರರು, ರೈತರು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಬಂದ್ ವಾಪಾಸ್ ಪಡೆಯಲ್ಲಾ:
ನೀರಾವರಿ ಹೋರಾಟ ಸಮಿತಿಯವರು ಹಮ್ಮಿಕೊಂಡಿರುವ ಜೂ.3ರಂದು ರಾಷ್ಟ್ರೀಯ ಹೆದ್ದಾರಿ 13 ಬಂದ್‍ನ್ನು ಹಿಂಪಡೆದು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ರಸ್ತೆ ಬಂದ್‍ನಿಂದ ವಾಹನ ಸವಾರರಿಗೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಹೆಚ್ಚುವರಿ ಎಸ್ಪಿ ಉದೇಶ್ ಸಭೆಯಲ್ಲಿ ತಿಳಿಸಿದರು. ಯಾವುದೇ ಕಾರಣಕ್ಕೂ ಬಂದ್ ವಾಪಸ್ಸು ಪಡೆಯುವುದಿಲ್ಲ. ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ರೈತರು ಉತ್ತರಿಸಿದರು. ಇದರಿಂದ ಕೆಲ ನಿಮಿಷ ಗೊಂದಲ ಉಂಟಾಯಿತು.
4 ತಾಸು ತಡವಾಗಿ ಆಗಮಿಸಿದ ಡಿ.ಸಿ:
ಬೆಳಗ್ಗೆ 10ಕ್ಕೆ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ಶಿವಮೂರ್ತಿ ವಿವಿಧ ಕಾರ್ಯಕ್ರಮಗಳ ನಿಮಿತ್ತವಾಗಿ ಸುಮಾರು 4 ತಾಸು ತಡವಾಗಿ ಆಗಮಿಸಿದರು. ಆದರೂ ರೈತರು ಕದಲದೇ ಬರುವವರೆಗೂ ಕಾದು ಸಭೆಯನ್ನು ಯಶಸ್ಸುಗೊಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ನಾಗರಾಜ್ ಐತಾಳ್, ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ಸಿಪಿಐ ಪ್ರವೀಣ್ ನೀಲಮ್ಮನವರ್, ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ , ಹೋರಾಟ ಸಮಿತಿ ಕಾರ್ಯದರ್ಶಿ ಆರ್. ಓಬಳೇಶ್, ಪದಾಧಿಕಾರಿಗಳಾದ ನಾಗಲಿಂಗಪ್ಪ, ಕೆ.ಟಿ ವೀರಸ್ವಾಮಿ, ಲಿಂಗರಾಜ್, , ಚಿರಂಜೀವಿ ಸೇರಿದಂತೆ ಮತ್ತಿತರಿದ್ದರು.