ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಎಲ್ಲರ ಹೊಣೆ : ವಿಶ್ವನಾಥಶೆಟ್ಟಿ

ತುಮಕೂರು

    ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಲೋಕಾಯುಕ್ತರ ರೀತಿ ಪ್ರಯತ್ನ ಮಾಡಬೇಕು. ಅವ್ಯವಹಾರ, ಅಕ್ರಮಗಳ ತಡೆಗೆ ಜವಾಬ್ದಾರಿ ವಹಿಸಬೇಕು ಎಂದು ಲೋಕಾಯುಕ್ತರಾದ ವಿಶ್ವನಾಥಶೆಟ್ಟಿ ಹೇಳಿದರು.

    ನಗರದ ವಿದ್ಯೋದಯ ಕಾನೂನು ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಈ ದೇಶ ಪ್ರತಿಯೊಬ್ಬರಿಗೂ ಸಮಾನರಾಗಿ, ಸ್ವತಂತ್ರರಾಗಿ ಬದುಕುವ ಹಕ್ಕು ನೀಡಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಸರ್ವಸಮಾನ ಸಮಾಜ ನಿರ್ಮಾಣಕ್ಕೆ ಯುವಜನ ಕಾಳಜಿವಹಿಸಬೇಕು, ಈ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದರು.

      ಇಲ್ಲಿ ಹುಟ್ಟುವ ಪ್ರತಿಯೊಬ್ಬರೂ ತಮ್ಮ ಹಕ್ಕುಗಳಿಗೆ ಬಾಧ್ಯವಾಗುತ್ತಾರೆ. ಯಾರು ಯಾವುದೇ ಕ್ಷೇತ್ರ ಆರಿಸಿಕೊಂಡು ಮುಕ್ತವಾಗಿ ಬದುಕಬಹುದಾದ ಸ್ವಾತಂತ್ರ ಹೊಂದಿರುತ್ತಾರೆ. ಈ ಸ್ಥಿತಿಯಲ್ಲಿ ಯುವ ಜನರು ಉತ್ತಮವಾದ ಗುರಿ ಹೊಂದಿ ಅದನ್ನು ಸಾಧಿಸಲು, ಶ್ರೇಷ್ಠ ಮನಸ್ಥಿತಿ ಬೆಳೆಸಿಕೊಂಡು ಯಶಸ್ವಿಯಾಗಬೇಕು.

      ನದಿ, ಅರಣ್ಯದಂತೆ ಯುವ ಜನರೂ ಈ ದೇಶದ ಸಂಪತ್ತು. ದೇಶದ ಭವಿಷ್ಯ ಯುವಜನರ ಹೆಗಲ ಮೇಲಿದೆ. ಅಂತಹ ಜವಾಬ್ದಾರಿ ಹೊರಬೇಕಾದವರು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು, ಸೇವೆ, ಸಾಧನೆಯನ್ನೇ ಗುರಿಯಾಗಿಸಿಕೊಂಡು ಬೆಳೆಯಬೇಕು. ಬದುಕಿನಲ್ಲಿ ಸಾಗುವಾಗ ಹತ್ತಾರು ದಾರಿ ಕಾಣುತ್ತವೆ ಆದರೆ ಯಾವ ದಾರಿ ಉತ್ತಮ, ಯಾವುದರಲ್ಲಿ ಸಾಗಿದರೆ ಯಶಸ್ವು, ಗೌರವ ದೊರೆಯುತ್ತದೆ ಎಂಬುದನ್ನು ತಿಳಿದು ಮುನ್ನಡೆಯಬೇಕು ಎಂದು ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರು ಹೇಳಿದರು.

       ಬದುಕಿನಲ್ಲಿ ದೊರೆಯುವ ಅವಕಾಶವನ್ನು ಕೈ ಚೆಲ್ಲಬೇಡಿ, ಒಂದೊಂದು ಅವಕಾಶ ನಿಮ್ಮ ಬದುಕಿನ ಮೆಟ್ಟಿಲಾಗುತ್ತದೆ. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ವು ಕಾಣಬೇಕು. ಒಮ್ಮೆ ಯಶಸ್ಸು ಪಡೆದರೆ ಅದು ನಿಮ್ಮ ಜೊತೆಯೇ ಇರುತ್ತದೆ ಎಂದರು.

       ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಸಮಾಜದ ಎಲ್ಲಾ ವರ್ಗದವರ ಸೇವೆ ಮಾಡಲು ಅವಕಾಶವಿರುತ್ತದೆ. ಕೇವಲ ಮಂತ್ರಿ, ಶಾಸಕ, ಸಂಸದರಿಂದ ಮಾತ್ರವಲ್ಲ. ಡಾಕ್ಟರ್, ಇಂಜಿನಿಯರ್, ಐಎಎಸ್ ಅಧಿಕಾರಿಯಾಗುವುದರಿಂದ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ ಎಂಬುದೇನೂ ಇಲ್ಲ. ವಕೀಲ ವಿದ್ಯಾರ್ಥಿಗಳಾದ ನೀವು ವಕೀಲ ವೃತ್ತಿಯಲ್ಲಿ ಯಶಸ್ವಿಯಾಗಿ ಎಲ್ಲಾ ಕ್ಷೇತ್ರದವರನ್ನೂ ತಮ್ಮ ಕಕ್ಷಿದಾರರನ್ನಾಗಿ ಮಾಡಿಕೊಂಡು ಅವರಿಗೆ ಸೇವೆ ಒದಗಿಸಲು ಅವಕಾಶವಿದೆ ಎಂದು ತಿಳಿಸಿದರು.

       ವಿದ್ಯೋದಯ ಶಿಕ್ಷಣ ಸಂಸ್ಥೆಯ ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕ ಪ್ರೊ. ಹೆಚ್ ಎಸ್ ಶೇಷಾದ್ರಿ, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೆಂಕಟಾಚಲಪತಿ ಸ್ವಾಮಿ, ವಿದ್ಯೋದಯ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಕೆ ಚಂದ್ರಣ್ಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೇಮಂತ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link