ಬೆಂಗಳೂರು
ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ನಾಯಕರು ಭಾರೀ ಸಿದ್ದತೆ ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 22 ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಿಂದ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಂಭವನೀಯರ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎನ್ನಲಾಗಿದೆ.
ಪ್ರಸಕ್ತ ಬಿಜೆಪಿಯಲ್ಲಿ 16 ಜನ ಸಂಸದರಿದ್ದು ಎಲ್ಲಾ ಸಂಸದರಿಗೆ ಟಿಕಿಟ್ ಕೊಡಬೇಕೆಂದು ಈ ಹಿಂದೆ ತೀರ್ಮಾನವಾಗಿತ್ತು. ಆದರೆ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಆಂತರಿಕ ಸಮೀಕ್ಷೆ , ಸ್ಥಳೀಯ ಮುಖಂಡರ ಅಭಿಪ್ರಾಯಗಳನ್ನು ಪಡೆದು 13 ಹಾಲಿ ಸಂಸದರಿಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಸಲ್ಲಿಸಲು ಉದ್ದೇಶಿಸಿದ್ದಾರೆ.
ಉಳಿದಂತೆ 3 ಸಂಸದರಿಗೆ ಟಿಕೆಟ್ ನೀಡುವುದು ಬಿಡುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ. ಹಾಲಿ ಸಂಸದರಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಮೈಸೂರು ಸಂಸದ ಪ್ರತಾಪ್ ಸಿಂಹ, ಹಾಗೂ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಟಿಕೆಟ್ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎನ್ನಲಾಗಿದೆ.
ಪಕ್ಷದ ಸ್ಥಳೀಯ ನಾಯಕರ ಅಭಿಪ್ರಾಯ ,ಸಂಸದರ ವರ್ತನೆ, ಪಕ್ಷ ಸಂಘಟನೆ ಹಾಗೂ ಪಕ್ಷ ಬಲವರ್ಧನೆಯಲ್ಲಿ ತೊಡಗಿಸಿಕೊಂಡಿರುವು, ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ನಡುವಿನ ಹೊಂದಾಣಿಕೆ , ಕ್ಷೇತ್ರದಲ್ಲಿ ಸಾರ್ವಜನಿಕರ ಅಭಿಪ್ರಾಯ ಸೇರಿದಂತೆ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಟಿಕೆಟ್ ನೀಡುವ ಬಗ್ಗೆ ರಾಜ್ಯಾಧ್ಯಕ್ಷರು ವರಿಷ್ಠರಿಗೆ ಶಿಫಾರಸ್ಸು ಮಾಡಲಿದ್ದಾರೆ.
ಮಾರ್ಚ್.6 ಕ್ಕೆ ರಾಜ್ಯಕ್ಕೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ. ಮಾರ್ಚ್ 2 ನೇ ವಾರ ಗೊಂದಲವಿಲ್ಲದ ಮೂರು-ನಾಲ್ಕು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಮಿತ್ ಷಾ ಬಿಜೆಪಿ ಚುನಾವಣಾ ಸಮಿತಿಗೆ ರವಾನಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಈ ನಡುವೆ ಕಾಂಗ್ರೆಸ್-ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬುದನ್ನು ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಪ್ರಕಟಿಸಿದ ಬಳಿಕ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ.ಅಲ್ಲದೆ ಮೈತ್ರಿ ಸರ್ಕಾರದ ಅಧಿಕಾರದಲ್ಲಿರುವ ಹಿನ್ನಲೆಯಲ್ಲಿ ಅಳೆದು ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.
ಮತ್ತೊಂದು ಮಾಹಿತಿ ಪ್ರಕಾರ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಕೈ ಬಿಟ್ಟು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಚಿಂತನೆ ಯಡಿಯೂರಪ್ಪ ಅವರಿಗಿದೆ.ಮೈಸೂರು-ಕೊಡುಗು ಅಥವಾ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ವಿಜಯೇಂದ್ರ ಅವರಿಗೆ ರಾಜಕೀಯ ಪ್ರವೇಶ ಕೊಡಿಸಲು ರಾಜ್ಯಾಧ್ಯಕ್ಷರು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಕಳೆದ ಭಾರಿ ಮೈಸೂರು ಜಿಲ್ಲೆಯ ವರುಣ ವಿಧಾನ ಸಭಾ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರನಿಗೆ ಟಿಕೆಟ್ ನೀಡಿ ಸಿದ್ದರಾಮಯ್ಯ ಅವರ ಪುತ್ರನನ್ನು ಸೋಲಿಸುವ ತಂತ್ರ ರೂಪಿಸಿ ಕೊನೆ ಕ್ಷಣದಲ್ಲಿ ಯಡಿಯೂರಪ್ಪ ಹಿಂದೆ ಸರಿದಿದ್ದರು.
ಫೆ 21ರಿಂದ ಮೋದಿ ವಿಜಯ ಸಂಕಲ್ಪ ಯಾತ್ರೆ, ನಮ್ಮ ಕುಟುಂಬ ಬಿಜೆಪಿ ಕುಟುಂಬ, ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸುವುದು, ಕಮಲ ಜ್ಯೋತಿ, ಮತ್ತೊಮ್ಮೆ ಮೋದಿ ಬೈಕ್ ಜಾಥಾ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಬಿಜೆಪಿ ಪರ ರಾಜ್ಯದಲ್ಲಿ ಅಲೆ ಸೃಷ್ಟಿಸುವ ಪ್ರಯತ್ನದಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದಾರೆ.