ಭೀಕರ ಬರಗಾಲದತ್ತ ಕಲ್ಪತರು ನಾಡು..!!!!

ಮಳೆ ಇಲ್ಲದ ಇಳೆ : ಕಳೆ ಕಳೆದುಕೊಂಡ ರೈತನ ಮುಖ

ತಿಪಟೂರು

ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ

          ಮಳೆ ಇಲ್ಲದ ಇಳೆ, ಕಳೆ ತುಂಬಿದ ಧರೆ, ಎಲ್ಲೆಡೆ ಬರದ ವಾತಾವರಣ. ಇಷ್ಟೆಲ್ಲದರ ನಡುವೆ ರೈತನ ನಗುವಿಲ್ಲದ ಮುಖ. ಆದರೂ ದೃತಿಗೆಡದ ರೈತ ಈಗಲಾದರು ಮಳೆ ಬಂದು ತನ್ನ ಮಕ್ಕಳಿಗೆ ಅನ್ನ ಮತ್ತು ಜಾನುವಾರುಗಳಿಗಾದರೂ ಮೇವು ಸಿಗಬಹುದೆಂಬ ಆಶಾಭಾವನೆಯಿಂದ ತನ್ನ ಜಮೀನನ್ನು ಅಷ್ಟೋ ಇಷ್ಟು ಅಚ್ಚುಕಟ್ಟು ಮಾಡಿಕೊಂಡು ಮಳೆರಾಯನ ಕೃಪೆ ಗಾಗಿ ಕಾಯುತ್ತಿದ್ದಾನೆ. ಮಳೆರಾಯ ಮಾತ್ರ ಮರೀಚಿಕೆಯಾಗಿದ್ದು ಜನರನ್ನು ಆತಂಕಕ್ಕೆ ಈಡು ಮಾಡಿರುವುದಲ್ಲದೆ ವ್ಯವಸಾಯ ನಿನ್ನ ಮನೆ ಮಕ್ಕಳೆಲ್ಲಾ ಸಾಯ ಎಂಬ ಮಾತು ನಿಜವಾಗುವತ್ತ ಸಾಗಿದೆ.

        ತಾಲ್ಲೂಕಿನಲ್ಲಿ ವಾಡಿಕೆಯಂತೆ ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ 204 ಮಿ.ಮೀ ಮತ್ತು ಜುಲೈನಲ್ಲಿ 58 ಮಿ ಮಿ ಮಳೆಯಾಗಬೇಕಿತ್ತು. ಕಳೆದ ಸಾಲಿನಲ್ಲಿ ಈ ಮೂರು ತಿಂಗಳಲ್ಲಿ 332 ಮಿ. ಮೀ. ಮಳೆ ಬಿದ್ದು ಅಲ್ಪಸ್ವಲ್ಪ ರಾಗಿ ಮತ್ತು ಮೇವು ಸಿಕ್ಕಿತ್ತು. ಆದರೆ ಈ ಬಾರಿ ಮಳೆರಾಯ ಸಂಪೂರ್ಣವಾಗಿ ಮುನಿಸಿಕೊಂಡಿದ್ದು, ಈ ಬಾರಿ ಮುಂಗಾರಿನಲ್ಲಿ ಬಿದ್ದ ಮಳೆ ಕೇವಲ 256 ಮಿಮೀ ಮಾತ್ರ. ಇದನ್ನು ನೋಡಿದರೆ ಈ ಬಾರಿ ಬೇಸಿಗೆಯಲ್ಲಿ ಇರಲಿ ಗಣೇಶನ ಹಬ್ಬದ ಹೊತ್ತಿಗೆ ಗಣೇಶನನ್ನು ವಿಸರ್ಜಿಸಲು ನೀರಿನಕೊರತೆ ಎದುರಾಗುವ ಪರಿಸ್ಥಿತಿ ಇದೆ.

        ಬೇಡಿದ್ದೆಲ್ಲವನ್ನು ಕೊಡುವ ಕಲ್ಪವೃಕ್ಷದ ನಾಡು ನಮ್ಮೀ ಕಲ್ಪತರು ನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಕೊರತೆಯು ಹೆಚ್ಚಾಗುತ್ತಲೇ ಸಾಗುತ್ತಿದೆ. ಈ ಬಾರಿಯು ಮಳೆಯ ಸಂಪೂರ್ಣ ಕೊರತೆಯಿಂದ ರೈತರು ತಾವು ಕಷ್ಟಪಟ್ಟು ಹಸನು ಮಾಡಿಕೊಂಡ ಜಮೀನಿಗೆ ಜುಲೈ ಮಧ್ಯ ಭಾಗ ತಲುಪಿದರೂ ರಾಗಿಯನ್ನು ನಾಟಿ ಮಾಡಲಾಗಿಲ್ಲ. ಈ ವರ್ಷವೂ ಸಹ ತಾಲ್ಲೂಕಿನಲ್ಲಿ ಮಳೆಯಿಲ್ಲದೆ ಮುಂಗಾರು ರೈತನ ಜೀವನದಲ್ಲಿ ಜೂಜಾಟವಾಡಿದೆ.

      ಕೆಲವು ಪ್ರದೇಶಗಳಲ್ಲಿ ಮಾತ್ರ ಅಲ್ಪಸ್ವಲ್ಪ ಹೆಸರು, ಉದ್ದು ಬೆಳೆಯಲಾಗಿದ್ದು, ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಸ್ವೀಕರಿಸಿ ಮತ್ತು ಹಿಂಗಾರಿನಲ್ಲಾದರು ಉತ್ತಮ ಮಳೆಯಾಗಬಹುದೆಂಬ ಆಶಾಭಾವನೆಯಿಂದ ಜಮೀನನ್ನು ಅಚ್ಚುಕಟ್ಟು ಮಾಡಿಕೊಂಡಿದ್ದರು. ಆದರೆ ಈ ಬಾರಿಯು ಮಳೆ ಮಾತ್ರ ತನ್ನ ಅನಿಶ್ಚಿತ ಆಟವನ್ನು ಮುಂದುವರೆಸಿದ್ದು, ಜೂನ್‍ನಲ್ಲಿ 97.92 ಮಿ.ಮೀ ಮಳೆ ಬಿದ್ದಿದೆ. ಈಗ ಜುಲೈ ಮದ್ಯ ಭಾಗದಲ್ಲಿದ್ದು ಈಗಲೂ ಮಳೆ ಬಂದರೆ ಅಲ್ಪಾವಧಿಯ ರಾಗಿಯ ಬೆಳೆಗಳನ್ನು ಬೆಳೆಯಹುದು. ಆದರೆ ಜುಲೈ ತಿಂಗಳಲ್ಲಿ 59 ಮಿಮೀ ಮಳೆ ಆಗಬೇಕಿದ್ದು ಮಳೆರಾಯ ಮಾತ್ರ ಅಲ್ಪಸ್ವಲ್ಪವೂ ಕೃಪೆತೋರದೆ ಮುನಿಸಿಕೊಂಡಿದ್ದಾನೆ.

 

ವಿನಾಶದತ್ತ ತೆಂಗು :

     ಕಲ್ಪತರು ನಾಡು ಎಂದು ಹೆಸರಾಗಿರುವ ನಮ್ಮ ತಿಪಟೂರು ತೆಂಗಿನ ಮತ್ತು ಕೊಬ್ಬರಿಯು ವಿಶಿಷ್ಟ ರುಚಿಯಿಂದ ವಿಶ್ವದಾದ್ಯಂತ ಹೆಸರುಮಾಡಿದೆ. ಯಾವುದೇ ತೆಂಗಿನ ಕಾಯಿಗಾದರು ತಿಪಟೂರು ತೆಂಗಿನಕಾಯಿ ಎಂದರೆ ಅದರ ತೂಕವು ಹೆಚ್ಚಾಗುತ್ತದೆ. ಆದರೆ ಇಲ್ಲಿ ಮಾತ್ರ ಇದಕ್ಕೆ ವಿರುದ್ದವಾಗಿ ತೆಂಗು ಮಾತ್ರ ಮಳೆಯಿಲ್ಲದೆ ರೋಗಗಳಿಂದ ವಿನಾಶದತ್ತ ಸಾಗುತ್ತಿದೆ. ಇದಕ್ಕಾಗಿ ಹಲವಾರು ಯೋಜನೆಗಳು, ಪ್ಯಾಕೇಜ್‍ಗಳು ಜಾರಿಯಾದರೂ, ಯಾವುದೂ ಅನುಷ್ಠಾನಗೊಳ್ಳದಿರುವುದು ಈ ಭಾಗದ ರೈತರಿಗೆ ಗ್ರಹಣ ಹಿಡಿದಂತಾಗಿದೆ. ತೆಂಗಿಗಾಗಿ ವಿಶೇಷ ಪ್ಯಾಕೇಜ್‍ಗಳನ್ನು ಘೋಷಿಸಿ ತೆಂಗು ಬೆಳೆಗಾರರನ್ನು ರಕ್ಷಿಸುವ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲಿದೆ.

ಮಳೆ ಬಂದ ತಕ್ಷಣ ಮೇವು ಬರುವುದೇ? :

    ಸರ್ಕಾರದಿಂದ ಹೊನ್ನವಳ್ಳಿ ಹೋಬಳಿಯಲ್ಲಿ ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಿ ಮೇವನ್ನು ಕೊಡುತ್ತಿದ್ದರು. ಆದರೆ ಅದ್ಯಾವ ಅಧಿಕಾರಿಗಳು ಮಳೆ ಬಂದಿದೆ ಎಂದು ವರದಿ ನೀಡಿದರೋ ಆ ಮೇವು ಬ್ಯಾಂಕ್‍ಗಳನ್ನು ಮುಚ್ಚಿದರು. ಹಳ್ಳಿಯ ರೈತರುಗಳು ಹೇಳುವಂತೆ ಸ್ವಾಮಿ ಅಧಿಕಾರಿಗಳು ಮಳೆ ಬಂದಿದೆ ಮೇವು ಬರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಮಳೆ ಬಂದ ತಕ್ಷಣವೇ ಮೇವು ಹೇಗೆ ಬರುತ್ತದೆ ಎಂಬ ಅಜ್ಞಾನದಿಂದ ಮೇವು ಬ್ಯಾಂಕ್‍ಗಳನ್ನು ಮುಚ್ಚಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಕೂಡಲೇ ಉತ್ತಮ ಗುಣಮಟ್ಟದ ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಬೇಕೆಂದರು ಆಗ್ರಹಿಸಿದ್ದಾರೆ.

ನೀರಿರಲಿ ಅಂತರ್ಜಲವು ಬರಿದಾಗುತ್ತಿದೆ :

      ತಾಲ್ಲೂಕಿನಲ್ಲಿ ನೊಣವಿನಕೆರೆ ಮತ್ತು ಕಿಬ್ಬನಹಳ್ಳಿಯ ಕೆಲವು ಭಾಗಗಳಲ್ಲಿ ಹೇಮಾವತಿ ನಾಲೆ ಹರಿದು ಹೋಗಿರುವುದರಿಂದ ಕೆಲವು ಕೆರೆಕಟ್ಟೆಗಳಲ್ಲಿ ನೀರು ನೋಡುವ ಪರಿಸ್ಥಿತಿ ಇದ್ದು, ಸ್ವಲ್ಪ ಮಟ್ಟಿನ ಅಂತರ್ಜಲ ಇದೆ. ಆದರೆ ಇತರೆ ಭಾಗಗಳಾದ ಹೊನ್ನವಳ್ಳಿ, ಹಾಲ್ಕುರಿಕೆ, ಶಿವರ ಮುಂತಾದ ಕಡೆಗಳಲ್ಲಿ 1000-1200 ಅಡಿ ಆಳದ ವರೆಗೆ ಕೊಳವೆ ಬಾವಿ ಕೊರೆಸಿದರು ನೀರು ಸಿಗುವ ಲಕ್ಷಣಗಳೇ ಕಾಣಿಸುತ್ತಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap