ಹಾಲಿ ಶಾಸಕರ ಹೆಸರಿಗೆ ಉದ್ದೇಶ ಪೂರ್ವಕವಾಗಿಯೇ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ: ಹಾಲನೂರು ಅನಂತಕುಮಾರ್

ತುಮಕೂರು

     ತುಮಕೂರು ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕರ ಹೆಸರನ್ನು ಬಳಸಿಕೊಂಡು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದು ಖಂಡನೀಯ. ಮಾಜಿ ಶಾಸಕರ ಪಟಾಲದಿಂದ ಶಾಸಕರ ಹೆಸರಿಗೆ ಚ್ಯುತಿ ಬರುವಂತೆ ಉದ್ದೇಶಪೂರ್ವಕವಾಗಿಯೇ ಪ್ರತಿಭಟನೆ ಮಾಡಿಸಿದ್ದಾರೆ ಎಂದು ತುಮಕೂರು ಗ್ರಾಮಾಂತರ ಅಧ್ಯಕ್ಷರಾದ ಹಾಲನೂರು ಅನಂತಕುಮಾರ್ ಆರೋಪಿಸಿದರು.

      ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿದಿಸಿ ಮಾತನಾಡಿದ ಅವರು, ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ತಮ್ಮ ತಂದೆಯ ಆರೋಗ್ಯ ದೃಷ್ಠಿಯಿಂದ ಸಿಂಗಾಪುರಕ್ಕೆ ತೆರಳಿದ್ದಾರೆ ಹೊರತು ಅವರು ಮೋಜು ಮಸ್ತಿ ಮಾಡಲು ಹೋಗಿಲ್ಲ.

      ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುರೇಶ್‍ಗೌಡ ಫ್ಯಾನ್ಸ್ ಎಂಬ ಪೇಜಿನಲ್ಲಿ ಹಾಲಿ ಶಾಸಕರ ಬಗ್ಗೆ ಪ್ರಚೋದನಕಾರಿಯಾಗಿ ಕಾಮೆಂಟ್ ಮಾಡಲಾಗಿದ್ದು, ಇದರಿಂದ ಬೇಸತ್ತ ಓರ್ವ ಅಭಿಮಾನಿ ತಮ್ಮ ಅನಿಸಿಕೆಯನ್ನು ಕಾಮೆಂಟ್ ರೂಪದಲ್ಲಿ ಹಾಕಿದ್ದಾನೆ, ಈ ಬಗ್ಗೆ ಆತನಿಗೆ ತಿಳುವಳಿಕೆ ನೀಡಲಾಗಿದೆ. ಆದರೂ ಕೆಲ ಬಿಜೆಪಿ ಸದಸ್ಯರು, ಮಹಿಳೆಯರನ್ನು ಗುಂಪು ಸೇರಿಸಿಕೊಂಡು ಆ ಯುವಕನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ ಎಂದು ಆರೋಪಿಸಿದರು.

     ಮೇ.23ರವರೆಗೆ ಚುನಾವಣಾ ನೀತಿ ಸಂಹಿತೆ ಇದ್ದರೂ ಬಿಜೆಪಿಯ ಹಾಲಿ ಸದಸ್ಯರಾದ ವೈ,ಎಚ್.ಹುಚ್ಚಯ್ಯ, ಅನಿತಾ ಸಿದ್ದೇಗೌಡ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ ಇನ್ನಿತರರು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದರು.

     ಮಾಜಿ ಶಾಸಕರು ಹಾಗೂ ಅವರ ಪಟಾಲ ಆರೋಪಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹಾಲಿ ಶಾಸಕರು ಕ್ಷೇತ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ 300 ಕೋಟಿ ರೂ. ಅನುದಾನ ತಂದು ಕುಡಿಯುವ ನೀರಿಗಾಗಿ 170ಕ್ಕೂ ಹೆಚ್ಚು ಬೋರ್‍ವೆಲ್‍ಗಳನ್ನು ಕೊರೆಸಿದ್ದಾರೆ. ಗೂಳೂರಿನಲ್ಲಿ ಮಿನಿವಿಧಾನಸೌಧ ನಿರ್ಮಾಣ ಮಾಡಲು ಸುಮಾರು 10 ಕೋಟಿ ರೂ ಹಣವನ್ನು ಮಂಜೂರು ಮಾಡಿಸಿದ್ದಾರೆ.

     ಬೆಳ್ಳಾವಿ ಹೋಬಳಿಯ ಬ್ಯಾಲದಲ್ಲಿ ಜಾಗವನ್ನು ಗುರುತಿಸಿದ್ದು ಸರ್ಕಾರಿ ಪದವಿ ಕಾಲೇಜನ್ನು ನಿರ್ಮಾಣಕ್ಕೆ 10 ಕೋಟಿ ಹಣ ಮಂಜೂರು ಮಾಡಲಾಗಿದೆ. ಅಲ್ಲದೆ ಹೆಬ್ಬೂರು ಹೋಬಳಿಯ, ಕೋಡಿಮುದ್ದನಹಳ್ಳಿ ಗ್ರಾಮದಲ್ಲಿ 220 ಕೆ.ವಿ. ವಿದ್ಯುತ್ ಸ್ಥಾವರವನ್ನು 125 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲಾ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಅನುದಾನ ಬಳಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದನ್ನು ಸಹಿಸಲಾರದ ಮಾಜಿ ಶಾಸಕರು ಹಾಲಿ ಶಾಸಕರ ಮೇಲೆ ಉದ್ದಟತನ ತೋರುತ್ತಿದ್ದಾರೆ ಎಂದರು.

     ಮಾಜಿ ಶಾಸಕ ಸುರೇಶ್‍ಗೌಡ ಹಾಗೂ ಅವರ ಬೆಂಬಲಿಗರು ಹುಚ್ಚಾಪಟ್ಟೆಯ ಹೇಳಿಕೆಗಳನ್ನು ನೀಡುವ ಮೂಲಕ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಂತಿಗೆ ಭಂಗ ಉಂಟು ಮಾಡುತ್ತಿದ್ದಾರೆ. ಅಲ್ಲದೆ ಪದೇ ಪದೇ ಸುಖಾಸುಮ್ಮನೆ ಹಾಲಿ ಶಾಸಕರ ವಿರುದ್ಧ ಪ್ರತಿಭಟನೆ ಮತ್ತು ಪತ್ರಿಕಾ ಹೇಳಿಕೆಗಳನ್ನು ನೀಡಿ ಶಾಸಕರ ಹೆಸರನ್ನು ತೇಜೋವಧೆ ಮಾಡುವುದರ ಜೊತೆಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

     ಇದ್ಯಾವುದನ್ನು ಲೆಕ್ಕಿಸದೆ ಹಾಲಿ ಶಾಸಕರು ಅಭಿವೃದ್ಧಿ ಕೆಲಸ ಮಾಡುವಲ್ಲಿ ನಿರತರಾಗಿದ್ದಾರೆ ಎಂದರು.ಮೇ.17ರಂದು ನಡೆದ ಪ್ರತಿಭಟನೆಗೂ ಕೂಡ ಪೊಲೀಸರನ್ನು ಹೋಗದಂತೆ ಒತ್ತಾಯ ಹೇರಿ ಸುರೇಶ್‍ಗೌಡರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟುಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಗೂ ದೂರು ನೀಡುತ್ತೇವೆ. ಅಲ್ಲದೆ ಇನ್ನು ಮುಂದೆ ಇದೇ ರೀತಿ ನಡೆದುಕೊಂಡರೆ ಉಗ್ರ ಪ್ರತಿಭಟನೆ ಮಾಡುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಬೆಳಗುಂಬ ಜಿಲ್ಲಾಪಂಚಾಯಿತಿಯ ಅಧ್ಯಕ್ಷರಾದ ಎಚ್.ಕೆಂಪರಾಜು, ಎಸ್.ಸಿ.ಘಟಕದ ಜಿಲ್ಲಾ ಪ್ರಧಾನಕಾರ್ಯದರ್ಶಿ ಬೆಳಗುಂಬವೆಂಕಟೇಶ್, ಐಟಿ ವಿಭಾಗದ ಅಧ್ಯಕ್ಷರಾದ ಲಕ್ಷ್ಮೀನರಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link