ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಒತ್ತಾಯ..!!

ಬೆಂಗಳೂರು

       ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದ ರಾಜಭವನಕ್ಕೆ ಮೆರವಣಿಗೆ ನಡೆಸಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ನಿವಾರಣೆಗೆ ಮಧ್ಯ ಪ್ರವೇಶಿಸಿ ಸಂವಿಧಾನ ಉಳಿಸುವಂತೆ ಮನವಿ ಮಾಡಿದರು.

     ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಸೇರಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಯ ಬಹುತೇಕ ಎಲ್ಲ ಶಾಸಕರುಗಳು ಪ್ರತಿಭಟನೆ ನಡೆಸಿ ಅಲ್ಲಿಂದ ರಾಜಭವನಕ್ಕೆ ಮೆರವಣಿಗೆ ನಡೆಸಿ ರಾಜ್ಯದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದ್ದು ಮಧ್ಯಪ್ರವೇಶ ಮಾಡುವಂತೆ ರಾಜ್ಯಪಾಲರನ್ನು ಆಗ್ರಹಿಸಿದರು.

     ಪ್ರತಿಭಟನೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿದೆ. ಇಷ್ಟಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡದೆ ಅಧಿಕಾರಕ್ಕೆ ಅಂಟಿಕೊಂಡಿರುವುದು ನಾಚಿಕೆಗೇಡು ಎಂದು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದ ಬಿಜೆಪಿ ಶಾಸಕರುಗಳು, ತಕ್ಷಣವೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಗ್ರಹಿಸಿದರು.

     ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕು. ಬಹುಮತ ಕಳೆದುಕೊಂಡಿದ್ದರೂ ಇನ್ನೂ ರಾಜೀನಾಮೆ ನೀಡದೆ ಇರುವುದು ಸರಿಯಲ್ಲ ಶಾಸಕ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್‍ನ 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ಜನರ ಪಾಲಿಗೆ ಇಲ್ಲದಂತಾಗಿದೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗನಿಗೆ ಬುದ್ಧಿ ಹೇಳಿ ರಾಜೀನಾಮೆ ಕೊಡಿಸಲಿ ಎಂದು ಒತ್ತಾಯಿಸಿದರು.

     ರಾಜ್ಯದಲ್ಲಿ ಸುದ್ದಿಯಾಗಿರುವ ಅರಾಜಕತೆಯ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ವಸ್ತು ಸ್ಥಿತಿಯನ್ನು ವಿವರಿಸಿ, ಸಂವಿಧಾನ ರಕ್ಷಿಸುವಂತೆ ಮನವಿ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.ಸಭಾಧ್ಯಕ್ಷ ರಮೇಶ್‍ಕುಮಾರ್ ರಾಜೀನಾಮೆ ನೀಡಿರುವ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು. ಸುಮ್ಮನೆ ವಿಳಂಬ ಮಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.

    ಮುಂಬೈಗೆ ತೆರಳಿರುವ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ನಾಟಕವನ್ನು ಬಂದ್ ಮಾಡಬೇಕು. ಅತೃಪ್ತ ಶಾಸಕರುಗಳು ಭೇಟಿಗೆ ಒಪ್ಪದಿದ್ದರೂ ಸಚಿವ ಡಿ.ಕೆ. ಶಿವಕುಮಾರ್ ಶಾಸಕರ ಭೇಟಿಗೆ ತೆರಳಿರುವುದು ದೊಡ್ಡ ನಾಟಕ ಎಂದು ಅವರು ಟೀಕಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್, ಈ ಸರ್ಕಾರ ಬಂಡ ಸರ್ಕಾರ. ಅಲ್ಪಮತಕ್ಕೆ ಕುಸಿದಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡದಿರುವುದು ನಾಚಿಕೇಗೇಡು. ಇವರಿಗಿಂತ ಬಂಡರು ಇಲ್ಲ ಎಂದು ಟೀಕಿಸಿದರು.

ಭ್ರಷ್ಟಾಚಾರ

    ಸರ್ಕಾರ ಪಥನವಾಗುವುದು ನಿಶ್ಚಯವಾಗಿರುವದುರಿಂದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಕೊನೆಯ ಕ್ಷಣದ ಡೀಲ್‍ಗಳನ್ನು ಮಾಡುತ್ತಿದ್ದಾರೆ. ಕಡತಗಳಿಗೆ ಸಹಿ ಹಾಕಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಶೆಟ್ಟರ್ ದೂರಿದರು
ಜಿಂದಾಲ್‍ಗೆ ಭೂಮಿ ಪರಭಾರೆ ಮಾಡುವ ಸಂಬಂಧ ರಚಿಸಲಾಗಿದ್ದ ಎಂ.ಬಿ. ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಹ ನಿನ್ನೆ ತರಾತುರಿಯಲ್ಲಿ ಸಭೆ ನಡೆಸಿ ಜಿಂದಾಲ್‍ಗೆ ಭೂಮಿ ನೀಡಿಕೆಯನ್ನು ಸಮ್ಮತಿಸಿ ಸೇಲ್ ಡೀಡ್ ಮಾಡಿಕೊಡಲು ಹೇಳಿರುವುದೇ ಸರ್ಕಾರದಲ್ಲಿ ಕೊನೆ ಗಳಿಗೆಯ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿ ಎಂದು ಟೀಕಿಸಿದರು.

     ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮುಖಂಡರಾದ ಬಸವರಾಜಬೊಮ್ಮಾಯಿ, ಮುರುಗೇಶ್ ನಿರಾಣಿ, ಸಿ.ಟಿ. ರವಿ, ಶ್ರೀರಾಮುಲು, ಗೋವಿಂದಕಾರಜೋಳ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರುಗಳು, ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap