ದಾವಣಗೆರೆ:
ನಾಡಿನ ಇಬ್ಬರು ಮುತ್ಸದ್ಧಿ ರಾಜಕಾರಣಿಗಳನ್ನು ಕಳೆದುಕೊಂಡು, ರಾಜ್ಯದ ಜನತೆ ಶೋಕದಲ್ಲಿರುವಾಗ ಬಿಜೆಪಿ ನಾಯಕರು ಹುಟ್ಟು ಹಬ್ಬ ಆಚರಿಸಿಕೊಂಡು ಸಂಭ್ರಮಿಸಿರುವುದು ಬಿಜೆಪಿಯ ವಿಕೃತಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರುಗಳಾದ ಎಂ.ಹೆಚ್.ಅಮರ್‍ನಾಥ್ (ಅಂಬರೀಶ್) ಹಾಗೂ ಸಿ.ಕೆ. ಜಾಫರ್ ಷರೀಫ್ ಅವರುಗಳ ನಿಧನದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ಹಾಗೂ ದೇಶಕ್ಕೆ ಬ್ರಾಡ್‍ಗೇಜ್ ಪರಿಚಯಿಸಿದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ನಿಧನರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿತ್ತು. ಹೀಗೆ ನಾಡಿನಲ್ಲಿ ಶೋಕ ಇರುವ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಬಿಜೆಪಿಯ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಕೇಂದ್ರ ಸಚಿವ, ಬಿಜೆಪಿ ನಾಯಕ ಅನಂತಕುಮಾರ್ ನಿಧನರಾದ ಸಂದರ್ಭದಲ್ಲಿ ಐದು ದಿನಗಳ ಕಾಲ ಸರ್ಕಾರ ಶೋಕಾಚರಣೆ ಘೋಷಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ನಾಯಕರು ಎಲ್ಲಾ ಕಾರ್ಯಕ್ರಗಳನ್ನು ರದ್ದು ಮಾಡಿ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಇದು ಕಾಂಗ್ರೆಸ್‍ನ ಸಂಸ್ಕತಿಯಾಗಿದೆ. ಆದರೆ, ಶೋಕದಲ್ಲಿರುವಾಗ ಜನ್ಮ ದಿನಾಚರಣೆ ಮಾಡಿಕೊಂಡಿರುವ ಬಿಜೆಪಿ ನಾಯಕರ ಮನಸ್ಥಿತಿ ಆ ಪಕ್ಷದ ಸಂಸ್ಕತಿ ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಈ ಹಿಂದೆ ಜಿಲ್ಲೆ ಬರಗಾಲಕ್ಕೆ ತುತ್ತಾದ ಸಂದರ್ಭದಲ್ಲಿ ನಮ್ಮ ಪಕ್ಷದ ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರುಗಳು ಜನ್ಮ ದಿನವನ್ನು ಆಚರಿಸಿಕೊಂಡಿರಲಿಲ್ಲ. ಆದರೆ, ಬಿಜೆಪಿಯವರು ಸಾವಿನಲ್ಲೂ ಸಂಭ್ರಮಿಸಿದೆ.
ಹಣ, ಅಧಿಕಾರಕ್ಕಾಗಿ ಮಾತ್ರ ಜನ್ಮ ತಳೆದಿರುವ ಬಿಜೆಪಿ ಪಕ್ಷಕ್ಕೆ ಮತ್ತು ಆ ಪಕ್ಷದ ನಾಯಕರಿಗೆ ಸಂಸ್ಕತಿಯೇ ಇಲ್ಲ ಎಂದ ಅವರು, ಚುನಾವಣೆಯ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣ, ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಟಿಪ್ಪುಸುಲ್ತಾನ್ ಜಯಂತಿಯಂಥ ವಿಷಯಗಳ ಬಗ್ಗೆ ಅನಗತ್ಯವಾಗಿ ಕೆದಕುವ ಮೂಲಕ, ಜನರ ಭಾವನೆಗಳನ್ನು ಕೆರಳಿಸಿ, ಬಿಜೆಪಿ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಜಾಫರ್ ಷರೀಫ್ ಹಾಗೂ ನಟ, ರಾಜಕಾರಣಿ ಅಂಬರೀಷ್ ಅವರುಗಳು ಮೇರು ವ್ಯಕ್ತಿತ್ವವುಳ್ಳ ಸಜ್ಜನ ರಾಜಕಾರಣಿಗಳಾಗಿದ್ದಾರೆ. ಇವರು ಜಾತಿ, ಮತ, ಪಂಥ ಮೀರಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು ಜಾತ್ಯಾತೀತ ಜೀವನ ನಡೆಸಿದ್ದಾರೆ. ಈ ಇಬ್ಬರು ನಾಯಕ ಅಗಲಿಕೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಹೇಳಿದರು.
ಆನಗೋಡು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ಜಾಫರ್ ಷರೀಫ್ ಅವರು ಮುಸ್ಲಿಂ ಧರ್ಮದಲ್ಲಿ ಜನಸಿದ್ದರೂ ಸಹ ಎಲ್ಲಾ ಧರ್ಮಿಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ರೈಲ್ವೆ ಖಾತೆ ಸಚಿವರಾಗಿ ನೂರಾರು ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಹೆಗ್ಗಳಿಕೆ ಅವರಿಗೆ ಸಲ್ಲಲಿದೆ. ಅದರಂತೆ ನಟ ಅಂಬರೀಷ್ ರಾಜ್ಯದಲ್ಲದೇ ಬೇರೆಬೇರೆ ರಾಜ್ಯಗಳಲ್ಲಿನ ಅಭಿಮಾನಿಗಳ ಮನಗೆದ್ದವರು. ಮತ್ತೊಬ್ಬ ಅಂಬರೀಷ್ ಜನಿಸಬಹುದು. ಆದರೆ, ಅವರಂತಹ ವ್ಯಕ್ತಿತ್ವವುಳ್ಳ ಮತ್ತೊಬ್ಬ ಅಂಬರೀಷ್ ಜನಿಸಲಾರ ಎಂದರು.
ಜಿಲ್ಲಾ ಕಾಂಗ್ರೆಸ್‍ನ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಮಾತನಾಡಿ, ಚಿತ್ರದುರ್ಗ, ಚಳ್ಳಕೆರೆಗೆ ರೈಲು ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲೆಯ ಋಣ ತೀರಿಸಿದ್ದ ಜಾಫರ್ ಷರೀಫ್ ಅವರು ದೊಡ್ಡತನದ ವ್ಯಕ್ತಿತ್ವ ಹೊಂದಿದ್ದರು. ಜಿಂದೆ ಡಿ.ದೇವರಾಜ ಅರಸು ಅವರು, ಡಿ.ಬಿ. ಚಂದ್ರೇಗೌಡರು ಸೇರಿದಂತೆ ಮತ್ತಿತರರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಲೆತ್ನಿಸಿದಾಗ ಚಂದ್ರೇಗೌಡರು ಷರೀಫ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಆಮಿಷ ತೋರಿಸಿ ಕಾಂಗ್ರೆಸ್ ತೊರೆಯುವಂತೆ ಕೋರಿದ್ದರು.
ಆದರೆ, ಷರೀಫ್ ಅವರು ನನಗೆ ಪಕ್ಷ ನಿಷ್ಠೆಯೇ ಮುಖ್ಯ. ಹಾಗಾಗಿ, ನಾನು ಇಂದಿರಾಗಾಂಧಿಯವರೊಂದಿಗೆ ಕಾಂಗ್ರೆಸ್‍ನಲ್ಲೇ ಇರುವುದಾಗಿ ಹೇಳಿ, ಸಿಎಂ ಆಗುವ ಅವಕಾಶವನ್ನು ನಿರಾಕರಿಸಿದಂತ ಮಹಾತ್ಮರಾಗಿದ್ದಾರೆ. ಅಲ್ಲದೆ, ನಟ ಅಂಬರೀಷ್ ಅವರು ಎಸ್‍ಎಸ್ ಮಲ್ಲಿಕಾರ್ಜುನ್ ಆಪ್ತರಾಗಿದ್ದಲ್ಲದೇ, ದಾವಣಗೆರೆಗೆ ಬಂದಾಗಲೆಲ್ಲಾ ವಾರಗಟ್ಟಲೇ ಮಲ್ಲಣ್ಣ ಅವರೊಂದಿಗೆ ಸಮಯ ಕಳೆಯುತ್ತಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಪಂ ಸದಸ್ಯ ಕೆ.ಹೆಚ್.ಓಬಳೇಶಪ್ಪ, ಪಾಲಿಕೆ ಸದಸ್ಯರಾದ ಎಂ.ಹಾಲೇಶ್, ಜೆ.ಬಿ.ಲಿಂಗರಾಜ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರಾದ ಎ.ನಾಗರಾಜ್, ಮುಜಾಹಿದ್, ನಲ್ಕುಂದ ಹಾಲೇಶ್, ಯತಿರಾಜ್ ಮಠದ್, ದಾದಾಪೀರ್, ಆರೋಗ್ಯಸ್ವಾಮಿ, ಕೇರಂ ಗಣೇಶ್, ಶ್ರೀಕಾಂತ ಬಗಾರೆ, ಅಂಜಿನಪ್ಪ, ಹಲಗೇರಿ ಮಂಜಪ್ಪ, ಮೈನುದ್ದೀನ್, ಬಿ.ಎಂ.ರಾಮಸ್ವಾಮಿ, ನಂಜಾ ನಾಯ್ಕ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ