ಬೆಂಗಳೂರು
ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ದುಡ್ಡು ಕೊಡುತ್ತೇವೆ ಅಂದರೂ ಮಾಹಿತಿ ಕೊಡುತ್ತಿಲ್ಲ. ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಹಿತಿ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳು ಹಿಂದೇಟು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗಂತೂ ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲು ಆಗಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರದ ಅಧೀನದಲ್ಲಿವೆ. ಬಿಜೆಪಿ ರಾಜಕೀಯ ಮಾಡುತ್ತಿದೆ. ಬ್ಯಾಂಕ್ ಅಧಿಕಾರಿಗಳು ಕನಿಷ್ಟ ಸಾಲದ ಮಾಹಿತಿ ನೀಡಬೇಕು ಎಂದರು.
ಬಿಜೆಪಿಯವರು ಸಾಲಮನ್ನಾಗೆ ಕೇಂದ್ರದಿಂದ ಒಂದು ರುಪಾಯಿ ಸಹ ದೊರಕಿಸಿಕೊಟ್ಟಿಲ್ಲ. ಕೊನೇಪಕ್ಷ ಅಪಪ್ರಚಾರ ಮಾಡುವುದನ್ನಾದರೂ ನಿಲ್ಲಿಸಲಿ. ಬಿಜೆಪಿ ಯವರು ಕನಿಷ್ಟ ಪಕ್ಷ ಕೇಂದ್ರದ ಜೊತೆ ಮಾತನಾಡಿ ಬ್ಯಾಂಕ್ ಗಳಿಂದ ಮಾಹಿತಿ ತರಿಸಿಕೊಟ್ಟರೆ ನಾನು ಅವರಿಗೆ ಆಭಾರಿಯಾಗಿರುತ್ತೇನೆ ಎಂದರು.
ನಾವು ಸಾಲ ಮನ್ನಾ ಮಾಡಲು ಸಿದ್ಧವಾಗಿದ್ದೇವೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿರ್ದೇಶನ ಕೊಡಿಸಿ ಮಾಹಿತಿ ದೊರಕಿಸಿಕೊಡಲಿ. ಆದಷ್ಟು ಬೇಗ ಸಾಲ ಮನ್ನಾ ಆಗಲಿದೆ. ನವೆಂಬರ್‍ನಿಂದ ಹಂತ ಹಂತವಾಗಿ ಬ್ಯಾಂಕ್‍ಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ 6500 ಕೋಟಿ ರೂಪಾಯಿ ಬಿಡುಗಡೆ ಮಾಡಲು ಸಿದ್ಧರಿದ್ದೇವೆ ಎಂದು ವಿವರಿಸಿದರು.
ಬ್ಯಾಂಕ್‍ಗಳು ಮಾಹಿತಿ ನೀಡಿದರೆ ಮಾತ್ರ ಸಾಲ ಮನ್ನಾ ಮಾಡಲು ಸಾಧ್ಯ. ರಾಷ್ಟ್ರೀಕೃತ ಬ್ಯಾಂಕ್ ಗಳು ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ವ್ಯಾಪ್ತಿಗೆ ಬರುತ್ತದೆ. ಡೇಟಾ ಬೇಸ್ ಕೊಡಿಸುವ ಕೆಲಸವನ್ನು ಮಾಡಲಿ ಅಂತ ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ. ಸರ್ಕಾರದಲ್ಲಿ ದುಡ್ಡಿನ ಸಮಸ್ಯೆ ಇಲ್ಲ ಎಂದರು.
ಬ್ಯಾಂಕ್ ಅಧಿಕಾರಿಗಳು ತಿಳುವಳಿಕೆ ಪತ್ರಗಳನ್ನ ನೀಡಿದ್ದಾರೆ. ಒಂದೇ ಬಾರಿಗೆ ಸೆಟಲ್‍ಮೆಂಟ್‍ಗೆ ತಯಾರಾಗಿದ್ದೀರಾ ಎಂದು ಈ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಬಡ್ಡಿ ಕಡಿಮೆ ಮಾಡುತ್ತೇವೆ ಅಂತಲೂ ತಿಳುವಳಿಕೆ ಪತ್ರ ನೀಡಿದ್ದಾರೆ. ಆ ಮಾಹಿತಿಯನ್ನು ಕೇಳಲು ಅಧಿಕಾರಿಗಳ ತಂಡವನ್ನು ಬಿಟ್ಟಿದ್ದೇವೆ. ನವೆಂಬರ್ 1 ರಿಂದ ಹಣ ಬಿಡುಗಡೆ ಮಾಡಬೇಕಿದೆ. ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ