ಬೆಂಗಳೂರು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಗುರುವಾರ ನಡೆಯಲಿದೆ ಎಂಬ ಹಿನ್ನೆಲೆಯಲ್ಲಿಯೇ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದ್ದು ಮೂಲ ಹಾಗೂ ವಲಸಿಗರು ತಮ್ಮ ತಮ್ಮದೇ ನೆಲೆಯಲ್ಲಿ ಅಪಸ್ವರ ಎತ್ತಿದ್ದಾರೆ.
ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ವಲಸೆ ಬಂದವರ ಪೈಕಿ ಹತ್ತು ಮಂದಿಯನ್ನು ಹಾಗೂ ಮೂಲ ಬಿಜೆಪಿಯ ಮೂರು ಮಂದಿಯನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದರು.
ಆದರೆ ಈ ತೀರ್ಮಾನದ ವಿರುದ್ಧ ಮೂಲ ಬಿಜೆಪಿಗರು ದಂಗೆ ಎದ್ದಿದ್ದು ಅದೇ ಕಾಲಕ್ಕೆ ವಲಸಿಗರು ಕೂಡಾ ಕೊಟ್ಟ ಮಾತು ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂದು ಯಡಿಡಿಯೂರಪ್ಪ ಅವರ ಮೇಲೆ ಒತ್ತಡ ಹೇರತೊಡಗಿದ್ದಾರೆ.
ಈ ಪೈಕಿ ಮೂಲ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ,ರಾಜಗೌಡ ನಾಯಕ್,ಹಾಲಪ್ಪ ಆಚಾರ್ ಸೇರಿದಂತೆ ಹನ್ನೆರಡು ಮಂದಿ ಶಾಸಕರು ಇಂದು ಶಾಸಕರ ಭವನದಲ್ಲಿ ಸಭೆ ನಡೆಸಿ,ವಲಸಿಗರಿಗೆ ಕಡಿಮೆ ಸ್ಥಾನ ಕೊಡಿ.ಬಿಜೆಪಿಯವರೇ ಆದರೂ ಸೋತಿರುವ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿಗಿರಿ ನೀಡಿದರೆ ಪರಿಣಾಮ ವ್ಯತಿರಿಕ್ತವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಅದೇ ಕಾಲಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ವಲಸೆ ಬಂದವರ ಪೈಕಿ ಹದಿನಾಲ್ಕು ಮಂದಿ ತಿರುಪತಿಗೆ ವಿಶೇಷ ಬಸ್‍ನಲ್ಲಿ ತೆರಳಿದ್ದು ಈ ಹಿಂದೆ ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ತಮ್ಮನ್ನೆಲ್ಲ ಮಂತ್ರಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಶಾಸಕರ ಭವನದಲ್ಲಿ ಸಭೆ ಸೇರಿದ ಹನ್ನೆರಡು ಶಾಸಕರ ಪಡೆ,ಪಕ್ಷದಲ್ಲಿ ಆರು ಬಾರಿ ಶಾಸಕರಾಗಿರುವ ಅಂಗಾರ,ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ,ನಾಲ್ಕು ಬಾರಿ ಶಾಸಕರಾಗಿರುವ ಕೆ.ಜಿ.ಬೋಪಯ್ಯ ಸೇರಿದಂತೆ ಹಲ ಮಂದಿ ಹಿರಿಯರಿದ್ದಾರೆ.
ಆದರೆ ಇಂತವರನ್ನೆಲ್ಲ ಕಡೆಗಣಿಸಿ ಹೊರಗಿನಿಂದ ಬಂದವರಿಗೆ ಏಕಾಏಕಿ ಹತ್ತು ಮಂತ್ರಿ ಸ್ಥಾನಗಳನ್ನು ನೀಡುವುದು ಮತ್ತು ಮೂಲ ಬಿಜೆಪಿಯ ವತಿಯಿಂದ ಕಳೆದ ಚುನಾವಣೆಯಲ್ಲಿ ಸೋತಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದು ಸರಿಯಲ್ಲ ಎಂದು ವಾದಿಸಿತು.
ಸರ್ಕಾರ ಬಂದ ಶುರುವಿನಲ್ಲಿ ಸೋತ ಕ್ಯಾಂಡಿಡೇಟ್ ಲಕ್ಷ್ಮಣ ಸವದಿ ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಂಡು ಉಪಮುಖ್ಯಮಂತ್ರಿ ಮಾಡಿದಿರಿ,ಈಗ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಹೊರಟಿದ್ದೀರಿ. ಹೀಗೆ ಸೋತವರ ದಂಡನ್ನು ಸರ್ಕಾರಕ್ಕೆ ತೆಗೆದುಕೊಂಡರೆ ಗೆದ್ದವರು ಏನು ಮಾಡಬೇಕು?ಚುನಾವಣೆಯಲ್ಲಿ ಗೆದ್ದಿದ್ದೇ ಇವರ ತಪ್ಪೇ?ಹೀಗಾಗಿ ಸಿ.ಪಿ.ಯೋಗೇಶ್ವರ್ ಅವರ ಹೆಸರನ್ನು ಕೈ ಬಿಡಿ.ಅದೇ ಕಾಲಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‍ಗಳಿಂದ ವಲಸೆ ಬಂದವರ ಪೈಕಿ ಹತ್ತು ಮಂದಿಯನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವ ಬದಲು ಮೂಲ ಬಿಜೆಪಿಗರನ್ನೇ ಹೆಚ್ಚು ಸಂಖ್ಯೆಯಲ್ಲಿ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದರು.
ನಾವು ನಾಳೆಯೂ ಸಭೆ ಸೇರುತ್ತೇವೆ.ಇನ್ನಷ್ಟು ಮಂದಿ ಮೂಲ ಬಿಜೆಪಿ ಶಾಸಕರು ಈ ಸಭೆಯಲ್ಲಿ ಭಾಗವಹಿಸು ತ್ತಾರೆ.ಯಾವ ಕಾರಣಕ್ಕೂ ಮೂಲ ಬಿಜೆಪಿಯವರನ್ನು ಕಡೆಗಣಿಸಬೇಡಿ ಎಂದು ಹೇಳಿದರು. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದವರ ಪೈಕಿ ಹದಿನಾಲ್ಕು ಮಂದಿ ಶಾಸಕರು ತಿರುಪತಿಗೆ ತೆರಳಿ:ರಾಜೀನಾಮೆ ಕೊಟ್ಟು ಬಂದರೆ ನಿಮ್ಮನ್ನೆಲ್ಲ ಮಂತ್ರಿ ಮಾಡುತ್ತೇವೆ ಎಂಬ ನಿಮ್ಮ ಭರವಸೆಯನ್ನು ನಂಬಿ ಬಂದವರು ನಾವು.ಹೀಗಿರುವಾಗ ಈಗ ಹತ್ತು ಮಂದಿಗೆ ಮಂತ್ರಿಗಿರಿ.ಉಳಿದವರೆಲ್ಲ ಸ್ವಲ್ಪ ಕಾಲ ಕಾಯಿರಿ ಎಂದರೆ ಸರಿಯಲ್ಲ ಎಂದು ವಾದಿಸತೊಡಗಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ.ನೀವು ಮಂತ್ರಿಗಳಾಗುತ್ತೀರಿ.ಯಾವ ದೈವದ ಮೇಲೆ ಬೇಕಿದ್ದರೂ ಆಣೆ ಎಂದು ಹೇಳಿದವರು ಈಗ ಹೈಕಮಾಂಡ್ ಹೇಳುತ್ತಿದೆ.ಹೀಗಾಗಿ ಹತ್ತು ಮಂದಿಗೆ ಮಾತ್ರ ಅವಕಾಶ ಎನ್ನುವುದಾದರೆ ಕೊಟ್ಟ ಮಾತನ್ನು ತಪ್ಪಿ ನಡೆದಂತಾಗುವುದಿಲ್ಲವೇ?ಎಂದು ಪ್ರಶ್ನಿಸತೊಡಗಿದರು.
ಹೀಗೆ ಸಂಪುಟ ವಿಸ್ತರಣೆಗೆ ಗುರುವಾರದ ಮುಹೂರ್ತ ನಿಗದಿಯಾಗುತ್ತಿದ್ದಂತೆಯೇ ಮೂಲ ಹಾಗೂ ವಲಸಿಗರು ದೊಡ್ಡ ಮಟ್ಟದಲ್ಲಿ ದಂಗೆ ಎದ್ದಿದ್ದು ಈ ಹಾಹಾಕಾರದ ನಡುವೆ ಹೈಕಮಾಂಡ್ ನೂತನ ಮಂತ್ರಿಗಳ ಪಟ್ಟಿಯನ್ನು ಕಳಿಸದೆ ಮೌನವಾಗಿದೆ.ಮಂತ್ರಿಗಳಾಗುವವರ ಪಟ್ಟಿ ಈಗಾಗಲೇ ಹೈಕಮಾಂಡ್ ಕೈಲಿದ್ದು ಸೋಮವಾರದ ವೇಳೆಗೆ ಇದರ ರೂಪುರೇಷೆಯನ್ನು ನಿರ್ಧರಿಸಿ ಹಸಿರು ನಿಶಾನೆ ನೀಡುತ್ತೇವೆ ಎಂದು ವರಿಷ್ಟರು ಹೇಳಿದ್ದರಾದರೂ ಈಗ ಕಾದು ನೋಡಲು ತೀರ್ಮಾನಿಸಿದ್ದಾರೆ.
ಹೀಗಾಗಿ ಯಡಿಯೂರಪ್ಪ ಅವರ ಮಂತ್ರಿ ಮಂಡಲ ವಿಸ್ತರಣೆ ಪ್ರಕ್ರಿಯೆಗೆ ಹಲವು ವಿಘ್ನಗಳು ಏಕಕಾಲದಲ್ಲಿ ಎದುರಾಗಿದ್ದು ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರು ತಮ್ಮ ಆಪ್ತರ ಮೂಲಕ ಮೂಲ ಹಾಗೂ ವಲಸಿಗ ಬಿಜೆಪಿಗರ ಬಳಿ ಸಂಧಾನಕಾರರನ್ನು ಕಳಿಸಿದರಾದರೂ ಅದು ನಿರೀಕ್ಷಿತ ಯಶಸ್ಸು ನೀಡಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








