ಬಿಸಿಲಿನ ಝಳಕ್ಕೆ ನಲುಗಿದ ಚಳ್ಳಕೆರೆ

ಚಳ್ಳಕೆರೆ

       ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಳೆದ ಸುಮಾರು ಎರಡು ತಿಂಗಳುಗಳಿಂದ ಬೇಸಿಗೆಯ ಉರಿ ಬಿಸಿಲು ಜನರನ್ನು ತತ್ತರಗೊಳಿಸಿದೆ. ಬಿಸಿಲಿನ ತಾಪಕ್ಕೆ ಹೆದರಿದ ಜನ ಬೆಳಗ್ಗೆ 10 ಗಂಟೆಯಾದರೆ ಸಾಕು ತಮ್ಮ ಓಡಾಟವನ್ನೇ ಸ್ಥಗಿತಗೊಳಿಸುತ್ತಿದ್ಧಾರೆ. ನಗರದ ಎಲ್ಲಾ ರಸ್ತೆಗಳಲ್ಲೂ ಜನರ ಓಡಾಟ ಕಡಿಮೆಯಾಗಿ ಕೇವಲ ವಾಹನಗಳ ಓಡಾಟ ಮಾತ್ರ ನಾವು ಕಾಣಬಹುದು. ಹಿಂದೆಂದೂ ಕಂಡರ್ಯದಂತಹ ಉರಿ, ಉರಿ ಬಿಸಿಲಿಗೆ ಮಹಿಳೆಯರು, ಮಕ್ಕಳು, ವೃದ್ದರು ಜರ್ಜರಿತರಾಗಿದ್ಧಾರೆ. ಬಿಸಿಲಿನ ಝಳ ಜನರನ್ನು ಹೈರಾಣಾಗಿಸಿದೆ.

      ದಿನೇ ದಿನೆ ಏರಿತ್ತಿರುವ ಬಿಸಿಲು, ನೆರಳಿಗಾಗಿ ನಗರಕ್ಕೆ ಬಂದ ಜನರ ಹುಡುಕಾಟ ಮಧ್ಯಾಹ್ನದ ವೇಳೆಗೆ 38 ರಿಂದ 40 ಡಿಗ್ರಿ ಬಿಸಿಲ ತಾಪಮಾನ, ನಗರದ ಹೃದಯ ಭಾಗ ನೆಹರೂ ವೃತ್ತ ಖಾಲಿ ಖಾಲಿ, ವ್ಯಾಪಾರ ವಹಿವಾಟುಗಳಲ್ಲಿ ಎಂದೂ ಕಾಣದ ಇಳಿಕೆ, ಈ ಬಾರಿಯ ಬೇಸಿಗೆಯ ಬಿಸಿ ನಗರದ ಜನರನ್ನು ಹೈರಾಣವನ್ನಾಗಿಸಿದೆ. ಗ್ರಾಮೀಣ ಭಾಗದಿಂದ ಬರುವ ಜನರು ನಗರಕ್ಕೆ ಬರುತ್ತಿಲ್ಲ, ವ್ಯಾಪಾರ ವಹಿವಾಟಿನಲ್ಲಿ ಸಂಪೂರ್ಣ ಇಳಿಕೆ, ವ್ಯಾಪಾರಿಗಳು ತತ್ತರ.

      ಚಿತ್ರದುರ್ಗ ಜಿಲ್ಲೆಯಲ್ಲೇ ಅತಿ ಹೆಚ್ಚು ಗ್ರಾಮಗಳನ್ನು ಹೊಂದಿನ ತಾಲ್ಲೂಕು ಚಳ್ಳಕೆರೆ ಶೇಂಗಾ ವಹಿವಾಟಿನಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದ ನಗರ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರದಿಂದ ಶೇಂಗಾ, ಸೂರ್ಯಕಾಂತಿ, ಈರುಳ್ಳಿ, ಹುಣಸೆ ಹಣ್ಣು, ಮೆಕ್ಕೆಜೋಳವೂ ಸೇರಿದಂತೆ ಹಲವಾರು ಧಾನ್ಯಗಳ ಕೋಟಿ ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ, ಪ್ರಸ್ತುತ ಉರಿಬಿಸಿಲು, ಬರದಿಂದ ಎರಡನೇ ಬಾಂಬೆ ನಲಗುತ್ತಿದೆ.

       ಕಳೆದ 8-10 ವರ್ಷಗಳಿಂದ ಸಮೃದ್ಧಿ ಮಳೆಯಿಲ್ಲ, ಮಳೆ ಬಂದರೂ ಸರಿಯಾಗಿ ಬೆಳೆಯಾಗಿಲ್ಲ, ಬೆಳೆಯಾದರೂ ಬೆಲೆ ಸಿಗದ ಕಾರಣ ರೈತರು ಕೃಷಿ ಚಟುವಟಿಕೆಯಿಂದ ಹಿಮುಖವಾಗುತ್ತಿದ್ದಾರೆ. ದಿನೇ ದಿನೆ ಏರುತ್ತಿರುವ ಬಿಸಿಲು ಜನರಲ್ಲಿ ನಿರುತ್ಸಾಹಿಗಳನ್ನಾಗಿಸುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗುವ ನೆತ್ತಿ ಸುಡುವ ಬಿಸಿಲು ಶಾಲಾ-ಕಾಲೇಜಿಗೆ ಬರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿದೆ. ವಿದ್ಯಾರ್ಥಿಗಳು ಪುಸ್ತಕ, ತಾವು ತಂದ ವೇಲ್‍ಗಳನ್ನು ತಲೆಗೆ ಒದ್ದು ಓಡಾಡುತ್ತಿದ್ದಾರೆ. ಈ ಬಾರಿಯ ಬೇಸಿಗೆ ಉರಿ ಬಿಸಿಲು ಜನರನ್ನು ನಿತ್ರಾಣವನ್ನಾಗಿಸಿದೆ.

      ಸಾವಿರಾರು ವರ್ಷಗಳಿಂದ ಮಕ್ಕಳಂತೆ ಸಾಕಿದ್ದ ತೆಂಗು, ಅಡಿಕೆ ಮರಳು ನೀರಿಲ್ಲದೆ ಒಣಗುತ್ತಿವೆ. ರೈತರು ತಾವು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಶತಾಯ ಪ್ರಯತ್ನಗಳನ್ನು ಪಡುತ್ತಿದ್ದಾರೆ. 500 ರಿಂದ 800 ಅಡಿಗಳಷ್ಟು ಬೋರ್‍ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ. ತಾವು ಹಾಕಿದ ಬೆಳೆ ತಮ್ಮ ಕಣ್ಣು ಮುಂದೆಯೇ ಒಣಗುವುದನ್ನು ನೋಡಲಾಗದೆ ತಾವೇ ಮರಳನ್ನು ಕಡಿಯುತ್ತಿದ್ದಾರೆ. ಕೆಲವೊಂದು ತೋಟಗಳು ಒಣಗಿ ಬೆಂಕಿಗೆ ಆಹುತಿಯಾಗಿವೆ.

        ಈ ಭೀಕರ ಕ್ಷಾಮ ಜನರಲ್ಲಿ ನೆಮ್ಮದಿ ಕೆಡಿಸಿದೆ ಎಂದರೆ ತಪ್ಪಿಲ್ಲ. ತಾಲ್ಲೂಕು ಭಾಗದಲ್ಲಿ ಉಳಿದ 5 ರಷ್ಟು ಕೃಷಿಕರು ತಾವು ಹಾಕಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಗಳನ್ನು ಪಡುತ್ತಿದ್ದಾರೆ. ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಹೆಚ್ಚುತ್ತಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತವಾಗಿ ಫಸಲು ಬೆಳೆಯುತ್ತಿದ್ದ ಭೂಮಿಗಳು ರಿಯಲ್ ಎಸ್ಟೇಟ್ ದಂಧೆಕೋರರ ಪಾಲಾಗುತ್ತಿವೆ. ಈ ಬಾರಿಯಾದರೂ ಮಳೆ ಬಂದು ಜನರ ಸಂಕಷ್ಟಗಳನ್ನು ದೂರ ಮಾಡುವುದೇ ಎಂಬುವುದು ತಾಲ್ಲೂಕು ಜನರ ನಿರೀಕ್ಷೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link