ಕಾಂಗ್ರೆಸ್ ಸರ್ಕಾರ ನಾಡಿನ ಜನತೆಗೆ ಕೊಟ್ಟಿದ್ದನ್ನು ಬಿಜೆಪಿ ಕಿತ್ತುಕೊಂಡಿದೆ : ಎಚ್.ಎಂ.ರೇವಣ್ಣ

ಶಿರಾ

    ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ಅವರ ಸರ್ಕಾರ ನಿರಂತರವಾಗಿ ಐದು ವರ್ಷಗಳವರೆಗೆ ಆಡಳಿತ ನಡೆಸಿದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರು ನಿರಾಶ್ರಿತರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಿದ ಬಹುತೇಕ ಯೋಜನೆಗಳನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

   ನಗರದ ಕೆ.ಪಿ.ಸಿ.ಸಿ. ಮಾಧ್ಯಮ ಮತ್ತು ಸಂವಹನ ಕಚೆರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂದೂ ಕೂಡ ಬಡವರ ಬದುಕಿಗೆ ಬೆಳಕಾಗಿದೆಯೇ ಹೊರತು ಕತ್ತಲಾಗಿಲ್ಲ. ಅನ್ನಭಾಗ್ಯದಂತಹ ಮಹತ್ವದ ಯೋಜನೆಯಡಿಯಲ್ಲಿ ತಲಾ 7 ಕೆ.ಜಿ. ಉಚಿತ ಅಕ್ಕಿ ನೀಡುವಂತಹ ಯೋಜನೆಯಲ್ಲಿ 2 ಕೆ.ಜಿ. ಅಕ್ಕಿಯನ್ನು ಮೊಟಕುಗೊಳಿಸಿ ಬಡವರ ಹೊಟ್ಟೆಯ ಮೇಲೆ ಬಿಜೆಪಿ ಸರ್ಕಾರ ಒಡೆದಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದನ್ನು ಬಿಜೆಪಿ ಕಿತ್ತುಕೊಂಡಿದ್ದು ಬಿಟ್ಟರೆ ಇನ್ಯಾವ ಸಾಧನೆಯನ್ನೂ ಅವರು ಮಾಡಿಲ್ಲ ಎಂದರು.

   ಐದು ವರ್ಷ ರಾಜ್ಯಾಡಳಿತ ನಡೆಸಿದ ಸಿದ್ಧರಾಮಯ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿದ್ದು, ಬಹುತೇಕ ಎಲ್ಲಾ ಭರವಸೆಗಳನ್ನೂ ಈಡೇರಿಸಿತ್ತು. ಶಿರಾ ಉಪ ಚುನಾವಣೆ ಸಂಬಂಧ ಬಿ.ಜೆ.ಪಿ. ಮುಖಂಡರು ಕೆ.ಆರ್.ಪೇಟೆಯಂತೆ ಶಿರಾ ಕ್ಷೇತ್ರವನ್ನು ಗೆಲ್ಲಬಹುದೆಂದುಕೊಂಡಿದ್ದಾರೆ. ಅದು ಅವರ ಭ್ರಮೆ. ಹಣದಿಂದ ಇಲ್ಲಿನ ಜನರ ಮನಸ್ಸನ್ನು ಗೆಲ್ಲಲಾಗದು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒಕ್ಕೂಟ ವ್ಯವಸ್ಥೆಯಲ್ಲಿ ಎ.ಪಿ.ಎಂ.ಸಿ. ಕಾಯಿದೆ ತಿದ್ದುಪಡಿ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕಿದೆ. ಆದರೆ ಈ ಕಾಯಿದೆ ತಿದ್ದುಪಡಿಗೂ ಕೂಡ ಕೇಂದ್ರದ ಅನುಮತಿ ಕೋರುವಂತಹ ಹೀನಾಯ ವ್ಯವಸ್ಥೆಯ ಸರ್ಕಾರವನ್ನು ನಾವು ಹಿಂದೆಂದೂ ನೋಡಿರಲಿಲ್ಲ. ಬಿ.ಜೆ.ಪಿ. ಸರ್ಕಾರದ ನಿರ್ಲಕ್ಷ್ಯದ ಆಡಳಿತದಿಂದ ಇಲ್ಲಿ ಕಾನೂನುಗಳ ನಡು ಮುರಿದಿದೆ ಎಂದರು.

   ರಾಜ್ಯದಲ್ಲಿ ಒಬ್ಬರಲ್ಲ, ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಮುಖ್ಯಮಂತ್ರಿಗಳ ಪುತ್ರ ನಾನೆ ಮುಖ್ಯಮಂತ್ರಿ ಎಂಬಂತೆ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ನಮ್ಮ ಅಭ್ಯರ್ಥಿ ಜಯಚಂದ್ರ ಸಚಿವರಾಗಿದ್ದಾಗ 2,500 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ, ಕಳೆದ ಬಾರಿ ಅತ್ಯಲ್ಪ ಮತಗಳಿಂದ ಪರಾಜಯಗೊಂಡಿದ್ದರು. ಜನರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ. ಶಿರಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದರು.

    ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಮಾತನಾಡಿ, ಶಿರಾ ಕ್ಷೇತ್ರ ಗೆಲ್ಲಿಸಿಕೊಳ್ಳಲು ಬಿ.ಜೆ.ಪಿ. ವಾಮ ಮಾರ್ಗ ಅನುಸರಿಸಿದೆ. ಹಣದ ಹೊಳೆ ಹರಿಸಿದರೂ ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಜಯ ಗಳಿಸದು. ಉಪ ಚುನಾವಣೆಯಲ್ಲಿ ಗೆಲುವು ಕಷ್ಟ ಎಂಬುದನ್ನು ಅರಿತ ಜೆ.ಡಿ.ಎಸ್. ವರಿಷ್ಠರು ಬಿ.ಜೆ.ಪಿ.ಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.

   ಜೆ.ಡಿ.ಎಸ್. ಪಕ್ಷದಿಂದ ಆಯ್ಕೆಗೊಂಡ ಶಾಸಕರಾರೂ ಕೂಡ ಅಸೆಂಬ್ಲಿಯಲ್ಲಿ ಬಿ.ಜೆ.ಪಿ. ಸರ್ಕಾರದ ವಿರುದ್ಧ ತುಟಿ ಎರಡು ಮಾಡುತ್ತಿಲ್ಲ. ಕಾನೂನು ತಿದ್ದುಪಡಿಗಳಿಂದಾಗಿ ರೈತರು, ಜನ ಸಾಮಾನ್ಯರು ಹಾಗೂ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂಬ ಸ್ಪಷ್ಠ ಚಿತ್ರಣವಿದ್ದರೂ ಇಂತಹ ಸಮಸ್ಯೆಗಳ ಬಗ್ಗೆ ವಿರೋಧ ವ್ಯಕ್ತಪಡಿಸುವ ಸಣ್ಣ ಪ್ರಯತ್ನವನ್ನೂ ಜೆ.ಡಿ.ಎಸ್. ಮಾಡುತ್ತಿಲ್ಲ ಎಂದು ಆರೋಪಿಸಿದರು.

    ನನ್ನ ಹಾಗೂ ಬಿ.ಜೆ.ಪಿ. ಅಭ್ಯರ್ಥಿ ಡಾ.ರಾಜೇಶ್‍ಗೌಡ ಅವರ ನಡುವೆ ಸ್ನೇಹವಿದೆ ನಿಜ, ಹಾಗಂತ ಸ್ನೇಹವೆ ಬೇರೆ ಪಕ್ಷವೆ ಬೇರೆ. ಸ್ನೇಹಿಕ್ಕಿಂತಲೂ ನನಗೆ ಪಕ್ಷವೆ ಮುಖ್ಯವಾಗಿದೆ. ಜಯಚಂದ್ರ ಅವರು ಈ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೆ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಡಾ.ಯತೀಂದ್ರ ಹೇಳಿದರು.ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ, ಗ್ರಾ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಪಕ್ಷದ ಮುಖಂಡರಾದ ನಿಕೇತ್‍ಗೌಡ, ಎಸ್.ಎಲ್.ರಂಗನಾಥ್, ಭಾನುಪ್ರಕಾಶ್, ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link