ದೇಶವನ್ನು ವಿದೇಶಿಗರಿಗೆ ಮಾರಲು ಹೊರಟ ಬಿಜೆಪಿ ಸರ್ಕಾರ..!

ತುಮಕೂರು

   ಪ್ರಸಕ್ತವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಇಡೀ ದೇಶವನ್ನು ಒತ್ತೆ ಇಡಲು ಹೊರಡಿದೆ, ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ದೇಶದಲ್ಲಿ ಆರ್ಥಿಕ ದುಸ್ಥಿತಿ ಎದುರಾಗಿದ್ದು, ದೇಶದ ಆರ್ಥಿಕತೆಯನ್ನು ವಿದೇಶಿ ಬಂಡವಾಳಕ್ಕೆ ಮಾರಲು ಆರ್‍ಎಸ್‍ಎಸ್ ಮತ್ತು ಬಿಜೆಪಿ ಪಣ ತೊಟ್ಟು ನಿಂತಿದೆ. ದೇಶದಲ್ಲಿ ಬಡತನ ಹೆಚ್ಚಾಗಿದ್ದು ಕೈಗಾರಿಕೆಗಳು, ಕಂಪನಿಗಳು ಮುಚ್ಚುತ್ತಿವೆ ಇದಕ್ಕೆ ನಾವು ಹೋರಾಟವನ್ನು ನಡೆಸುವುದು ಅನಿವಾರ್ಯ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಆಕ್ರೋಶ ವ್ಯಕ್ತಪಡಿಸಿದರು.

   ನಗರದ ಗಾಜಿನಮನೆಯಲ್ಲಿ ಸಿಐಟಿಯು ನ 14ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನಾವು ಇಂದು ದೇಶದಲ್ಲಿ ಗಂಭೀರ ಸಮಸ್ಯೆಯನ್ನು ಕಾಣುತ್ತಿದ್ದೇವೆ. ಸಂಕಷ್ಟ ಸ್ಥಿತಿಯಲ್ಲಿ ದೇಶದ ಕಾರ್ಮಿಕ ವರ್ಗವಿದೆ. ನಾವು ಐಕ್ಯತೆಯ ಹಾಗೂ ಪ್ರಜ್ಞಾವಂತಿಕೆಯ ಹೋರಾಟವನ್ನು ಕೈಗೊಳ್ಳಬೇಕಾಗಿದೆ. ನಮ್ಮ ಸಂಘಟನೆಯ ಅಸ್ತ್ರವೇ ಐಕ್ಯತೆ ಎಂದರು.

   ದೇಶದಲ್ಲಿ ಬಂಡವಾಳಗಾರರು, ರಾಜಕೀಯ ಪಕ್ಷಗಳು ಒಂದಾಗಿ ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿ ಇದರ ವಿರುದ್ಧ ಹೋರಾಟ ನಡೆಸುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲು ಹೊರಟಿದ್ದಾರೆ. ಸಂಪೂರ್ಣ ದೇಶವನ್ನು ಖಾಸಗೀಕರಣವಾಗಿಸಲು ಹೊರಟಿರುವ ಬಿಜೆಪಿ ಸರ್ಕಾರದ ವಿರುದ್ಧ ನಾವು ಕೆಂಪು ಬಾವುಟ ಹಿಡಿದು ಹೋರಾಟ ನಡೆಸಿ ಖಾಸಗೀಕರಣವನ್ನು ವಿರೋಧಿಸುತ್ತಾ ಬಂದಿದ್ದು ಉಳಿದೆಲ್ಲಾ ಪಕ್ಷಗಳು ಒಂದಾಗಿ ಬಿಜೆಪಿಗೆ ಸಹಕರಿಸಲು ನಿಂತಿವೆ ಎಂದು ವಿಷಾದಿಸಿದರು.

    ದೇಶದ ಕಾರ್ಮಿಕರ ಐಕ್ಯತೆ ಕಾಪಾಡಬೇಕು, ದೇಶವನ್ನು ವಿಭಜಿಸಲು ಹೊರಡಿರುವ ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ವಿದೇಶಕ್ಕೆ ಮಾರಲು ಹೊರಟಿದ್ದಾರೆ, ಅವರ ಈ ನೀತಿಗಳನ್ನು ಹಿಮ್ಮೆಟ್ಟಿಸಬೇಕಾದರೆ ಜನವರಿಯಲ್ಲಿ ರಾಷ್ಟ್ರವ್ಯಾಪಿ ನಡೆಯುವ ಮುಷ್ಕರದಲ್ಲಿ ದೇಶದ ಎಲ್ಲ ಕಾರ್ಮಿಕರು, ಮಹಿಳೆಯರು ಭಾಗವಹಿಸಿದರೆ ಮಾನವೀಯತೆಯ ಶತ್ರುಗಳನ್ನು ಹಾಗೂ ಜನತೆಯ ಶತ್ರುಗಳನ್ನು ಹಿಮ್ಮೆಟ್ಟಿಸಬಹುದಾಗಿದೆ ಎಂದರು.

     ಈ ವರ್ಷಕ್ಕೆ ಸಿಐಟಿಯು ತನ್ನ 50 ವರ್ಷವನ್ನು ಪೂರೈಸುತ್ತದೆ. ಅಂತೆಯೆ ಆಲ್ ಇಂಡಿಯಾ ಕೇಡ್ ಇನ್ ಕಾಂಗ್ರೆಸ್ ಸ್ಥಾಪನೆಯಾಗಿ ಇಂದಿಗೆ 100 ವರ್ಷ ತುಂಬುತ್ತದೆ. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ವಿಚಾರ. ದೇಶ ದಿಕ್ಕು ತಪ್ಪುವಾಗ ಕೆಂಪು ಬಾಹುಟ ಹಿಡಿದು ಸಿಐಟಿಯು ಸಂಘಟನೆ ಪ್ರಾರಂಭವಾಯಿತು. ಈ 50 ವರ್ಷದಲ್ಲಿ ಐಕ್ಯತೆ ಮತ್ತು ಹೋರಾಟವೇ ಸಂಘಟನೆಯ ಉದ್ದೇಶ. ಸಮಾಜ ವಿರೋಧಿ ನೀತಿಗಳ ವಿರುದ್ಧ ಜನವರಿ 8ರಂದು ನಡೆಯುವ ಸಾರ್ವತ್ರಿಕ ಮುಷ್ಕರಕ್ಕೆ ಎಲ್ಲರೂ ಭಾಗವಹಿಸಬೇಕು ಎಂದರು.

    ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ ಹೇಮಲತಾ ಮಾತನಾಡಿ, ಈ ಸಭೆಯಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದು ನನಗೆ ಖುಷಿ ತಂದಿದೆ. ಹೀಗೆ ಮಹಿಳೆಯರು ಹೋರಾಟಗಳಲ್ಲಿ ಹೆಚ್ಚಿನದಾಗಿ ಪಾಲ್ಗೊಂಡು ತಮ್ಮ ಹಕ್ಕು ದಕ್ಕಿಸಿಕೊಳ್ಳಬೇಕು. ಹಲವು ಹೋರಾಟಗಳಲ್ಲಿ ಕರ್ನಾಟಕದಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗಹಿಸಿರುವ ಚರಿತ್ರೆಯನ್ನು ಗಮನಿಸುತ್ತಿದ್ದೇವೆ. ಅದರಲ್ಲೂ ಅಂಗನವಾಡಿ ಕಾರ್ಯಕರ್ತೆರ ಹೋರಾಟ ಹಾಗೂ ಕಾರ್ಮಿಕರ ಹೋರಾಟಗಳಲ್ಲಿ ಭಾಗವಹಿಸಿ ಅದರ ಪರಿಣಾಮ ಪಡೆದಿದ್ದಾರೆ ಎಂದರು ಮಹಿಳೆಯರು ಕೇವಲ ತಮ್ಮ ಹೋರಾಟಕ್ಕೆ ಭಾಗವಹಿಸುವುದಲ್ಲದೆ, ಇತರೆ ಹೋರಾಟದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ.

  ಇಂದು ಎಲ್ಲಾ ಕ್ಷೇತ್ರದಲ್ಲಿ ಮಹಿಳೆ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ದೇಶದ ಎಲ್ಲಾ ರಾಜ್ಯದಲ್ಲಿರುವ ಮಹಿಳೆಯರನ್ನು ಮುಂಚೂಣಿ ತರಬೇಕೆನ್ನುವುದು ಸಿಐಟಿಯು ನ ಉದ್ದೇಶ. ಇಂದು ಮಹಿಳೆಯರಿಗೆ ಹಲವು ಸಮಸ್ಯೆಗಳಿವೆ ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಕ್ಕುತ್ತಿಲ್ಲ. ಸಮಸ್ಯೆಯನ್ನು ಕ್ರಮಕ್ಕೆ ತೆಗೆದುಕೊಂಡು ಸಿಐಟಿಯು ಹೋರಾಟ ನಡೆಸಬೇಕು. ನಮ್ಮ ಹಕ್ಕುಗಳನ್ನು ಸರ್ಕಾರ ಸುಮ್ಮನೆ ಕೊಟ್ಟಿಲ್ಲ. ನಾವು ಹೋರಾಡಿ ಪಡೆದುಕೊಂಡದ್ದು. ಈಗ ಬಂದಿರುವ ಸರ್ಕಾರ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಇದರ ವಿರುದ್ಧ ತೀವ್ರವಾದ ಹೋರಾಟ ಮಾಡಬೇಕಿದೆ ಎಂದರು.

  ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇಂದು ನಾಮಮಾತ್ರಕ್ಕಷ್ಟೇ ಇದೆ. ಜನರ ನೋವುಗಳಿಗೆ ಸ್ಪಷ್ಟವಾಗಿ ಸ್ಪಂದಿಸುತ್ತಿಲ್ಲ. ಮತಗಳನ್ನು ಗಿಟ್ಟಿಸುವ ಸಲುವಾಗಿ ಟಿಪ್ಪು ಒಳಗೊಂಡಂತೆ ಅನೇಕ ಐತಿಹಾಸಿಕ ನಾಯಕರ ಇಲ್ಲಸಲ್ಲದ ಚರ್ಚೆಯನ್ನು ಕೈಗೆತ್ತಿಕೊಳ್ಳುತ್ತದೆ. ಇದು ತಂತ್ರಗಾರಿಕೆಯಷ್ಟೆ ಎಂದ ಅವರು, ನಮ್ಮ ಚಳುವಳಿಗಳನ್ನು ಜೀವಂತವಾಗಿಡಲು ಹೋರಾಟ ಅಗತ್ಯ. ಶೇ26ರಷ್ಟು ಜನ ಗುತ್ತಿಗೆಯಲ್ಲಿ ಇಂದಿಗೂ ಅರೆಕಾಲಿಕರಾಗಿ ದುಡಿಯುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಖಾಸಗೀಕರಣ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಸಿಐಟಿಯು ರಾಜ್ಯ ಸಮ್ಮೇಳನದಲ್ಲಿ ಅದರ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದೆ ಎಂದರು.

   ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಜನರು ಹಳ್ಳಗಳಲ್ಲಿ ಕೃಷಿಯನ್ನು ಬಿಟ್ಟು ನಗರಕ್ಕೆ ಬರುವಂತಾಗಿದೆ, ಇಲ್ಲಿನ ಶಿಕ್ಷಣವಂತರಿಗೆ ಉದ್ಯೋಗವಿಲ್ಲಂದತಾಗಿದೆ ಈ ರೀತಿಯ ಪರಿಸ್ಥಿತಿ ದೇಶದಲ್ಲಿ ಉದ್ಬವಿಸಿರುವುದು ನಿಜಕ್ಕೂ ಮಾರಕ. ಸರ್ಕಾರಗಳು ಜನಪರ ನೀತಿಯನ್ನು ಜಾರಿ ಮಾಡಬೇಕು. ಬಹುಸಂಖ್ಯಾತ ಜನರ ಸಮಸ್ಯೆಗಳಿಗೆ ಪರಿಹರಿಸಲು ಜನಪರ ನೀತಿಗಳು ಜಾರಿಗೊಳಿಸಲು ಹೋರಾಟ ಮಾಡಬೇಕು ಎಂದ ಅವರು, ಜಾತಿ ಹೆಸರಿನಲ್ಲಿ, ಪ್ರದೇಶದ ಹೆಸರಿನಲ್ಲಿ ಐಕ್ಯತೆಯನ್ನು ಜಾರಿಗೊಳಿಸಲು ಬಿಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾರಾಟಕ್ಕಿಟ್ಟಿರುವ ಸರ್ಕಾರದ ವಿರುದ್ಧ ತೀವ್ರ ಹೋರಾಟಗಳು ನಡೆಯಲೇ ಬೇಕಿದೆ ಎಂದರು.

   ಸ್ವಾಗತ ಸಮಿತಿ ಗೌರವಾಧ್ಯಕ್ಷ ಪ್ರೊ.ಕೆ ದೊರೈರಾಜ್ ಮಾತನಾಡಿ, ಇಂದು ಬದುಕುವ ಹಕ್ಕನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಭಾರತೀಯರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ಐಕ್ಯತೆಯ ಹೋರಾಟ ಅನಿವಾರ್ಯವಾಗಿದೆ ಎಂದರು. ಕಾಮ್ರೇಡ್ ಸುನಂದಾ ಅವರು ಸಂಘಟನೆಯ ಹಲವು ನಿರ್ಣಯಗಳನ್ನು ಮಂಡಿಸುತ್ತಾ ಮೋದಿಯ ಎಲ್ಲ ಜನವಿರೋಧಿ ನೀತಿಯನ್ನು ಹಿಮ್ಮೆಟ್ಟಿಸಲು ಹೋರಾಟ ಅವಶ್ಯಕವಾಗಿದೆ. ಸಂಪತ್ತನ್ನು ಸಮಾನ ಹಂಚಬೇಕು, ಸಮರ್ಪಕವಾಗಿ ಉದ್ಯೋಗ ಖಾತ್ರಿ ಬೇಕು, ಕೃಷಿ ಉತ್ಪನ್ನಗಳೊಂದಿಗೆ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಸುಸ್ಥಿರ ನೀತಿ ಜಾರಿಗೊಳಿಸಬೇಕು. ದುಡಿಯುವ ವರ್ಗಗಳು ಮುಷ್ಕರಕ್ಕೆ ನಿಂತಿವೆ, ರಾಜ್ಯದ ಕೈಗಾರಿಕೆಗಳು ವ್ಯಾಪಕ ಪ್ರಚಾರ ನಡೆಸಬೇಕು ಎಂಬಿತ್ಯಾದಿ ನಿರ್ಣಯಗಳನ್ನು ಮಂಡನೆ ಮಾಡಿದರು.

    ಸಮ್ಮೇಳನದಲ್ಲಿ ವಿಶೇಷ ತಂಡದಿಂದ ನನ್ನೊಳಗೊಬ್ಬ ಭಗತ್ ಸಿಂಗ್ ನಾಟಕ ಪ್ರದರ್ಶನವನ್ನು ನಡೆಸಲಾಯಿತು. ಸಂಘಟನೆಯ ಮುಖಂಡರುಗಳಾದ ಮುಜೀಬ್, ಕೆ.ಶಂಕರ್ ಬಾಲಕೃಷ್ಣ, ವೀರಸ್ವಾಮಿ, ಜೈರಾಮ್ ಕಾಮ್ರೇಡ್, ವಸಂತಾಚಾರ್, ಮಂಜುಳ ತುರುವೇಕೆರೆ, ಮಹಾಂತೇಶ್, ಎಚ್.ಎಸ್ ಸುನಂದ, ಮಾಲಿನಿ ಮೇಸ್ತಾರ್, ಪರಮೇಶ್ ಸೇರಿದಂತೆ ವಿವಿಧ ಭಾಗಗಳಿಂದ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link