ಆರಂಭ ಶೂರತ್ವ ಇರುವುದು ಬಿಜೆಪಿಗೆ ಹೊರತು ಕಾಂಗ್ರೆಸ್ ಗೆ ಅಲ್ಲ..!

ಬೆಂಗಳೂರು

   ಆರಂಭ ಶೂರತ್ವ ಇರುವುದು ಬಿಜೆಪಿಗೆ ಹೊರತು ಕಾಂಗ್ರೆಸ್ ಗೆ ಅಲ್ಲ. ಕಪ್ಪುಹಣ ತರುವುದಾಗಿ ಶೂರತ್ವ ತೋರಿದ್ದ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾದರೂ ಏನು ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಮಾಜಿ ಸಂಸದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ತಿರುಗೇಟು ನೀಡಿದ್ದಾರೆ.

    ಕೆಪಿಸಿಸಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಭ್ರಷ್ಟಾಚಾರ ನಿಯಂತ್ರಿಸುವುದಾಗಿ ಹೇಳಿದ್ದರು. ಆದರೆ ಸಾಧಿಸಿದ್ದೂ ಏನು ಇಲ್ಲ. ತಲೆಕೆಳಗೆ ಮಾಡಿದರೂ ಬಿಜೆಪಿಯಿಂದ ಕಾಂಗ್ರೆಸ್ ಅನ್ನು ಮುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಜೊತೆ ಕಾರ್ಯಕರ್ತರಿದ್ದಾರೆ. ನಳೀನ್ ಹಗಲುಗನಸು ಕಾಣುವುದನ್ನು ಬಿಟ್ಟು ಕೊರೊನಾ ನಿಯಂತ್ರಿಸಲು ಅವರು ನೀಡಿದ್ದ ಸೇವೆ ಕಾಣಿಕೆಯಾದರೂ ಏನು ಎಂಬುದನ್ನು ವಿವರಿಸಲಿ ಎಂದು ಸವಾಲು ಹಾಕಿದರು.

     ಲಾಕ್ ಡೌನ್ ಸಂಕಷ್ಟದಲ್ಲಿ ಕಾಂಗ್ರೆಸ್ ನಾಯಕರು ಬಡವರಿಗೆ ರೈತರಿಂದ ತರಕಾರಿ, ಹಣ್ಣುಗಳನ್ನು ಖರೀದಿಸಿ ವಿತರಿಸಿದ್ದಾರೆ. ಆದರೆ ಬಿಜೆಪಿಗರು ಬೆಂಗಳೂರನ್ನು ಸ್ಮಶಾನ ಮಾಡಲು ಹೊರಟ್ಟಿದ್ದಾರೆ. ಬೆಂಗಳೂರಿನ ಪ್ರಸಕ್ತ ಪರಿಸ್ಥಿತಿ ನೀಡಿದರೆ ಆತಂಕ, ನಡುಕ ಹುಟ್ಟುತ್ತದೆ. ಕೊರೊನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ದೇಶದಲ್ಲಿ ವಿಶ್ವಮಟ್ಟದಲ್ಲಿ 11 ನೆ ಸ್ಥಾನದಲ್ಲಿದ್ದ ಭಾರತ ಈಗ 3ನೆ ಸ್ಥಾನಕ್ಕೇರಿದೆ.

     ಮೊದಲು ಅಮೆರಿಕ, ಎರಡನೇ ಸ್ಥಾನದಲ್ಲಿ ಬ್ರೆಜಿಲ್, ಮೂರನೇ ಸ್ಥಾನಕ್ಕೆ ಭಾರತ ಬಂದು ನಿಂತಿದೆ. ಕಳೆದ ಮಾರ್ಚ್‍ನಲ್ಲಿ ದೇಶದಲ್ಲಿ ಕೇವಲ 554 ಸೋಂಕಿತ ಪ್ರಕರಣ ಮಾತ್ರ ಇತ್ತು. ಆಗ ಪ್ರಧಾನಿ 21 ದಿನಗಳ ಲಾಕ್ ಡೌನ್ ಮಾಡಿದ್ದರು. ರಾಜ್ಯದಲ್ಲಿ ಮಾರ್ಚ್ 9 ಕ್ಕೆ ಒಂದೇ ಪ್ರಕರಣವಿತ್ತು. ಮೋದಿ ಕರ್ನಾಟಕಕ್ಕೆ ಕೊಟ್ಟಿರುವ ಸರ್ಟಿಫಿಕೇಟ್ ಎಲ್ಲಿ? ಮೋದಿ ತಮ್ಮ ಗೋಪುರ ಬಿಟ್ಟು ಹೊರಗಡೆ ಬರುತ್ತಿಲ್ಲ.

     ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾ ಬಿಟ್ಟು ಹೊರಗಡೆ ಬರುತ್ತಿಲ್ಲ. ರೋಗಕ್ಕೆ ತುತ್ತಾದವರನ್ನು ಸಂತೈಸುವ ಕೆಲಸ ಮಾಡುತ್ತಿಲ್ಲ, ಬರೀ ಮಾಧ್ಯಮಗಳಿಗೆ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಅಷ್ಟೆ. ಕೊರೊನಾ ಪರೀಕ್ಷೆ ಆಗಿ ಮೂರ್ನಾಲ್ಕು ದಿನ ಕಳೆದರೂ ಫಲಿತಾಂಶವೇ ಸಿಗುತ್ತಿಲ್ಲ. ಆ್ಯಂಬ್ಯುಲೆನ್ಸ್ ಸರಿಯಾಗಿ ವ್ಯವಸ್ಥೆಯಿಲ್ಲ, ರಾಜ್ಯದಲ್ಲಿ ನರಕ ಸದೃಶ ಘಟನೆ ನಡೆಯುತ್ತಿವೆ ಎಂದು ಉಗ್ರಪ್ಪ ಕಿಡಿಕಾರಿದರು.

    ಕೊರೊನಾ ಸೋಂಕು ತಡೆಯಲು ಚಿಕಿತ್ಸೆಗೆ ಮಾಡಿದ ಖರ್ಚು-ವೆಚ್ಚ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಆದಷ್ಟು ಬೇಗ ಶ್ವೇತ ಪತ್ರ ಹೊರಡಿಸಲಿ. ಕೊರೊನಾ ಚರ್ಚೆಗೆ ಸರ್ಕಾರ ವಿಶೇಷ ಅಧಿವೇಶನ ಕರೆಯಲಿ ಎಂದು ಪಕ್ಷದಿಂದ ಆಗ್ರಹಿಸಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

    ಯಡಿಯೂರಪ್ಪ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದುಡ್ಡು ಲೂಟಿ ಮಾಡಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲಿ. ಮೃತಪಟ್ಟವರಿಗೆ ಸರಿಯಾದ ರೀತಿಯಲ್ಲಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಿ. ಕೊರೊನಾ ಭ್ರಷ್ಟಾಚಾರವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೊಳಪಡಿಸಲಿ. ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಕೊರೊನಾ ಖರ್ಚು-ವೆಚ್ಚದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ಕೊಡಲಿ ಎಂದು ಉಗ್ರಪ್ಪ ಸವಾಲು ಹಾಕಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link