ದಾವಣಗೆರೆ:
ಕನಿಷ್ಠ ವೇತನ ಜಾರಿಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಫೆ.14ರಂದು ಬಿಸಿಯೂಟ ತಯಾರಕರು ಅಂದು ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಿದ್ದಾರೆಂದು ಫೆಡರೇಷನ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಜಯದೇವ ವೃತ್ತದಿಂದ ಎಸಿ ಕಚೇರಿಯ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಅಂದು ಬಿಸಿಯೂಟ ತಯಾರು ಮಾಡುವುದನ್ನು ಬಹಿಷ್ಕರಿಸಿ ಬಿಸಿಯೂಟ ತಯಾರಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಬಿಸಿಯೂಟ ತಯಾರಕರ ಸಂಭಾವನೆ ಹೆಚ್ಚು ಮಾಡಬಹುದೆಂಬ ನಿರೀಕ್ಷೆ ಇತ್ತು. ಆದರೆ, ಎರಡೂ ಸರ್ಕಾರಗಳು ಸಹ ಬಿಸಿಯೂಟ ತಯಾರಕರಿಗೆ ಯಾವುದೇ ಅನುದಾನ ನೀಡದೇ ಸಂಪೂರ್ಣ ಕಡಗಣಿಸಿವೆ ಎಂದು ಆರೋಪಿಸಿದರು.
ಹಿಂದೆ ಬಿಸಿಯೂಟ ತಯಾರಕರು ಬೆಂಗಳೂರಿನಲ್ಲಿ ಅನಿರ್ಧಿಷ್ಠಾವಧಿ ಕೈಗೊಂಡಿದ್ದ ಸಂದರ್ಭದಲ್ಲಿ ಫೆಡರೇಷನ್ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಭಾವನೆ ಹೆಚ್ಚು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ನಯಾ ಪೈಸೆಯೂ ಹೆಚ್ಚಳ ಮಾಡದೇ ಸಂಪೂರ್ಣ ಕಡೆಗಣಿಸಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 16 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ದಿನದ ಐದಾರು ಗಂಟೆ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಉಣ ಬಡಿಸುತ್ತಿದ್ದಾರೆ. ಆದರೆ, ಸರ್ಕಾರ ಮುಖ್ಯ ಅಡುಗೆಯವರಿಗೆ 2700 ರೂ. ಹಾಗೂ ಸಹಾಯಕ ಅಡುಗೆಯವರಿಗೆ 2600 ರೂ. ಮಾತ್ರ ಸಂಭಾವನೆ ನೀಡುತ್ತಿದೆ. ಇಷ್ಟು ಕಡಿಮೆ ಸಂಭಾವನೆಯಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಸೇರಿದಂತೆ ಮತ್ತಿತರ ಸಂಸ್ಥೆಗಳಿಗೆ ಕೊಡುವ ಹುನ್ನಾರವನ್ನು ತಕ್ಷಣವೇ ಕೈಬಿಡಬೇಕು. ಇವರಿಗೆ ಕೆಲಸ ಭದ್ರತೆ ಒದಗಿಸಿ, ಶಾಲಾ ಸಿಬ್ಬಂದಿಗಳನ್ನಾಗಿ ಪರಿವರ್ತಿಸಬೇಕು. ಇವರನ್ನು ಕಾರ್ಮಿಕರೆಂದು ಪರಿಗಣಿಸಿ, ಕಾರ್ಮಿಕ ಆಯ್ದೆಯಡಿ ತರಬೇಕು. ಪಿಎಫ್, ಇಎಸ್‍ಐ ಸೌಲಭ್ಯ ಕಲ್ಪಿಸಬೇಕು. ಅಪಘಾತ ಪರಿಹಾರವನ್ನಾಗಿ 2 ಲಕ್ಷ ಹಾಗೂ ಮರಣ ಪರಿಹಾರವನ್ನಾಗಿ 5 ಲಕ್ಷ ರೂ. ಕೊಡಬೇಕು. ಸಂಬಳ ಸಹಿತ ದಸರಾ ಹಾಗೂ ಬೇಸಿಗೆ ರಜೆ ನೀಡಬೇಕು. 60 ವರ್ಷ ವಯಸ್ಸಾದ ಬಿಸಿಯೂಟ ತಯಾರಕರಿಗೆ ಮಾಸಿಕ 3 ಸಾವಿರ ರೂ. ನಿವೃತ್ತ ಪಿಂಚಣಿ ಹಾಗೂ 2 ಲಕ್ಷ ರೂ. ಇಡುಗಂಟುಂ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‍ನ ವನಜಾಕ್ಷಿ, ಜ್ಯೋತಿಲಕ್ಷ್ಮೀ, ಸರೋಜ, ಅರುಣಾ, ಪ್ರಮೀಳಾ, ಚನ್ನಮ್ಮ ಪದ್ಮ, ಮಂಜಮ್ಮ ಬೇತೂರು, ಗದಿಗೇಶ್ ಮತ್ತಿತರರು ಹಾಜರಿದ್ದರು.