ಬೆಂಗಳೂರು
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಸಂದರ್ಭದಲ್ಲಿ ಜಾತಿ -ಧರ್ಮ ಮುಂದಿಟ್ಟುಕೊಂಡು ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿಯವರು ಕಾಯುತ್ತಿದ್ದಾರೆ. ನೂತನ ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ಇಂತಹ ಎಲ್ಲಾ ಗಲಭೆಗಳನ್ನು ಸಮರ್ಥವಾಗಿ ಹತ್ತಿಕ್ಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೂತನ ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗಲಭೆಗೆ ಪ್ರಚೋದನೆ ನೀಡಿ ರಾಜ್ಯದಲ್ಲಿ ಅಶಾಂತಿ ನಿರ್ಮಿಸಲು ಪ್ರಯತ್ನಿಸುತ್ತಾರೆ. ರಾಜ್ಯದಲ್ಲಿ ಬಿಜೆಪಿಯ ಗೂಂಡಾಗಿರಿಯನ್ನು ನಿಲ್ಲಿಸುವಂತಹ ಕಾರ್ಯಕ್ಕೆ ಗೃಹ ಇಲಾಖೆ ಮುಂದಾಗಬೇಕು. ದಕ್ಷ ರಾಜಕೀಯ ನಾಯಕರಾದ ಎಂ. ಬಿ. ಪಾಟೀಲ್ ಅವರು ಉತ್ತಮ ಕೆಲಸ ಮಾಡಲಿ ಎಂದು ನಾನು ಪಕ್ಷದ ವತಿಯಿಂದ ಆಶಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಬಗ್ಗೆ ಬಿಜೆಪಿಯವರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಮೂರೂ ರಾಜ್ಯಗಳ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಬಹಿರಂಗ ಹಾಗೂ ಸಮರ್ಥವಾಗಿ ತಿರುಗೇಟು ನೀಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಗಟ್ಟಿಯಾಗಿದೆ, ಸುಭದ್ರವಾಗಿದೆ, ಈ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ.
134 ವರ್ಷಗಳಿಂದ ಪಕ್ಷದ ಬೆಳೆದು ಬಂದಿದೆ. ಕಾಂಗ್ರೆಸ್ ಮುಕ್ತ ಭಾರತ ಎಂಬ ಅಜೆಂಡಾವೇ ಈಗ ಇಲ್ಲವಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ತಪ್ಪಿನಿಂದ ಬಿಜೆಪಿಯವರಿಗೆ ಸಾಕಾಗಿ ಹೋಗಿದೆ. ವಾಜಪೇಯಿ ಇದ್ದಂತಹ ಬಿಜೆಪಿಯೇ ಬೇರೆ, ಮೋದಿಯವರ ಬಿಜೆಪಿಯೇ ಬೇರೆಯಾಗಿದೆ ಎಂದು ವ್ಯಾಖ್ಯಾನಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಎಚ್.ಕೆ.ಪಾಟೀಲ್, ಹಿರಿಯ ನಾಯಕರಾದ ಎಂ.ವಿ.ರಾಜಶೇಖರನ್, ಹನುಮಂತಪ್ಪ, ಸಲೀಂ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
