ಬೆಂಗಳೂರು :
ಭ್ರಷ್ಟಾಚಾರ ಮತ್ತು ಜನರಿಗಾಗಿ 24 ಗಂಟೆ ದುಡಿಯುವ ಸರ್ಕಾರವೇ ನಮ್ಮ ಗುರಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಜೊತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮನೆ ಮನೆ ಪ್ರಚಾರ ಕೈಗೊಂಡಿದ್ದರು.
ಬೆಂಗಳೂರಿನ ಜೆಪಿ ನಗರದ ರಂಗ ಶಂಕರದ ಬಳಿ ಮನೆ ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದ ಮತ್ತೊಮ್ಮೆ ಮೋದಿಯವರ ಆಯ್ಕೆಗಾಗಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಅವರು ಬಿಜೆಪಿ ಪ್ರಚಾರದ ಕರಪತ್ರವನ್ನು ನಾಗರೀಕರಿಗೆ ನೀಡಿ ಪ್ರಚಾರ ಮಾಡಿದರು. ಈ ವೇಳೆ ಸಾರ್ವಜನಿಕರ ಸ್ಪಂದನೆಯನ್ನು ನೋಡಿ ಅಚ್ಚರಿಯಾದ ಸಚಿವೆ, ಜನರ ಸ್ಪಂದನೆಗೆ ಧನ್ಯವಾದ ತಿಳಿದರು.
ಈ ವೇಳೆ ಮಾತನಾಡಿದ ನಿರ್ಮಲಾ ಸೀತಾರಾಮನ್ , ತೇಜಸ್ವಿ ಸೂರ್ಯ, ಬಿಜೆಪಿ ಮತ್ತು ಮತ್ತೊಮ್ಮೆ ಮೋದಿ ಸರ್ಕಾರಕ್ಕಾಗಿ ಅಭ್ಯರ್ಥಿಯ ಜೊತೆ ಮನೆ ಮನೆ ಪ್ರಚಾರ ಮಾಡುತ್ತಿರುವುದಾಗಿ ಹೇಳಿದರು. ಈಗ ದೇಶದಲ್ಲಿ ಉತ್ತಮ ಕೆಲಸಗಳಿಗಾಗಿ ವಿಶ್ವಾಸಾರ್ಹ ಸರ್ಕಾರ ರಚನೆಯಾಗಬೇಕಿದೆ.
ಕರ್ನಾಟಕದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಅಸ್ಥಿತ್ವಕ್ಕೆ ಬರಬೇಕಿದೆ, ಸಾರ್ವಜನಿಕರ ಹಿತಾಸಕ್ತಿಗಳಿಗಾಗಿ ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಬರಬೇಕಿದೆ ಆದ್ದರಿಂದ ಇಂದು ನಾವು ಮನೆ ಮನೆ ಪ್ರಚಾರವನ್ನು ಕೈಗೊಂಡಿದ್ದೇವೆ. ನಮಗೆ ಇಲ್ಲಿ ಸಕಾರಾತ್ಮಕ ಬೆಂಬಲ ದೊರೆಯುತ್ತಿದ್ದು, ತೇಜಸ್ವಿ ಯುವಕನಾಗಿದ್ದು, ಪ್ರಧಾನಿಯವರಂತೆ 24 ಗಂಟೆ ಜನರಿಗಾಗಿ ಕೆಲಸ ಮಾಡುತ್ತಾರೆ ಆದ್ದರಿಂದ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಮನೆ ಮನೆ ಪ್ರಚಾರಕ್ಕೂ ಮೊದಲು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ತೇಜಸ್ವಿ ಸೂರ್ಯ ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪನೆ ಮಾಡಿ, ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ಸಂವಿಧಾನ್ಮಕ ಪ್ರಜಾಪ್ರಭುತ್ವದ ಸ್ಥಾಪನೆಗೆ ಭ್ರಷ್ಟಾಚಾರ ರಹಿತ ಸರ್ಕಾರ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು. ಕಳೆದ ಐದು ವರ್ಷಗಳಲ್ಲಿ ಬಡವರ, ದಲಿತರ ಏಳ್ಗೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದರು.