ಶಂಕುಸ್ಥಾಪನೆ ತಡೆಯಲು ಬಿಜೆಪಿಯಿಂದ ವಿಫಲ ಯತ್ನ …!!!

ಹುಳಿಯಾರು

       ಹುಳಿಯಾರು-ಬಾಣಾವರ ರಾಷ್ಟ್ರೀಯ ಹೆದ್ದಾರಿ 234 ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆಗೆ ಶಾಸಕ ಜೆ.ಸಿ.ಮಾಧುಸ್ವಾಮಿ ಅವರನ್ನು ಆಹ್ವಾನಿಸದೆ ಶಿಷ್ಠಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಯಿತು.

     ಸರ್ಕಾರದ ಯಾವುದೇ ಅಧಿಕೃತ ಕಾರ್ಯಕ್ರಮ ನಡಸಬೇಕಾದರೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಸುವುದು ಶಿಷ್ಠಾಚಾರ. ಆದರೆ ಶಾಸಕರನ್ನು ಆಹ್ವಾನಿಸದೆ ಏಕಾಏಕಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇದರಿಂದ ಶಾಸಕರಿಗೆ ಅಗೌರವ ಮಾಡಿದಂತ್ತಾಗಿದೆ. ಹಾಗಾಗಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡ ಬರಕನಹಾಲ್ ವಿಶ್ವನಾಥ್ ಆಗ್ರಹಿಸಿದರಲ್ಲದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ಹಣದಲ್ಲಿ ಹೈವೆ ರಸ್ತೆ ಕಾಮಗಾರಿ ಮಾಡುತ್ತಿದ್ದು ಬಿಜೆಪಿ ಶಾಸಕರು ಬಂದರೆ ತಮಗೆ ಪ್ರಚಾರ ಸಿಗೋದಿಲ್ಲವೆಂದು ಸಂಸದರು ಉದ್ದೇಶಪೂರ್ವಕವಾಗಿ ಶಾಸಕರನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿದರು.

      ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅವರು ಮಾತನಾಡಿ ಹುಳಿಯಾರು-ಬಾಣಾವರ ರಸ್ತೆಯನ್ನು ಈಗಾಗಲೇ ಬಾಣವಾರದಲ್ಲಿ ಸಚಿವ ರೇವಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೂ ಹುಳಿಯಾರಿನಲ್ಲಿ ಸಂಸದರು ಶಂಕುಸ್ಥಾನನೆ ಮಾಡುತ್ತಿರುವುದು ಚುನಾವಣೆ ಗಿಮಿಕ್.

      ಅದರಲ್ಲೂ ಶಾಸಕರನ್ನು ಆಹ್ವಾನಿಸದೆ ಮಾಡುತ್ತಿರುವುದು ಚುನಾವಣೆಯ ದುರುದ್ದೇಶವಾಗಿದ್ದು ಗೆದ್ದು 5 ವರ್ಷವಾದ ನಂತರ ಈ ರಸ್ತೆಯನ್ನು ಸಂಸದರು ನೆನಪು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೆ ಸದಾ ಜನರೊಂದಿಗಿದ್ದು ಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವವರಾರು ಚುನಾವಣೆಗಾಗಿ ಜನರ ಬಳಿಗೆ ಬರುತ್ತಿರುವವರಾರು ಎಂಬುದನ್ನು ಮತದಾರರು ಅರಿಯಬೇಕಿದೆ ಎಂದರು.

     ತಾಪಂ ಮಾಜಿ ಸದಸ್ಯ ಹೊಸಹಳ್ಳಿ ಜಯಣ್ಣ ಅವರು ಮಾತನಾಡಿ ಸ್ಥಗಿತಗೊಂಡ ಹೇಮಾವತಿ ಕಾಮಗಾರಿ ಬಗ್ಗೆ, ತಾಲೂಕಿನಲ್ಲಿನ ನೀರಿನ ಹಾಹಾಕಾರದ ಬಗ್ಗೆ, ಆಮೆ ಗತಿಯಲ್ಲಿ ನಡೆಯುತ್ತಿರುವ ಶಿರಾ ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಸಂಸದರಿಗೆ ಚುನಾವಣೆಯ ಕಾರಣದಿಂದ ಚಿಕ್ಕನಾಯಕನಹಳ್ಳಿ ನೆನಪಾಗಿದೆ ಎಂದರಲ್ಲದೆ ಕ್ಷೇತ್ರದ ಪ್ರಗತಿಯ ದೃಷ್ಠಿಯಿಂದ ಶಾಸಕರು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹೋರಾಟ ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಸಂಸದರು ತಮ್ಮ ಸ್ವಾರ್ಥಕ್ಕಾಗಿ ಜನಪರವಾದ ಶಾಸಕರನ್ನು ಗಡೆಗಣಿಸಿರುವುದು ಅವರ ಮುತ್ಸದ್ಧಿತನಕ್ಕೆ ಶೋಬಿಸುವುದಿಲ್ಲ ಎಂದು ಕುಟುಕಿದರು.

       ಹುಳಿಯಾರು ಪ್ರವಾಸಿ ಮಂದಿರದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾ ಕಾರರನ್ನು ಸೀತಾರಾಮ ಕಲ್ಯಾಣ ಮಂಟಪದ ಬಳಿ ಪೊಲೀಸರು ತಡೆದರು. ಕೆಲಕಾಲ ರಾಜ್ಯ ಸರ್ಕಾರ ಮತ್ತು ಸಂಸದರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಶಂಕುಸ್ಥಾಪನೆ ಬಳಿ ತೆರಳಲು ಮುಂದಾದರು. ಪುನಹ ಒಣಕಾಲುವೆಯ ಬಳಿ ಪೊಲೀಸರು ತಡೆದರು. ಆಗ ಪ್ರತಿಭಟನಾಕಾರರು ಧರಣಿ ಕುಳಿತರು. ಅಂತಿಮವಾಗಿ ನೂವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap