ತುಮಕೂರು :
ಅಕ್ಷಯ ತೃತೀಯವೆಂದರೆ ಒಂದು ಕೊಂಡರೆ ಇನ್ನಷ್ಟು ಉಚಿತ ಎನ್ನುವ ಆಫರ್‍ನ ಅದೃಷ್ಟದ ದಿನ, ಈ ದಿನ ಯಾವುದೇ ಶುಭ ಕಾರ್ಯ ಆರಂಭಿಸಿಸಲು, ಹೊಸದನ್ನು ಖರೀದಿ ಮಾಡಲು ಪ್ರಶಸ್ತ ದಿನ. ಈ ಶುಭ ದಿನ ಕೈಗೊಳ್ಳುವ ಎಲ್ಲಾ ಕಾರ್ಯವೂ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ.
ಹೀಗಾಗಿ, ಹೊಸ ವ್ಯವಹಾರ, ಹೂಡಿಕೆಗೆ, ಖರೀದಿಗೆ ಅಕ್ಷಯ ತೃತೀಯ ಸೂಕ್ತ ದಿನ ಎನ್ನುವ ಭಾವನೆ ಇದೆ. ಎಲ್ಲಾ ಖರೀದಿಗಿಂತಾ ಶ್ರೇಷ್ಠವೆನ್ನಲಾದ ಬೆಳ್ಳಿ, ಬಂಗಾರ ಖರೀದಿ ಇತ್ತೀಚಿನ ಗ್ರಾಹಕರಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಆಭರಣ ಮಳಿಗೆಯವರು ಕೂಡಾ ಅಕ್ಷಯ ತೃತೀಯದ ವೇಳೆ ಭರ್ಜರಿ ವ್ಯಾಪಾರ ನಡೆಸಲು ವಿಶೇಷ ಗಮನರಿಸಿ, ಗ್ರಾಹಕರನ್ನು ಸೆಳೆಯುವ ತಂತ್ರ ಮಾಡುತ್ತಾರೆ.
ತುಮಕೂರಿನ ಬಹುತೇಕ ಆಭರಣ ಅಂಗಡಿಗಳಲ್ಲಿ ಅಕ್ಷಯ ತೃತೀಯ ದಿನವಾದ ಮಂಗಳವಾರ ಭರ್ಜರಿ ವಹಿವಾಟು ನಡೆದವು. ಕೆಲ ಅಂಗಡಿಗಳು ಇಂದು ಎಂದಿಗಿಂತಾ ಬೇಗ ಬೆಳಿಗ್ಗೆ 7ಗಂಟೆಗೇ ಬಾಗಿಲು ತೆರೆದು ವಹಿವಾಟು ಆರಂಭಿಸಿದವು. ಬೆಳಿಗ್ಗೆಯಂದಲೂ ಗ್ರಾಹಕರು ಖರೀದಿಗೆ ಜಮಾಯಿಸಿದ್ದರು. ಕೆಲ ಆಭರಣ ಮಳಿಗೆಯವರು ಅಕ್ಷಯ ತೃತೀಯ ಪ್ರಯಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೌಕರ್ಯ ಪ್ರಕಟಿಸಿದ್ದವು. ಆಭರಣಗಳ ಮುಂಗಡ ಕಾಯ್ದಿರಿಸುವಿಕೆಗೆ ಅನುಕೂಲ ಮಾಡಿಕೊಟ್ಟಿದ್ದವು. ಅಂತಹ ಗ್ರಾಹಕರು ಅಕ್ಷಯ ತೃತೀಯದಂದು ಆಭರಣ ಪಡೆಯಲು ಅವಕಾಶ ಮಾಡಲಾಗಿತ್ತು.
ಪ್ರಮುಖ ಆಭರಣ ಮಳಿಗೆಗಳಲ್ಲಿ ಗ್ರಾಹಕರ ನೂಕು ನುಗ್ಗಲು ಕಂಡು ಬಂದಿತ್ತು. ಸಹಜವಾಗಿ ಮಹಿಳೆಯ ಸಂಖ್ಯೆಯೇ ಹೆಚ್ಚಾಗಿತ್ತು. ಉರಿಬಿಸಿಲಿನಲ್ಲಿ ಒಡವೆ ಖರೀದಿ ಮಾಡಲು ಬಂದ ಗ್ರಾಹಕರಿಗೆ ಹಣ್ಣಿನ ರಸ, ಕುಡಿಯುವ ನೀರಿನ ವಿಶೇಷ ವ್ಯವಸ್ಥೆಯನ್ನು ಕೆಲವು ಅಂಗಡಿ ಮಾಲೀಕರು ಮಾಡಿದ್ದರು. ಗ್ರಾಹಕರ ಸಂಖ್ಯೆ ಹೆಚ್ಚಿದ್ದ ಕಾರಣ ಹೆಚ್ಚುವರಿ ಸೆಕ್ಯೂರಿಟಿ ಮಾಡಲಾಗಿತ್ತು. ಅಂಗಡಿಗಳ ಸಿಸಿ ಟಿವಿ ಕ್ಯಾಮರಾಗಳು ನಿಗಾ ವಹಿಸಿದ್ದವು.
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಕೊಂಡರೆ ಸಂಪತ್ತು ದುಪ್ಪಟ್ಟಾಗುತ್ತದೆ ಎಂಬ ನಂಬಿಕೆ ಇರುವ ಕಾರಣ ಆಭರಣ ಖರೀದಿಗೆ ಬೇಡಿಕೆ ಜಾಸ್ತಿಯಾಗಿತ್ತು. ಕನಿಷ್ಟ ಒಂದು ಮೂಗುತಿಯನ್ನಾದರೂ ಕೊಳ್ಳಬೇಕು ಎಂದು ಮಹಿಳೆಯರು ಆಭರಣ ಅಂಗಡಿಗಳಿಗೆ ಮುಗಿಬಿದ್ದಿದ್ದರು. ಅವರವರ ಸಾಮಥ್ರ್ಯಕ್ಕನುಗುಣವಾಗಿ ಆಭರಣ ಖರೀದಿಸಿ ಆನಂದಪಟ್ಟರು.
ಪುರಾಣ ಪ್ರತೀಕ
ಅಕ್ಷಯವೆಂದರೆ ಕ್ಷಯವಿಲ್ಲದಿರುವುದು, ತೃತೀಯ ಎಂದರೆ ವೈಶಾಖ ಮಾಸದ ಮೂರನೇ ದಿನ. ವೇದ ಪುರಾಣಗಳ ಪ್ರಕಾರ ಅಕ್ಷಯ ತೃತೀಯ ವಿಶೇಷ ದಿನ. ಅಂದು ಯಾವುದೇ ಶುಭ ಕಾರ್ಯ ಆರಂಭಿಸಬಹುದು. ಅಕ್ಷಯ ತೃತೀಯದ ಬಗ್ಗೆ ಸಾಕಷ್ಟು ಐತಿಹಾಸಿಕ ಘಟನೆಗಳು ಸಂಭವಿಸಿವೆ. ಗಂಗೆ ದೇವಲೋಕದಿಂದ ಭೂಮಿಗೆ ಬಂದದ್ದು ಇದೇ ದಿನ. ಪರಶುರಾಮ ಭೂಮಿಯಲ್ಲಿ ಅವತರಿಸಿದ್ದು, ದ್ರೌಪದಿಗೆ ಸೂರ್ಯದೇವ ನಿಂದ ಅಕ್ಷಯ ಪಾತ್ರೆದೊರೆತ ಶುಭ ದಿನ ಅಕ್ಷಯ ತೃತೀಯ. ಸುಧಾಮನಿಂದ ಶ್ರೀಕೃಷ್ಣ ಹಿಡಿ ಅವಲಕ್ಕಿ ಪಡೆದು ತಿಂದು ಸಂಪೃಪ್ತನಾಗಿ ಏನೂ ಸಹಾಯ ಯಾಚಿಸದ ಸುಧಾಮನಿಗೆ ಅಪಾರ ಸಂಪತ್ತು ಕರುಣಿಸಿದ್ದು ಇದೇ ಅಕ್ಷಯ ತೃತೀಯ ದಿವಸ ಎಂದು ಪುರಾಣ ಹೇಳುತ್ತದೆ.
ಇಂತಹ ದಿನ ಶುಭ ಕಾರ್ಯ ಆರಂಭಿಸಿದರೆ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಹಿಂದುಗಳಲ್ಲಿದೆ. ಏನೇ ಖರೀದಿ ಮಡಿದರೆ ಅದು ಹೆಚ್ಚಳವಾಗುತ್ತದೆ ಎಂಬ ನಂಬಿಕೆ ಕೂಡಾ ಅಕ್ಷಯ ತೃತೀಯ ದಿನದಂದು ಚಿನ್ನ ಬೆಳ್ಳಿ ಖರೀದಿಸುವ ಪದ್ದತಿ ಆರಂಭವಾಗಿದೆ.