ಕೊರಟಗೆರೆ
ಭಾರಿ ಮಳೆ ಬಿರುಗಾಳಿಯ ರಭಸಕ್ಕೆ ರೈತ ಕಷ್ಟಪಟ್ಟು ಬೆಳೆದಿದ್ದ ಬಾಳೆ ತೋಟ ಹಾಗೂ ರೈತರ ವಾಸದ ಮನೆಯ ಛಾವಣಿಯ 5 ಕ್ಕೂ ಹೆಚ್ಚು ಶೀಟುಗಳು ಅರ್ಧ ಕಿಮೀ ದೂರಕ್ಕೆ ಹಾರಿ ಹೋಗಿರುವ ಘಟನೆ ನಡೆದಿದೆ.
ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊನ್ನಾರನಹಳ್ಳಿ (ರಾಜಯ್ಯನಪಾಳ್ಯ) ಗ್ರಾಮದ ಜೋಗಪ್ಪ ಎಂಬುವರ ಸರ್ವೆ ನಂ 47 ರಲ್ಲಿ 1 ಎಕರೆ 20 ಗುಂಟೆ ಬಾಳೆ ತೋಟದಲ್ಲಿ 600 ಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿ 60 ಸಾವಿರ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ನಾಗಣ್ಣ ಎಂಬುವರ ವಾಸದ ಮನೆಯ 5 ಕ್ಕೂ ಹೆಚ್ಚು ಶೀಟ್ಗಳು ಗಾಳಿಗೆ ಹಾರಿಹೋಗಿದ್ದು, ರೈತ ವಾಸಿಸಲು ಮನೆಯಿಲ್ಲದೆ ಕಂಗಾಲಾಗಿದ್ದಾರೆ.
ಬಾಳೆ ತೋಟ ಕಳೆದುಕೊಂಡ ಜೋಗಪ್ಪ ಮಾತನಾಡಿ, ಕೈಯಲ್ಲಿ ಹಣಇಲ್ಲದೆ ಬೇರೆ ಕಡೆಯಿಂದ ಕೈ ಬದಲು ಸಾಲ ಹಾಗೂ ಬ್ಯಾಂಕ್ಗಳಲ್ಲಿ ಸಾಲ ಮಾಡಿ, ಬೋರ್ವೆಲ್ ಕೊರೆಸಿ ಬರುವ ನೀರಿನಿಂದ 6 ತಿಂಗಳ ಹಿಂದೆ ಬಾಳೆ ತೋಟ ಕಟ್ಟಲಾಗಿತ್ತು. ವಿಪರೀತ ಗಾಳಿ ಮಳೆಯಿಂದ ಕೈಗೆ ಬಂದಿದ್ದ ಬೆಳೆ ನಾಶವಾಗಿದೆ. ಬಾಳೆ ಬೆಳೆ ಫಸಲಿಗೆ ಬಂದಿದ್ದು 15 ರಿಂದ 30 ದಿನಗಳಲ್ಲಿ ಬಾಳೆಗೊನೆ ಕಟಾವು ಮಾಡಬೇಕಿತ್ತು. ಇದರಿಂದ ಕೆಲವರ ಸಾಲ ತೀರಿಸಬಹುದು ಎಂದು ಕೊಂಡಿದ್ದೆ. ಮಳೆ ಬಿರುಗಾಳಿಯಿಂದ ಬಾಳೆ ತೋಟ ನೆಲಕ್ಕೆ ಉರುಳಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.
ಭಾರಿ ಬಿರುಗಾಳಿಗೆ ಬಾಳೆ ತೋಟ ನಾಶವಾಗಿ, ರೈತನ ವಾಸದ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು ರೈತನಿಗೆ ವಾಸ ಮಾಡಲು ಬೇರೆ ಮನೆಯಿಲ್ಲದೆ ಕಂಗಾಲಾಗಿದ್ದಾರೆ. ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರಕಾರದಿಂದ ಬರುವಂತಹ ಪರಿಹಾರದ ಹಣವನ್ನು ಕೊಡಿಸುವಂತೆ ಮನವಿ ಮಾಡಿದ್ದಾರೆ.
ಅಂತೆಯೆ ಕಂದಾಯ ಇಲಾಖೆಯ ಕೋಡ್ಲಹಳ್ಳಿ ವೃತ್ತದ ಗ್ರಾಮ ಲೆಕ್ಕಧಿಕಾರಿ ಸಿ.ಕೆ.ಎನ್ ಸ್ವಾಮಿ, ಗ್ರಾಮ ಸಹಾಯಕ ಜಯಾನಂದ ಮತ್ತು ತೋಟಗಾರಿಕೆ ಇಲಾಖೆ ಹರಿಕಿಶೋರ್ ಸ್ಥಳಕ್ಕೆ ಭೇಟಿ ನೀಡಿದ್ದರು. ರೈತರಿಗೆ ಸರ್ಕಾರದಿಂದ ಪ್ರಕೃತಿ ವಿಕೋಪದ ಅಡಿಯಲ್ಲಿ ನಾಶವಾಗಿರುವ ಅಷ್ಟೂ ಬೆಳೆಗೆ ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ