ಭಾರತದಲ್ಲಿ ಹೆಚ್ಚುತ್ತಿರುವ ಮತೀಯವಾದಿಗಳ ಉಪಟಳ

ದಾವಣಗೆರೆ:

      ಭಾರತ ದೇಶದಲ್ಲಿ ಮೂಲಭೂತ ಮತೀಯವಾದಿಗಳ ಉಪಟಳ ದಿನೇದಿನೇ ಹೆಚ್ಚಾಗಿರುವ ಕಾರಣ ಜನತೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ, ಮಹಾನಗರ ಪಾಲಿಕೆಯ ನಿರ್ಗಮಿತ ಸದಸ್ಯ ಹೆಚ್.ಜಿ.ಉಮೇಶ್ ಆತಂಕ ವ್ಯಕ್ತಪಡಿಸಿದರು.

        ಎಐಟಿಯುಸಿ ವತಿಯಿಂದ ಆವರಗೆರೆ ಗ್ರಾಮದ ಕಾರ್ಮಿಕ ಮುಖಂಡರ ಸಮಾಧಿ ಸ್ಥಳದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಹುತಾತ್ಮರಾದ ಕಾಂ.ಸುರೇಶಪ್ಪ, ಕಾಂಶೇಖರಪ್ಪ ಇವರ 49ನೇ ವರ್ಷದ ಶ್ರದ್ದಾಂಜಲಿ ಸಭೆ ಹಾಗೂ ಕಾಂ.ಪಂಪಾಪತಿಯವರ 17ನೇ ವರ್ಷದ ವಾರ್ಷಿಕ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ದೇಶವು ಜಗತ್ತಿನಾದ್ಯಂತ ಕಲೆ, ಸಂಸ್ಕøತಿ, ಸಾಹಿತ್ಯ, ಸಂಗೀತ, ಸಾಂಸ್ಕøತಿಕ ಮತ್ತು ಧರ್ಮ ಸಂಕೇತಗಳ ತವರೂರು ಎನಿಸಿಕೊಂಡಿದೆ. ಆದರೆ, ಇಂತಹ ಶಾಂತಿಪ್ರಿಯ ದೇಶದಲ್ಲಿ ಮತೀಯವಾದಿಗಳ ದಾಳಿ ಹೆಚ್ಚಾಗಿ ಆತಂಕದಲ್ಲಿ ದಿನ ಕಳೆಯುವ ಕಾಲ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ ಎಂದು ವಿಷಾದಿಸಿದರು.

         ಶಾಂತಿಪ್ರಿಯ ದೇಶವಾದ ಭಾರತದ ಅಭಿವೃದ್ದಿಗೆ ತೊಡಕಾಗಿರುವ ದುಷ್ಟ ಶಕ್ತಿ ಭಯೋತ್ಪಾದನೆÀ, ಭ್ರಷ್ಟಾಚಾರ ಎನ್ನುವ ಪಿಡುಗನ್ನು ಹೋಗಲಾಡಿಸಬೇಕಿದೆ. ಅದಕ್ಕೆ ಈಗ ಸುಸಂದರ್ಭ. ಇದೀಗ ನಡೆಯುತ್ತಿರುವ ಚುನಾವಣೆಯಲ್ಲಿ ದೇಶದ ಜನತೆ ಜಾಗ್ರತೆಯಿಂದ ಮತ ಚಲಾಯಿಸಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದರು.

       ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ 44 ಯೋಧರು ಸೇರಿದಂತೆ ಉಗ್ರರ ದಾಳಿಯಲ್ಲಿ ಸಾವಿರಾರು ಯೋಧರು, ನಾಗರೀಕರು, ವೀರ ಮರಣವನ್ನಪ್ಪಿರುವುದು ನಮಗೆಲ್ಲರಿಗೂ ತಿಳಿದಿದೆ. ಇಂತಹ ಹುತಾತ್ಮರಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಮಕ್ಕಳಾಗಲೀ, ಮುಖಂಡರಾಗಲಿ, ಜನಪ್ರತಿನಿಧಿಗಳಾಗಲೀ ಮೃತ ಹೊಂದಿರುವುದಿಲ್ಲ. ಮೃತ ಹೊಂದಿದವರೆಲ್ಲರೂ ಈ ದೇಶದ ಭಾವೈಕ್ಯತೆ ಸಂದೇಶ ಸಾರುತ್ತಿರುವ ರೈತರು, ಕಾರ್ಮಿಕರಂತಹ ಮಕ್ಕಳು ಮಾತ್ರ ದೇಶಸೇವೆಯಲ್ಲಿ ತೊಡಗಿರುವುದನ್ನು ನಾವುಗಳು ಕಾಣುತ್ತಿದ್ದೇವೆ ಎಂದು ಹೇಳಿದರು.

        ಇದೀಗ ಲೋಕಸಭೆಯ ಚುನಾವಣೆ ಘೋಷಣೆಗೊಂಡಿದೆ. ಈ ಸಂದರ್ಭದಲ್ಲಿ ಈ ರಾಜಕೀಯ ಜನಪ್ರತಿನಿಧಿಗಳು ತಮ್ಮ ಪ್ರನಾಳಿಕೆಯಲ್ಲಿ ತಮ್ಮ ಮಕ್ಕಳನ್ನು ಈ ದೇಶದ ಭದ್ರತೆಗಾಗಿ ಮೀಸಲಿಡುತ್ತೇವೆಂದು ಘೋಷಿಸಬೇಕು. ಆದರೆ, ದೇಶದ ಯಾವುದೇ ಜನಪ್ರತಿನಿಧಿಗಳು ಕುಟುಂಬದ ಮಕ್ಕಳಾದಿಯಾಗಿ ಯಾರನ್ನೂ ಸಹ ದೇಶಸೇವೆಗೆ ಸೇರಿಸಿಲ್ಲ. ಕಾರಣ ಜನಪ್ರತಿನಿಧಿಗಳಲ್ಲಿ ಯಾರ್ಯಾರು ತಮ್ಮ ಮಕ್ಕಳನ್ನು ದೇಶಸೇವೆಯಲ್ಲಿ ಅಂದರೆ ಯೋಧರನ್ನಾಗಿ ಕರ್ತವ್ಯದಲ್ಲಿ ತೊಡಗಿಸಿದ್ದಾರೆ ಎನ್ನುವ ಮಾಹಿತಿ ನೀಡಿಬೇಕು. ಇಲ್ಲವಾದಲೀ ಇದೀಗ ಅವರು ಬಿಡುಗಡೆ ಮಾಡುವ ಪ್ರನಾಳಿಕೆಯಲ್ಲಿ ಘೋಷಿಸಬೇಕೆನ್ನುವುದು ಆಗ್ರಹಿಸಿದರು.

       ರಾಜಕೀಯದಲ್ಲಿ ವಿನಾಕಾರಣ ಜಾತಿ ಮತ್ತು ಧರ್ಮಗಳ ಮಧ್ಯೆ ಕಲುಷಿತ ವಾತಾವರಣವನ್ನು ನಿರ್ಮಾಣ ಮಾಡುವುದನ್ನು ಬದಿಗೊತ್ತಿ ರೈತರ, ಕೂಲಿ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ನ್ಯಾಯವನ್ನು ನೀಡುವ ದಿಕ್ಕಿನಲ್ಲಿ ನಮ್ಮ ಆಡಳಿತ ವ್ಯವಸ್ಥೆಗಳು ಮುನ್ನಡೆಯಬೇಕು. ಆಗ ಮಾತ್ರ ನಮ್ಮ ದೇಶ ವಿಶ್ವದಲ್ಲಿ ಸೂಪರ್ ಪವರ್ ರಾಷ್ಟ್ರವಾಗಲು ಸಾಧ್ಯ. ಎಲ್ಲಾ ಜನಪ್ರತಿನಿಧಿಗಳು ಇದನ್ನು ಮನಗಾಣಬೇಕಿದೆ ಎಂದು ಆಗ್ರಹಿಸಿದರು.

        ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ಜಿಲ್ಲಾ ಮಂಡಳಿ ಖಜಾಂಚಿ ಕಾಂ.ಆನಂದರಾಜ್ ಮಾತನಾಡಿ, ಕಾರ್ಮಿಕ ಸಂಘಟನೆಗಳು ಬಂಡವಾಳಶಾಹಿಗಳ ಪರವಾಗಿ ಇರುವ ಸಂಘಟನೆಗಳಲ್ಲ. ಕಾರ್ಮಿಕರ ಹಿತ ಕಾಯುವ ಸಂಘಟನೆಗಳು. ಕೈಗಾರಿಗೆಗಳಲ್ಲಿನ ಕಾರ್ಮಿಕರನ್ನು ಸಂಘಟಿಸುವ ಮೂಲಕ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದೆಯೇ ಹೊರತು ಯಾವುದೇ ಸಂದರ್ಭದಲ್ಲಿ ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿಲ್ಲ ಎಂದರು.

         ಕಾರ್ಮಿಕ ಸಂಘಟನೆಗೆ ಎಷ್ಟು ಬಲ ಇತ್ತಿಂದರೆ ಕೆಂಬಾವುಟ ನೋಡಿದಾಕ್ಷಣ ಹೋರಾಟದ ಹಾದಿ ತುಳಿದವರಿಗೆಲ್ಲರಿಗೂ ತಿಳಿದೇ ಇರುತ್ತದೆ. ಯಾವುದೇ ರಾಜಿಗೆ ಬಗ್ಗದೇ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ. ಅಂತಹ ಸಂಘಟನೆಗಾಗಿ ಈಗ ನಾವೆಲ್ಲರೂ ಈಗಿನ ಪದ್ದತಿಗಳಿಂದ ಹೊರಬಂದು ಬಲ ಪಡಿಸಲು ಚಿಂತನೆ ನಡೆಸಬೇಕಾಗಿದೆ. ಕಳೆದ 49ವರ್ಷಗಳಿಂದ ಕಾರ್ಮಿಕರ ಪರವಾಗಿ ಹೋರಾಟಗಳು ನಡೆದುಕೊಂಡು ಬರುತ್ತಲೇ ಇವೆ. ಈ ಹೋರಾಟ ಮುಂದೆಯೂ ನಡೆಯಲಿದೆ ಎಂದು ಹೇಳಿದರು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಟಿಯುಸಿ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ವಹಿಸಿದ್ದರು. ಎಐಬಿಇಎ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ನಾಯರಿ, ಕಾಂ.ಶೇಖರಪ್ಪರ ಪುತ್ರ, ಉಪನ್ಯಾಸಕ ಬಸವರಾಜ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರೈತ ಮುಖಂಡ ಇಟಗಿ ಬಸವರಾಜಪ್ಪ, ಎಐಟಿಯುಸಿ ಜಿಲ್ಲಾ ಸಮಿತಿಯ ಮಹಿಳಾ ಮುಖಂಡರಾದ ಎಂ.ಬಿ.ಶಾರದಮ್ಮ, ಸರೋಜ, ವಿಶಾಲಾಕ್ಷಿ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ಹರಿಹರದ ಹೆಚ್.ಕೆ.ಕೊಟ್ರಪ್ಪ ಇತರರು ಇದ್ದರು. ಆರಂಭದಲ್ಲಿ ಇಪ್ಟಾ ಕಲಾವಿದರಿಂದ ಕ್ರಾಂತಿಗೀತೆ ಹಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap