ಹಿರಿಯೂರು
ಜಿಲ್ಲೆಯಲ್ಲಿ ನೀರಾವರಿಗಾಗಿ ಕಳೆದ 30ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ತಾತ್ಕಾಲಿಕವಾಗಿರದೆ ಇದೊಂದು ಶಾಶ್ವತ ಯೋಜನೆಯಾಗಿ ಈ ಜಿಲ್ಲೆಗೆ ಒಂದಿಷ್ಟು ಜೀವ ತುಂಬುವ ಕೆಲಸ ಆಗಬೇಕೆಂಬ ಹಕ್ಕೊತ್ತಾಯವನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಮಾಡಿದರು.
ವಿವಿಧ ಮಠಾಧೀಶರು, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರರು, ಅಧಿಕಾರಿಗಳು, ರೈತ ಮುಖಂಡ ರೊಂದಿಗೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರಕ್ಕೆ ಭೇಟಿ ನೀಡಿದ ಬಳಿಕ ಶ್ರೀಗಳು ಮಾತನಾಡಿದರುಶ್ರೀಮಠಕ್ಕೆ ಯಾರೇ ಮುಖ್ಯಮಂತ್ರಿಗಳು ಬಂದರೂ ಈ ಜಿಲ್ಲೆಗೆ ಜಲಭಿಕ್ಷೆ ಕೇಳುತ್ತ ಬರಲಾಗಿದೆ. ವಿಧಾನಸೌಧಕ್ಕೆ ಹೋಗಿ ಭದ್ರೆ ನೀರು ಹರಿಸಲು ಬಜೆಟ್‍ನಲ್ಲಿ ಹಣ ಮೀಸಲಿಡಿ ಎಂದು ಕೇಳಿದ್ದೇವೆ. ಯಡಿಯೂರಪ್ಪನವರು ಮೊದಲು ಮುಖ್ಯಮಂತ್ರಿಯಾಗಿದ್ದಾಗ ಭದ್ರೆಗೆ ಚಾಲನೆ ಕೊಟ್ಟರು. ಈ ಮೊದಲು ಬೆಳಗಾವಿ ಅಧಿವೇಶನದಲ್ಲಿ ನೂರಾರು ಸ್ವಾಮಿಗಳು ಧರಣಿ ನಡೆಸಿದ್ದೆವು ಎಂದು ತಿಳಿಸಿದರು.
ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಜಿಲ್ಲೆಯ ನೀರಿಗಾಗಿ ನಾವು ಜೈಲನ್ನು ನೋಡಿದೆವು. ನಮ್ಮನ್ನು ದ್ವಂದ್ವಕ್ಕೆ ಜನಪ್ರತಿನಿಧಿಗಳು ದೂಡುತ್ತಿದ್ದಾರೆ. ಈಗ ಬಂದಿರುವ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಮುರುಘಾ ಶರಣರು ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಚರ್ಚಿಸಿದ್ದಾರೆ ಎಂದರು.
ಹೊಸದುರ್ಗದ ಡಾ. ಶಾಂತವೀರ ಸ್ವಾಮಿಗಳು ಮಾತನಾಡಿ, ನಮಗೆ ಬಿಟ್ಟಿರುವ ನೀರು ಅವೈಜ್ಞಾನಿಕವಾಗಿದ್ದು, ನಮ್ಮನ್ನು ತೃಪ್ತಿಪಡಿಸಲು ಬಂದಿರುವ ನೀರು. ಕಾಮಗಾರಿ ನಿಂತಿದ್ದು ಮತ್ತೆ ಚಾಲನೆ ನೀಡಬೇಕಿದೆ. ಈ ಮೊದಲು ಮುರುಘಾಮಠ 50 ಸಾವಿರ ನೀಡಿ ಭದ್ರಾ ಯೋಜನೆಗೆ ಚಾಲನೆ ನೀಡಲು ಜನರ ಖರ್ಚುವೆಚ್ಚವನ್ನು ಶ್ರೀಮಠ ನೋಡಿಕೊಂಡಿತು. ಮುರುಘಾಮಠ ಹಾಗು ಶಿಷ್ಯಪರಂಪರೆ, ರೈತರ ಪ್ರಯತ್ನದಿಂದ ಇಂದು ಭದ್ರಾ ನೀರು ಬರುವಂತಾಗಿದೆ ಎಂದು ಸ್ಮರಿಸಿದರು.
ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮಿಗಳು ಮಾತನಾಡಿ, ಕಾಮಗಾರಿಗಳು ವಿಳಂಬವಾಗುತ್ತಿವೆ. ಇಲ್ಲಿನ ರೈತರ ಬದುಕು ಕಷ್ಟವಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಭದ್ರಾ ನೀರು ಕಾಲಮಿತಿಯೊಳಗೆ ಬರಲು ರಾಜಕಾರಣಿಗಳು ಬದ್ಧತೆಯಿಂದ ಶ್ರಮಿಸಬೇಕಿದೆ ಎಂದರು.
ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಭದ್ರಾ ವಿಚಾರವಾಗಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಮೊದಲ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಮಾರ್ಚ್ 31ರವರೆಗೆ ನೀರು ಹರಿಸಲು ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿಗಳು ನೀರು ಹರಿಸಲು ಸಂಪೂರ್ಣ ಬೆಂಬಲ ನೀಡಿದ್ದಾರೆ. ತುಂಗ ಮತ್ತು ಭದ್ರಾ ಕಾಮಗಾರಿಗಳು ಶೇ. 50ರಷ್ಟು ಮುಗಿದಿವೆ. ಭವಿಷ್ಯದ ಮಕ್ಕಳಿಗೆ ನೀರನ್ನು ಕೊಡಬೇಕಿದೆ ಎಂದರು.
ಇಂಜಿನಿಯರ್ ಚಂದ್ರಹಾಸ್ ಮಾತನಾಡಿ, ಜಲಾಶಯದ ಸಾಮಥ್ರ್ಯ 130 ಅಡಿ ಇದ್ದು, 30 ಟಿಎಂಸಿ ನೀರು ಶೇಖರಿಸಲು ಸಾಧ್ಯವಿದೆ. ಸಧ್ಯ 68.2 ಅಡಿ (3.5 ಟಿಎಂಸಿ) ನೀರು ಇದೆ. ಭದ್ರಾ ಡ್ಯಾಂನಿಂದ 3ನೇ ತಾರೀಕಿನಿಂದ 1 ಮೋಟಾರ್ ಚಾಲು ಆಗಿದ್ದು ಮತ್ತು ಮಳೆ ನೀರು ಸೇರಿ ಇದೂವರೆಗೆ 2.1 ಟಿಎಂಸಿ ನೀರು ಬಂದಿದೆ. ಪ್ರತಿನಿತ್ಯ 850 ಕ್ಯುಸೆಕ್ಸ್ ವಾಟರ್ ಈಗ ಭದ್ರಾ ಹಾಗು ಮಳೆಯಿಂದ ಬರುತ್ತಿದೆ ಎಂದು ಮಾಹಿತಿ ನೀಡಿದರು.
ರೈತಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಭದ್ರಾ ಯೋಜನೆ ಏನೆಂದು ಗೊತ್ತಿರಲಿಲ್ಲ. ಆದರೆ ಮುರುಘಾ ಶರಣರು, ಇತರೆ ಮಠಾಧೀಶರ ಪ್ರಯತ್ನದಿಂದ, ಶಾಸಕರು, ರೈತರು ಮೊದಲಾದವರ ಬೆಂಬಲದಿಂದ ಇಂದು ನೀರು ಬರಲು ಕಾರಣವಾಯಿತು. ಇನ್ನು ಮುಂದೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ರೈತರಿಗೆ ಮೊದಲು ನೀರು ಕೊಡುವುದು ಸರ್ಕಾರದ ಉz್ದÉೀಶವಾಗಬೇಕು ಎಂದರು.
ಮತ್ತೋರ್ವ ಮುಖಂಡ ಸಿದ್ರಾಮಣ್ಣ ಮಾತನಾಡಿ, ರೈತ ಜೀವನ ಮಾಡುವುದು ಕಷ್ಟವಾಗಿದೆ. ನಮ್ಮಲ್ಲಿ ಫಲವತ್ತತೆಯೂ ಕಡಿಮೆಯಾಗಿದೆ. ತುರ್ತಾಗಿ ಭದ್ರಾ ಮತ್ತು ತುಂಗಾ ಕೆಲಸ ಆಗಬೇಕಬೇಕೆಂದು ಒತ್ತಾಯಿಸಿದರು.ಸಿದ್ಧವೀರಪ್ಪ ಮಾತನಾಡಿ, ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ತಮಿಳುನಾಡು, ಆಂಧ್ರದವರ ನೀರಾವರಿ ವ್ಯವಸ್ಥೆಯನ್ನು ನೋಡಬೇಕಿದೆ.
ಗಂಭೀರವಾದ ಸಮಸ್ಯೆಗಳಿವೆ. ಭದ್ರಾ ಮೇಲ್ದಂಡೆ ನೀರು ಪೂರ್ಣವಾಗಿ ಹರಿಯಬೇಕೆಂದರೆ ಇನ್ನು 3 ವರ್ಷ ಬೇಕಿದೆ. 29.9 ಟಿಎಂಸಿ ನೀರು ನಿರ್ಬಂಧಿತ ನೀರು. ಇದಲ್ಲದೆ ಬೇರೆ ಜಲ ಮೂಲಗಳನ್ನು ಹುಡಕಬೇಕಿದೆ. ಸ್ವಾಮಿಗಳು ಸರ್ಕಾರಕ್ಕೆ ಬೆತ್ತ ಹಿಡಿದುಕೊಂಡು ಕೆಲಸ ಮಾಡಿಸಬೇಕಿದೆ. ವೇದಾವತಿ ನೀರಿನ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದರು.
ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳು ಮಾತನಾಡಿದರು. ಶ್ರೀ ಇಮ್ಮಡಿ ಬಸವ ಮೇದಾರ ಕೇತಯ್ಯ ಸ್ವಾಮಿಗಳು, ಶ್ರೀ ಬಸವ ಕಿರಣ ಸ್ವಾಮಿಗಳು, ಶ್ರೀ ತಿಪ್ಪೇರುದ್ರಸ್ವಾಮಿಗಳು, ಶ್ರೀಮತಿ ದೇವಿಕುಮಾರಿ, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ದರ್ಶನ್, ಬಸವರಾಜ್, ನಿಂಗಪ್ಪ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ