ಬೆಂಗಳೂರು
ಸ್ಯಾಂಡಲ್‍ವುಡ್‍ನ ನಾಲ್ವರು ಮೇರು ನಟರು ಹಾಗೂ ನಾಲ್ವರು ನಿರ್ಮಾಪಕರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ದಾಳಿ ಬಹುತೇಕ ಮುಕ್ತಾಯಗೊಂಡಿದೆ.
ಹಿರಿಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕಿಚ್ಚ ಸುದೀಪ್, ನಟ ಯಶ್ ಹಾಗೂ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್, ಕಿರಂಗದೂರು ವಿಜಯ್, ಮನೋಹರ್ ಮತ್ತು ಜಯಣ್ಣ ಮನೆಯಲ್ಲಿ ಮೊನ್ನೆ ಬೆಳಗಿನ ಜಾವದಿಂದ ಐಟಿ ಅಧಿಕಾರಿಗಳು ಆಕ್ಷನ್, ಕಟ್ ಹೇಳಿ ಊಹೆಗೂ ನಿಲುಕದ ರೀತಿಯಲ್ಲಿ ಶಾಕ್ ನಿಡಿದ್ದಾರೆ.
ಬಾಲಿವುಡ್, ಟಾಲಿವುಡ್ ಸೇರಿದಂತೆ ಇನ್ನಿತರ ಚಿತ್ರರಂಗದ ನಟರ ಮನೆಯಲ್ಲಿ ಇಂತಹ ದಾಳಿ ಈಗಾಗಲೇ ಸಾಕಷ್ಟು ಬಾರಿ ನಡೆದಿದೆಯಾದರೂ, ಸ್ಯಾಂಡಲ್‍ವುಡ್‍ನಲ್ಲಿ ಏಕಕಾಲಕ್ಕೆ ದಿಗ್ಗಜ ನಟ, ನಿರ್ಮಾಪಕರ ನಿವಾಸಗಳ ಮೇಲಿನ ದಾಳಿ ಇದೇ ಮೊದಲು ಎನ್ನಬಹುದು.
ಯಶ್ ಮನೆಗೆ ಹಿರಿಯ ಐಟಿ ಅಧಿಕಾರಿ ಆಗಮನ:-
ನಟ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ಇಂದೂ ಕೂಡ ದಾಖಲಾತಿಗಳ ಪರಿಶೀಲನೆ ಕಾರ್ಯ ಮುಂದುವರಿಸಿದ್ದಾರೆ. ನವದೆಹಲಿಯಿಂದ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಆಗಮಿಸಿದ್ದು, ಯಶ್ ಪತ್ನಿ ರಾಧಿಕಾ ಪಂಡಿತ್ ಸೀಮಂತಕ್ಕೆ ನೀಡಲಾಗಿರುವ ಭಾರಿ ಮೊತ್ತದ ಉಡುಗೊರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ರಾಧಿಕಾ ಪಂಡಿತ್ ತವರು ಮನೆಯಲ್ಲಿಯೂ ಕುಟುಂಬ ಸದಸ್ಯರ ವಿಚಾರಣೆ ನಡೆಸಿ, ಸ್ಥಿರಾಸ್ತಿ, ಚರಾಸ್ತಿ, ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಪರಿಶೀಲನೆ ನಡೆಸಿದ್ದು, ದಾಖಲಾತಿಗಳ ಪ್ರತಿಯನ್ನು ತೆಗೆದುಕೊಳ್ಳಲು ಪ್ರಿಂಟರ್ ತರಿಸಿಕೊಂಡಿದ್ದು, ಇಂದು ಮಧ್ಯಾಹ್ನದೊಳಗೆ ಎಲ್ಲ ಪ್ರಕ್ರಿಯೆಗಳೂ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
-:ಶಿವರಾಜ್, ಪುನೀತ್‍ಗೆ ರಿಲೀಫ್:-
ನಟ ಶಿವರಾಜ್‍ಕುಮಾರ್ ಹಾಗೂ ಅವರ ಸೋದರ ಪುನೀತ್ ರಾಜಕುಮಾರ್ ಮನೆಯಲ್ಲಿನ ಐಟಿ ಪರಿಶೀಲನೆ ನಿನ್ನೆ ತಡರಾತ್ರಿಗೆ ಅಂತ್ಯಗೊಂಡಿದ್ದು, ಇಬ್ಬರೂ ನಿರಾಳರಾಗಿದ್ದಾರೆ.“ಆದಾಯ ತೆರಿಗೆಗೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಸರಿಯಾಗಿವೆ. ಶ್ರೀಮುತ್ತು ಪ್ರೋಡಕ್ಷನ್ಸ್ ಹಾಗೂ ಇನ್ನಿತರ ವ್ಯವಹಾರಗಳ ಬಗ್ಗೆ ಪ್ರಶ್ನಿಸಿದ್ದು, ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮೊನ್ನೆಯಿಂದಲೂ ಅಧಿಕಾರಿಗಳಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದು, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ” ಎಂದು ಶಿವರಾಜ್‍ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಟ ಪುನೀತ್ ರಾಜ್‍ಕುಮಾರ್, “ಜವಾಬ್ದಾರಿಯುತ ನಾಗರಿಕನಾಗಿ ಐಟಿ ಅಧಿಕಾರಿಗಳಿಗೆ ಸಹಕರಿಸಿದ್ದೇನೆ. ತೆರಿಗೆ ವಿಚಾರದಲ್ಲಿ ನಮ್ಮಿಂದ ಯಾವುದೇ ಲೋಪವಾಗಿಲ್ಲ” ಎಂದು ಹೇಳಿದ್ದು, ಹಾಗೂ ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ‘ನಟ ಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದಾರೆ.
ಮತ್ತೊಂದೆಡೆ ಜೆ.ಪಿ ನಗರದಲ್ಲಿರುವ ನಟ ಸುದೀಪ್ ಅವರ ಮನೆಯಲ್ಲಿಯೂ ಮೂರು ದಿನಗಳಿಂದ ನಡೆಯುತ್ತಿದ್ದ ಐಟಿ ಪರಿಶೀಲನೆ ಮುಗಿದಿದ್ದು, ಕೆಲ ದಾಖಲೆಗಳ ಸಮೇತ ಅಧಿಕಾರಿಗಳು ತೆರಳಿದ್ದಾರೆ. ನಿರ್ಮಾಪಕರಾದ ರಾಕ್‍ಲೈನ್ ವಿಜಯ್ ಕಿರಂಗದೂರು, ಮನೋಹರ್ ಹಾಗೂ ಜಯಣ್ಣ ಮನೆಯಲ್ಲಿ ಐಟಿ ಪರಿಶೀಲನೆ ಮುಕ್ತಾಯಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
