ಬೆಂಗಳೂರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಾವಿಗೆ ಬೈರತಿ ಸುರೇಶ್ ಕಾರಣ ಎಂಬ ಮಾಜಿ ಸಚಿವ, ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರ ಆರೋಪವನ್ನು ತಳ್ಳಿಹಾಕಿರುವ ಬೈರತಿ ಸುರೇಶ್, ರಾಕೇಶ್ ಸಾವಿನ ಬಗ್ಗೆ ಮೂರನೇ ವ್ಯಕ್ತಿಗೆ ಮಾತನಾಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಕೇಶ್ ನನಗೆ ತಮ್ಮನ ಸಮಾನ. ಅವನ ಸಾವಿಗೆ ತಾವು ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಕ್ಕಾಗಿ ಹತಾಶೆಗೊಂಡಿರುವ ಎಂಟಿಬಿ ಇಂತಹ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿದಂತಾಗಿದೆ ಎಂದು ಬೈರತಿ ಸುರೇಶ್ ಹೇಳಿದರು.
ರಾಕೇಶ್ ಸಾವಿನ ಬಗ್ಗೆ ಸಿದ್ದರಾಮಯ್ಯ ಮಾತನಾಡಬೇಕು. ಈ ವಿಚಾರದಲ್ಲಿ ಎಂಟಿಬಿ ಮೂರನೇ ವ್ಯಕ್ತಿ. ಸಂಬಂಧವಿಲ್ಲದ ವಿಷಯದ ಬಗ್ಗೆ ಮಾತನಾಡುವ ಯಾವ ಹಕ್ಕು ಅವರಿಗಿಲ್ಲ ಎಂದು ಕಿಡಿಕಾರಿದರು.
ನಾನು ಗ್ರಾ.ಪಂ ಸದಸ್ಯನಾಗಿದ್ದಾಗ ಎಂಟಿಬಿ ನಾಗರಾಜ್ ಎಲ್ಲಿದ್ದರು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ. ಗ್ರಾಮಪಂಚಾಯಿತಿ ಸದಸ್ಯನಾಗಿದ್ದವನೀಗ ಶಾಸಕನಾಗಿದ್ದೇನೆ. ನಾನು ಬಚ್ಚಾ ಅಲ್ಲ.ಬೇರೆ ಮನೆಯಿಂದ ಬಂದು ಕಾಂಗ್ರೆಸ್ ನಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಟೀಕಿಸಲು ಎಂಟಿಬಿಗೆ ಯಾವುದೇ ನೈತಿಕತೆ ಇಲ್ಲ ಎಂದರು.
ಹೊಸಕೋಟೆಯಲ್ಲಿ ಬಚ್ಚೇಗೌಡ ಕಟ್ಟಿ ಬೆಳಿಸಿದ ಮನೆಯಲ್ಲಿ ಎಂಟಿಬಿ ಈಗ ವಾಸ ಮಾಡಲು ಹೋಗುತ್ತಿರುವುದು ಸರೀಯೇ ಎಂದು ತಿರುಗೇಟು ನೀಡಿದರು.ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಲು ಎಂಟಿಬಿಗೆ ಯಾವುದೇ ನೈತಿಕತೆ ಇಲ್ಲ. ಅವರ ಬಂಡವಾಳ ನನಗೆ ಗೊತ್ತಿದೆ. ಅವರು ನಡೆಸಿರುವ ಹಗರಣಗಳ ಬಗ್ಗೆ ತಮಗೂ ತಿಳಿದಿದೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








