ಬೆಂಗಳೂರು
ಐಐಟಿ,ಐಐಐಟಿ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗು ಸಚಿವರನ್ನು ಆಹ್ವಾನಿಸದ ಬಿಜೆಪಿ ವರ್ತನೆಯನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ಖಂಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಇದು ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ . ಮುಖ್ಯಮಂತ್ರಿ ಯಾರೇ ಆಗಿದ್ದರೂ ಕೇಂದ್ರ ಸರ್ಕಾರ ಆಹ್ವಾನ ನೀಡಬೇಕಿತ್ತು.ಎಲ್ಲಾ ಯೋಜನೆಗಳು ತಮ್ಮದೇ ಎಂದು ಬಿಂಬಿಸಿಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ರಾಜ್ಯದಲ್ಲಿ ನಡೆದಿರುವ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಬಗ್ಗೆ ಕನಿಷ್ಟ ಅರಿವಿರಬೇಕಿತ್ತು ಎಂದು ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್,ರಾಜ್ಯ ಸರ್ಕಾರ 100 ಎಕರೆ ಅಧಿಕ ಭೂಮಿಯನ್ನು ಐಐಐಟಿಗೆ ನೀಡದೆ.ಐಐಐಟಿ ತರಲು ರಾಜ್ಯದ ಎಲ್ಲಾ ಸಂಸದರು,ಶಾಸಕರು,ಸರ್ಕಾರಗಳು ನಿರಂತರ ಪ್ರಯತ್ನ ನಡೆಸಿವೆ.ಜೊತೆಗೆ ರಾಜ್ಯದ ಪಾಲಿನ ಅನುದಾನವನ್ನು ಸರ್ಕಾರ ನೀಡಿದೆ.ಹೀಗಿದ್ದರೂ ಕನಿಷ್ಟ ನಿಯಾಮವಳಿ ಪ್ರಕಾರ ಮುಖ್ಯಮಂತ್ರಿ ಅವರನ್ನು ಆಹ್ವಾನಿಸದೆ ಅಪಮಾನ ಮಾಡಿದ್ದಾರೆ.ಪ್ರಧಾನ ಮಂತ್ರಿ ರಾಜ್ಯದ ಜನತೆಗೆಯ ಕ್ಷಮೆ ಕೋರಬೇಕೆಂದು ಅವರು ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿಯನ್ನು ಆಹ್ವಾನಿಸದೇ ಇರುವ ಕುರಿತು ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ನರೇಂದ್ರ ಮೋದಿಗೆ ಯಾವುದೇ ಪ್ರೊಟೋಕಾಲ್ ಗೊತ್ತಿಲ್ಲ. ಬಂದು ರಾಜಕೀಯ ಭಾಷಣ ಮಾಡಲಿಕ್ಕೆ ಬರ್ತಿದ್ದಾರೆ. ಅವರನ್ನು ರಾಜಕೀಯವಾಗಿಯೇ ಎದುರಿಸೋಣ ಎಂದು ಹೇಳಿದ್ದಾರೆ.