ತುಮಕೂರು
ತುಮಕೂರು ನಗರ ಹೊರವಲಯದ ಸತ್ಯಮಂಗಲದ ಕೈಗಾರಿಕಾ ಪ್ರದೇಶದಲ್ಲಿನ ಬೇಳೂರು ಬಾಯರ್ ಬಯೋಟಿಕ್ ಫ್ಯಾಕ್ಟರಿಯಲ್ಲಿ ಶನಿವಾರ ಬೆಳಗ್ಗೆ 8.30ರ ಸುಮಾರಿನಲ್ಲಿ ಸ್ಪೋಟಗೊಂಡಿದ್ದು ಯಾವುದೇ ಪ್ರಾಣಪಾಯಗಳಿಲ್ಲದೆ ಭಾರೀ ಅನಾಹುತ ತಪ್ಪಿದೆ.
ಸತ್ಯಮಂಗಲದ ಕೈಗಾರಿಕಾ ಪ್ರದೇಶದಲ್ಲಿನ ಬೇಳೂರು ಬಾಯರ್ ಬಯೋಟಿಕ್ ಕೈಗಾರಿಕೆಯಲ್ಲಿ ಅಲ್ಲಿನ ಕೆಲಸಗಾರರ ನಿರ್ಲಕ್ಷ್ಯದಿಂದ ಈ ಅವಘಢ ನಡೆದಿದೆ. ಕೆಮಿಕಲ್ ರಿಯಾಕ್ಷನ್ ಮಾಡುವಾಗ ಅದರ ಉಷ್ಣಾಂಶ ಹೆಚ್ಚಾಗಿ ಬಾಯ್ಲರ್ ಸ್ಪೋಟಗೊಂಡು ಕಾರ್ಖಾನೆಯ ಮೇಲ್ಚಾವಣೆ ಸೇರಿದಂತೆ ಒಳಗಿನ ಶೀಟುಗಳು ಎಗರಿ ರಸ್ತೆ ಮೇಲೆ ಸೇರಿದಂತೆ ಅಕ್ಕಪಕ್ಕದಲ್ಲಿ ಹಬ್ಬಿಕೊಂಡಿತ್ತು.
ಬೆಳಗ್ಗೆ ಮನೆಯ ಮುಂಭಾಗದಲ್ಲಿ ಯಾವುದೋ ಶೀಟೊಂದು ಬಿದ್ದ ಶಬ್ದವಾಯಿತು. ಗಾಬರಿಯಾಗಿ ಬಾಗಿಲು ತೆಗೆದು ನೋಡಿದರೆ ಕಾರ್ಖಾನೆಯ ಶೀಟುಗಳು ಎಗರಿ ಬಿದ್ದಿದ್ದವು. ಕಾರ್ಖಾನೆ ಬಳಿ ನೋಡಿದಾಗ ದಟ್ಟನೆಯ ಹೊಗೆ ತುಂಬಿಕೊಂಡಿತ್ತು ಎಂದು ಸ್ಥಳೀಯ ಮಹಿಳೆ ತಿಳಿಸಿದರು.
ಇಲ್ಲಿರುವ ಕೆಲವು ಕಾರ್ಖಾನೆಗಳಲ್ಲಿ ಒಂದಾದ ರಬ್ಬರ್ ಫ್ಯಾಕ್ಟರಿಯಿಂದ ದುರ್ವಾಸನೆ ಬರುತ್ತದೆ. ಜೊತೆಗೆ ಇಲ್ಲಿನ ಕೈಗಾರಿಕೆಗಳಿಂದ ಹೊರ ಬರುವ ಕೆಮಿಕಲ್‍ನಿಂದ ಕುಡಿಯುವ ನೀರು ಕಲುಷಿತಗೊಂಡಿದ್ದು, ಅನೇಕರು ರೋಗಗ್ರಸ್ಥರಾಗುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಕೈಗಾರಿಕೆಗಳನ್ನು ಎತ್ತಂಗಡಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಧ್ಯಮದೊಂದಿಗೆ ಮಾತನಾಡಿ, ಬೆಳಗ್ಗೆ ಕಾರ್ಮಿಕರು ತಿಂಡಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ಆ ವೇಳೆ ಸುಮಾರು 3 – 4 ಕಿಮೀ ವರೆಗೆ ಭೂಕಂಪದ ಅನುಭವ ಉಂಟಾಗಿದೆ. ಈ ಕಾರ್ಖಾನೆಯಲ್ಲಿ ಹರ್ಬಲ್ ಎಕ್ಸ್ಟಾರ್ಟ್ ಆಗುತ್ತಿದೆ. ಬೆಳಗ್ಗೆ ತಿಂಡಿಗೆ ಹೋಗುವಾಗ ಬಾಯ್ಲರ್ ಕಂಟ್ರೋಲ್ ಮಾಡುವುದನ್ನು ಮರೆತಿದ್ದಾರೆ. ಇದರಿಂದ ಉಷ್ಣಾಂಶ ಹೆಚ್ಚಾಗಿ ಈ ಘಟನೆ ನಡೆದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿ ನಡೆದಿಲ್ಲ ಎಂದು ತಿಳಿಸಿದರು.
ಇಲ್ಲಿನ ಕೈಗಾರಿಕೆಗಳಿಂದ ಬರುವ ಕೆಮಿಕಲ್‍ನಿಂದ ಹಾಗೂ ಹೊಗೆಯಿಂದ ಅನೇಕರಿಗೆ ಶ್ವಾಸಕೋಸದ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಕೈಗಾರಿಕೆಯ ಮಾಲೀಕರಿಗೆ ನೋಟೀಸ್ ನೀಡಿ ಆಗುವ ಅನಾಹುತಗಳನ್ನು ತಪ್ಪಿಸಬೇಕು. ಈ ಹಿಂದೆಯೂ ಕೂಡ ಇಂತಹದ್ದೇ ಘಟನೆ ನಡೆದು ಓರ್ವರು ಸಾವನ್ನಪ್ಪಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡುವ ಮೂಲಕ ಇಲ್ಲಿನ ಕೈಗಾರಿಕೆಗಳನ್ನು ಎತ್ತಂಗಡಿ ಮಾಡಲು ಒತ್ತಾಯಿಸಿದರಲ್ಲದೆ ಮುಂದಿನ ದಿನಗಳಲ್ಲಿ ಈ ಕೈಗಾರಿಕೆಯನ್ನು ನಡೆಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಮಾತನಾಡಿ, ಕೆಮಿಕಲ್ ಲೀಕೇಜ್ ಆಗಿ ಬಾಯ್ಲರ್ ಸ್ಪೋಟಗೊಂಡಿದೆ. ಈ ವಿಚಾರವಾಗಿ ಮಾಲಿನ್ಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ನಡೆದಿರುವ ಘಟನೆ ಬಗ್ಗೆ ವರದಿ ತಯಾರಿಸಲಾಗುವುದು. ಕೈಗಾರಿಕೆಯ ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು. ಇವರ ಬೇಜವಬ್ದಾರಿಯಿಂದ ಒಳಗೆ ಇದ್ದ ಇಬ್ಬರಿಗೆ ಗಾಯಗಲಾಗಿದ್ದು, ಹೊರಗಡೆ ರಸ್ತೆಯಲ್ಲಿ ಹೋಗುತ್ತಿದ್ದ ಓರ್ವ ವ್ಯಕ್ತಿಗೆ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಲಾಗಿದೆ.
ಪೊಲೀಸ್ ಇಲಾಖೆಗೂ ಈ ಅವಘಡದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕೈಗಾರಿಕೆಗಳಿಗೆ ನೋಟೀಸ್ ನೀಡಿ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಸೂಚನೆ ನೀಡಲಾಗುವುದು. ಇಲ್ಲವಾದಲ್ಲಿ ಅವರ ಮೇಲೆ ಕ್ರಮ ಜರುಗಿಸಿ ಕೈಗಾರಿಕೆಯನ್ನು ಎತ್ತಂಗಡಿ ಮಾಡಲಾಗುವುದು ಎಂದು ತಿಳಿಸಿದರು.
5 ವರ್ಷದ ಹಿಂದೆ ನಗರದ ಹೊರಭಾಗದಲ್ಲಿದ್ದ ಕೈಗಾರಿಕೆ ಇಂದು ನಗೆದ ಒಳಗೆ ಇದೆ. ತುಮಕೂರು ನಗರವು ಬೆಳೆಯುತ್ತಿದ್ದು, ಕೈಗಾರಿಕೆಗಳಿಂದ ಜನರಿಗೆ ಅನಾನುಕೂಲ ಆಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಕಾನೂನಾತ್ಮಕವಾಗಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ, ಪಾಲಿಕೆ ಸದಸ್ಯರು ಸೇರಿದಂತೆ ಸತ್ಯಮಂಗಲದ ನಿವಾಸಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
