ತುಮಕೂರು
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಪ್ರಗತಿಪರ ನಾಗರೀಕರ ಸಂಘಟನೆಗಳ ಒಕ್ಕೂಟ, ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಸ್ರಾರು ಜನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿ, ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಜಾರಿ ಮಾಡಕೂಡದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಬಿಸಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾವಿರಾರು ಜನ ರಾಷ್ಟ್ರ ಧ್ವಜ ಹಿಡಿದು, ವಿವಾದಿತ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸುವ ಭಿತ್ತಿ ಫಲಕಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಆಗಮಿಸಿದರು.
ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಜಾರಿಯ ಮೂಲಕ ದೇಶವನ್ನು ಒಡೆಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸಂವಿಧಾನ ವಿರೋಧಿ, ಜನ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಮುಖಂಡರು ಒತ್ತಾಯಿಸಿದರು.
ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಸಂವಿಧಾನದ ಆರ್ಟಿಕಲ್ 14 ಮತ್ತು 21ರ ಪ್ರಕಾರ ಸಮಾನತೆ ಮತ್ತು ಬದುಕುವ ಹಕ್ಕು ಕಸಿದುಕೊಂಡಂತಾಗುತ್ತದೆ. ಈಗ ಜಾರಿಗೊಳಿಸಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿ ಕಾಯ್ದೆ ಮೂಲಭೂತ ಹಕ್ಕುಗಳು, ನೈಸರ್ಗಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಸಮಾಜವನ್ನು ಛಿದ್ರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಭಾರತ ಸಂವಿಧಾನ ಪ್ರಸ್ತಾವನೆಯಲ್ಲಿ ಉಲ್ಲೇಕಿಸಿರುವಂತೆ ಭಾರತ ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ದೇಶವೆಂದು ಘೋಷಿಸಲಾಗಿದೆ. ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತದೆ. ಭಾರತೀಯರು ನಂಬಿರುವ ವಸುದೈವಂ ಕುಟುಂಬಕಂ ಮತ್ತು ಸರ್ವೇಜನೋ ಸುಖಿನೋಭವಂತು, ಭಾತೃತ್ವ, ಸೋದರತೆ ತತ್ವಗಳು ಮಾನವೀಯತೆಯನ್ನೇ ಸಾರುತ್ತವೆ.
ಇಂತಹ ವೈವಿಧ್ಯಮಯ ಭಾಷೆ, ಧರ್ಮ, ಆಚಾರ-ವಿಚಾರಗಳ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲರೂ ನೋವು, ಸಂಕಟಪಡುವಂತಹ ಘಟನೆಗಳು ನಡೆಯುತ್ತಿದ್ದು, ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆಯಿಂದ ಜನತೆ ಘಾಸಿಕೊಂಡಿದೆ. ಜಾತಿ, ಧರ್ಮ, ಲಿಂಗ, ಜನ್ಮಸ್ಥಳ, ವರ್ಣದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂಬುದನ್ನು ಸಂವಿಧಾನ ನಮಗೆ ಒದಗಿಸಿಕೊಟ್ಟಿರುವ ಮೂಲಭೂತ ಹಕ್ಕು ಎಂದು ಮುಖಂಡರು ಹೇಳಿದರು.
ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಧರ್ಮದ ಆಧಾರದಲ್ಲಿ ದೇಶ ಒಡೆಯುವ ಉದ್ದೇಶ ಹೊಂದಿದೆ. ಯಾವುದೇ ಕಾರಣಕ್ಕೂ ದೇಶದಲ್ಲಿ ಈ ಕಾಯ್ದೆಗಳು ಜಾರಿಯಾಗಬಾರದು. ಜಾರಿ ಮಾಡಲು ಹೊರಟರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮುಖಂಡರು ಭಾಷಣ ಆರಂಭಿಸುವ ಮೊದಲು ರಾಷ್ಟ್ರಗೀತೆ ಹಾಡಲಾಯಿತು. ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡಿ, ಗೌರವ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮುಸ್ಲೀಂ ಸಮುದಾಯದವರೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಇವರು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ರಾರಾಜಿಸಿದವು. ಬಿಜಿಎಸ್ ವೃತ್ತದಿಂದ ಮೆರವಣಿಗೆ ಆರಂಭವಾಯಿತು. ನಗರದ ವಿವಿಧ ಭಾಗಗಳಿಂದ ಪ್ರತಿಭಟನಾಕಾರರು ಗುಂಪುಗುಂಪಾಗಿ ಬಂದು ಸೇರಿ, ಅಲ್ಲಿಂದ ಡೀಸಿ ಕಚೇರಿಗೆ ಆಗಮಿಸಿದರು. ಮೆರವಣಿಗೆ ಮಾರ್ಗದುದ್ದಕ್ಕೂ ಹಾಗೂ ಡಿಸಿ ಕಚೇರಿ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತಿಗೆ ನಿಯೋಜಿಸಲಾಗಿತ್ತು. ಅಶೋಕ ರಸ್ತೆ, ಡಿಸಿ ಕಚೇರಿ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಪ್ರತಿಭಟನೆ ಮುಗಿಯುವವರೆಗೆ ನಿರ್ಬಂಧಿಸಲಾಗಿತ್ತು.
ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಶಾಂತಿ, ಶಿಸ್ತು ಗಮನ ಸೆಳೆಯಿತು. ಪ್ರತಿಭಟನಾಕಾರರ ನಡವಳಿಕೆಗಳಿಗೆ ಪೊಲೀಸರೂ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪೊಲೀಸರು ಪ್ರತಿಭಟನೆಗೆ ನೀಡಿದ್ದ ಸಮಯಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಸಾವಿರಾರು ಜನ ಜಮಾಯಿಸಿದ್ದರೂ ಯಾವುದೇ ಗೊಂದಲ, ನೂಕುನುಗ್ಗಲಾ ಗದಂತೆ ಅವರಲ್ಲೇ ಇದ್ದ ಸ್ವಯಂಸೇವಕರು ನಿಯಂತ್ರಿಸಿದರು. ಮೆರವಣೆಗೆ ವೇಳೆ ಕೂಡಾ ಟ್ರಾಫಿಕ್‍ಜಾಮ್ ಆಗದಂತೆ ಎಚ್ಚರಿಕೆ ವಹಿಸಿದರು. ಈ ವ್ಯವಸ್ಥೆಯಿಂದ ಪೊಲೀಸರು ನಿರಾಳಗೊಂಡರು.
ವಿವಿಧ ಸಂಘಟನೆಗಳ ಮುಖಂಡರಾದ ಪ್ರೊ. ಕೆ. ದೊರೈರಾಜ್, ಸಿ. ಯತಿರಾಜು, ಮಾಜಿ ಶಾಸಕರಾದ ಷಫಿ ಅಹಮದ್, ಡಾ. ರಫಿಕ್ ಅಹಮದ್, ಶಾಸಕ ಡಿ.ಸಿ. ಗೌರಿಶಂಕರ್, ಸೈಯದ್ ಮುಜೀಬ್, ಬಿ. ಉಮೇಶ್, ಎನ್. ಕೆ. ಸುಬ್ರಹ್ಮಣ್ಯ, ಗಿರೀಶ್, ಎ. ನರಸಿಂಹಮೂರ್ತಿ, ಅತೀಕ್ ಅಹಮದ್, ಅಸ್ಮಾಂ ಪಾಷಾ, ನಯಾಜ್ ಅಹಮದ್, ಬೆಳ್ಳಿ ಲೋಕೇಶ್, ಪಿ.ಎನ್.ರಾಮಯ್ಯ, ತಾಜುದ್ದೀನ್, ಅಫ್ತಾಬ್, ಉಬೇದ್ ಅಹಮದ್, ನಿಸಾರ್ ಅಹಮದ್, ಕೆಜಿಎನ್ ರಫಿಕ್, ರಾಹಿಲ್ ಅಹಮದ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ನಂತರ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಶಾಂತಿ, ಶಿಸ್ತು ಗಮನ ಸೆಳೆಯಿತು. ಪ್ರತಿಭಟನಾಕಾರರ ನಡವಳಿಕೆಗಳಿಗೆ ಪೊಲೀಸರೂ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪೊಲೀಸರು ಪ್ರತಿಭಟನೆಗೆ ನೀಡಿದ್ದ ಸಮಯಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಸಾವಿರಾರು ಜನ ಜಮಾಯಿಸಿದ್ದರೂ ಯಾವುದೇ ಗೊಂದಲ, ನೂಕುನುಗ್ಗಲಾಗದಂತೆ ಅವರಲ್ಲೇ ಇದ್ದ ಸ್ವಯಂಸೇವಕರು ನಿಯಂತ್ರಿಸಿದರು. ಮೆರವಣೆಗೆ ವೇಳೆ ಕೂಡಾ ಟ್ರಾಫಿಕ್‍ಜಾಮ್ ಆಗದಂತೆ ಎಚ್ಚರಿಕೆ ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
