ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ನೇಕಾರರ ಸಮುದಾಯ ಆರಾಧ್ಯದೈವ ಭಕ್ತ ಮಾರ್ಕಂಡೇಯ ಜಯಂತಿಯನ್ನು ಸಂಭ್ರಮ ಸಡಗರಗಳಿಂದ ಆಚರಿಸುತ್ತಿದ್ದು, ಸಮುದಾಯದ ಸಂಘಟನೆಗೆ ಈ ಕಾರ್ಯಕ್ರಮ ಹೆಚ್ಚು ಶಕ್ತಿ ನೀಡುತ್ತದೆ ಎಂದು ತಾಲ್ಲೂಕು ಪದ್ಮಸಾಲಿ ಸಮಾಜದ ಅಧ್ಯಕ್ಷ ಮ್ಯಾಡಂ ಶಿವಮೂರ್ತಿ ತಿಳಿಸಿದರು.
ಅವರು ಶುಕ್ರವಾರ ಇಲ್ಲಿನ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಕ್ತ ಮಾರ್ಕಂಡೇಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕಿನಾದ್ಯಂತ ಪದ್ಮಸಾಲಿ ಸಮುದಾಯದ ಸಂಘಟನೆಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇತ್ತೀಚೆಗೆ ತಾನೇ ಪದ್ಮಸಾಲಿ ಮಹಿಳಾ ಸಂಘ, ಯುವಕ ಸಂಘ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೆಚ್ಚು ಅನುಕೂಲವಾಗಿದೆ. ಸಮುದಾಯ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿ ನಮ್ಮ ಜನಾಂಗ ಅಭಿವೃದ್ಧಿಗೆ ಬೇಕಾದ ಸೌಲಭ್ಯಗಳನ್ನು ಪಡೆಯಲು ನಾವೆಲ್ಲರೂ ಮುಂದಾಗಬೇಕೆಂದು ಅವರು ತಿಳಿಸಿದರು.
ನಗರಸಭಾ ಸದಸ್ಯ ವಿ.ವೈ.ಪ್ರಮೋದ್ ಮಾತನಾಡಿ, ಪದ್ಮಸಾಲಿ ಸಮಾಜದಲ್ಲಿ ರಾಜಕೀಯ ಕ್ಷೇತ್ರವೂ ಸೇರಿದಂತೆ ಇತರೆ ಎಲ್ಲಾ ಕ್ಷೇತ್ರಗಳನ್ನು ನಮ್ಮ ಸಮುದಾಯಕ್ಕೆ ಪ್ರಾತಿನಿತ್ಯ ಪಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು. ಪ್ರಸ್ತುತ ಸಮುದಾಯದ ಈ ಕಲ್ಯಾಣ ಮಂಟಪ ಚಿಕ್ಕದಾಗಿದ್ದು, ನಗರಸಭೆಯಿಂದ ಈಗಾಗಲೇ ನೂತನ ಕಲ್ಯಾಣ ಮಂಟಪ ರೂಪಿಸಲು ನಿವೇಶನ ದೊರಕಿದ್ದು, ಈ ನಿಟ್ಟಿನಲ್ಲಿ ಸಮಾಜದ ಅಧ್ಯಕ್ಷರೂ ಹಾಗೂ ಪದಾಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ಕಲ್ಯಾಣ ಮಂಟಪ ನಿರ್ಮಿಸಲು ಪ್ರಯತ್ನಿಸಬೇಕಿದೆ ಎಂದರು. ಪದ್ಮಸಾಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಎರಡನೇಬಾರಿಗೆ ನಗರಸಭೆಯ ಸದಸ್ಯನಾಗಿ ಆಯ್ಕೆಯಾಗಲು ಸಹಕರಿಸಿದ ಸಮುದಾಯದ ಎಲ್ಲಾ ಮುಖಂಡರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರವಿಕುಮಾರ್, ಯುವ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ರಮೇಶ್, ಉಪಾಧ್ಯಕ್ಷ ರಘು, ಮಹಿಳಾ ಘಟಕದ ಅಧ್ಯಕ್ಷೆ ಸವಿತ್ರಮ್ಮಶಿವಮೂರ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತ ಮಾರ್ಕಂಡೇಯ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
