ಚಳ್ಳಕೆರೆ
ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಮಹಿಳಾ ಸಮುದಾಯದ ಅಭ್ಯುದಯಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಿದ್ದಾರೆ. ವಿಶೇಷವಾಗಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‍ನ್ನು ಮಹಿಳಾ ಸಮುದಾಯಕ್ಕೆ ನೀಡುವ ಮೂಲಕ ಮಹಿಳೆಯರು ಹೊಗೆ ರಹಿತ ಬದಕನ್ನು ಬಾಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ಧಾರೆ. ಮತ್ತೊಮ್ಮೆ ಈ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸಬೇಕೆಂಬ ಕೋಟಿ ಕೋಟಿ ಜನರ ಆಶಯ. ಬಿಜೆಪಿಗೆ ಮತ ನೀಡುವ ಮೂಲಕ ಈಡೇರಿಸೋಣವೆಂದು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಭ ತಿಳಿಸಿದರು.
ಅವರು, ಶನಿವಾರ ನಗರದ 9,10,11,12ನೇ ವಾರ್ಡ್‍ಗಳಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿಯವರಿಗೆ ಮತಯಾಚನೆ ಮಾಡುವ ಮೂಲಕ ಪ್ರಚಾರ ನಡೆಸಿದರು. ಈಗಾಗಲೇ ನಗರದ 31 ವಾರ್ಡ್‍ಗಳ ಪೈಕಿ ಬಹುತೇಕ ವಾರ್ಡ್‍ಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಮತದಾರರು ದೇಶದ ಹಿತದೃಷ್ಠಿಯಿಂದ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತ ಪಡಿಸಿದ್ಧಾರೆ. ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಿ ನರೇಂದ್ರಮೋದಿಯವರು ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸುವ ಸಂದರ್ಭವನ್ನು ದೇಶದ ಜನತೆ ಎದುರು ನೋಡುತ್ತಿದೆ ಎಂದರು.
11ನೇ ವಾರ್ಡ್ ನಗರಸಭಾ ಸದಸ್ಯ ಎಸ್.ಜಯಣ್ಣ ಮಾತನಾಡಿ, ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಎಂದು ಜನರ ಮನೆ ಬಾಗಿಲಿಗೆ ಹೋಗಿ ಪಕ್ಷದ ಕರಪತ್ರ ನೀಡಿ ವಿನಂತಿಸಿದಾಗ ಎಲ್ಲರಿಂದಲೂ ಬರುವ ಒಂದೇ ಉತ್ತರ ನಾವು ನಮ್ಮ ಮತವನ್ನು ದೇಶದ ರಕ್ಷಕರಿಗೆ ಕೊಡುತ್ತೇವೆನ್ನುತ್ತಾರೆ.
ಈ ಬಾರಿ ಎಲ್ಲೆಡೆ ಬಿಜೆಪಿ ಪರವಾದ ಒಲವು ಹೆಚ್ಚಿದೆ. ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ಮುಂದಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಗರದ ಮನೆ, ಮನೆಗೂ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದು, ಎಲ್ಲರಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಈಗಾಗಲೇ ನಗರದ 31 ವಾರ್ಡ್‍ಗಳಲ್ಲೂ ಸಹ ಮಹಿಳಾ ಘಟಕ ಪ್ರಚಾರ ನಡೆಸುತ್ತಿದ್ದು, ಎಲ್ಲರೂ ಸಹಕಾರ ನೀಡುತ್ತಿದ್ದೇವೆ. ನಗರದ ಕೆಲವು ಸಂಘ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಮೋದಿಯವರ ಗೆಲುವಿಗಾಗಿ ಹಲವಾರು ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿ ಗೆಲುವು ನಿಶ್ಚಿತವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಜಿಲ್ಲಾ ಮುಖಂಡ ಸಿ.ಎಸ್.ಪ್ರಸಾದ್, ಟಿ.ಬೋರನಾಯಕ, ನಗರ ಘಟಕದ ಮುಖಂಡ ಡಿ.ಎಂ.ತಿಪ್ಪೇಸ್ವಾಮಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಟಿ.ಮಂಜುನಾಥ, ನಗರಸಭಾ ಸದಸ್ಯೆ ಪಾಲಮ್ಮ, ಇಂಧುಮತಿ, ಅನ್ನಪೂಣಮ್ಮ, ಹುಲಿಗಪ್ಪ, ಮಹೇಶ್, ಎಸ್.ಬುಜ್ಜಿ, ಮಂಜುನಾಥ, ನಿವೃತ್ತ ಕಾರ್ಯಪಾಲಕ ಅಭಿಯಂತರ ದೇವರಾಜು ಮುಂತಾದವರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.