ಬೆಂಗಳೂರು
ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಬಿಜೆಪಿ ನಾಯಕರು ಆರ್ಥಿಕ ಸ್ಥಿತಿ ಸುಧಾರಿಸುವ ಬಗ್ಗೆ ಮಾತಾಡದೇ ಹಿಂದಿ ಹೇರಿಕೆ ವಿಚಾರ ಪ್ರಸ್ತಾಪಿಸಿ ವಿಷಯಾಂತರ ಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬಲವಂತದ ಹಿಂದಿ ಹೇರಿಕೆಯನ್ನು ಖಂಡಿಸಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೌರ್ಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ, ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮಗೆ ಹಿಂದಿ, ತೆಲುಗು, ತಮಿಳು ಸೇರಿಂದತೆ ದೇಶ ಎಲ್ಲಾ ಪ್ರಾದೇಶಿಕ ಭಾಷೆಗಳ ಬಗ್ಗೆಯೂ ಗೌರವ ಇದೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಒಂದೇ ದೇಶ, ಒಂದೇ ಭಾಷೆ’ ಎನ್ನುವ ಮೂಲಕ ರಾಜ್ಯಗಳ ನಡುವೆ ಘರ್ಷಣೆಗಳಿಗೆ ಯತ್ನಿಸುತ್ತಿದ್ದಾರೆ ಅವರು ಆರೋಪಿಸಿದರು.
ವಿವಾದ ಸೃಷ್ಟಿಸುವುದೇ ಬಿಜೆಪಿಯ ಕೆಲಸವಾಗುತ್ತಿದೆ.ರಾಜ್ಯದಲ್ಲಿ ನೆರೆ ಸಂತ್ರಸ್ಥರು ಸಂಕಷ್ಟ ಅನುಭವಿಸುತ್ತಿದ್ದು ಅವರ ನೆರೆವಿಗೆ ಕೇಂದ್ರ ಸರ್ಕಾರ ಬರುತ್ತಿಲ್ಲ.ಅದನ್ನು ಬಿಟ್ಟು ಬೇರೆ ಏನೇನೋ ಮಾಡುವುಕ್ಕೆ ಹೊರಟಿದೆ. ದೇಶದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ ಹೊಂದಿವೆ ಅಂತಹ ವೈವಿಧ್ಯತೆಗೆ ತಡೆಯೊಡ್ಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.
ಒತ್ತಾಯ ಪೂರ್ವಕವಾಗಿ ದೇಶವನ್ನು ಭಾಷೆ ಮತ್ತು ಆಹಾರ ಸಂಸ್ಕೃತಿಗಳ ಮೂಲಕ ವಿಭಜಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ.ಆ ಮೂಲಕ ದೇಶವನ್ನು ಒಡೆದು ಆಳಲು ಹೊರಟಿದ್ದಾರೆ ಎಂದು ಆರೋಪಿಸಿದರು.
ನಾವು ಹಿಂದಿ ಭಾಷೆಯನ್ನು ವಿರೋಧಿಸುತ್ತಿಲ್ಲ, ಆದರೆ ಬಲವಂತವಾಗಿ ಹಿಂದಿ ಹೇರಿಕೆಗೆ ನಮ್ಮ ವಿರೋಧವಿದೆ.ಈ ದೇಶದಲ್ಲಿ ನಾನಾ ಭಾಷೆಗಳ ವೈವಿಧ್ಯತೆಯಿಂದ ಕೂಡಿದೆ.ಆದರೆ ಒಂದೇ ಭಾಷೆ,ಒಂದೇ ಆಹಾರ ಎಂದು ವಿಭಜಿಸುವ ಪ್ರಯತ್ನವೇ ಮೂರ್ಖತನವಾಗಿದ್ದು, ಹಿಂದಿ ಹೇರಿಕೆಗೆ ನಮ್ಮ ತೀವ್ರ ವಿರೋಧವಿದೆ ಕನ್ನಡಿಗರನ್ನ ಭಾಷೆಯ ಹೆಸರಿನಲ್ಲಿ ವಿಭಜಿಸುವ ಬಿಜೆಪಿ ಪ್ರಯತ್ನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಭಾರತ ಹಲವು ರಾಜ್ಯಗಳನ್ನು ಒಳಗೊಂಡ ಒಕ್ಕೂಟದಿಂದ ರೂಪುಗೊಂಡಿರುವ ದೇಶ.ಪ್ರತೀ ರಾಜ್ಯಗಳಲ್ಲೂ ಭಾಷೆ, ಸಂಸ್ಕೃತಿ, ಜೀವನ ಶೈಲಿ,ಆಚಾರ,ಸಂಪ್ರದಾಯಗಳಲ್ಲಿ ವಿಭಿನ್ನತೆಯಿಂದ ಕೂಡಿದೆ.ಕರ್ನಾಟಕದಲ್ಲಿಯೇ ತುಳು, ಕೊಂಕಣಿ ,ಬ್ಯಾರಿ,ಕೊಡವ,ಲಂಬಾಣಿ ಭಾಷೆಗಳು ಬಳಕೆಯಲ್ಲಿವೆ.ಹಾಗೆಂದ ಮಾತ್ರಕ್ಕೆ ನಾವು ಎಲ್ಲರನ್ನು ಗೌರವಿಸುತ್ತೇವೆ ಹಾಗೂ ಎಲ್ಲಾ ಭಾಷೆಯನ್ನು ಪ್ರೀತಿಸುತ್ತೇವೆ ಆದರೆ ಒಂದೇ ದೇಶವೆಂಬ ಕಲ್ಪನೆ ಸರಿ ಆದರೆ ಒಂದೇ ಭಾಷೆ ಬೇಕು ಎಂದರೆ ಅದು ಸಾಧ್ಯ ವಾಗುವುದಿಲ್ಲ ಎಂದು ಅವರು ಹೇಳಿದರು.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಗೆ ಭಾಷೆ ಹೇರಿಕೆ ಬಗ್ಗೆ ಹೇಳಲು ರಾಜ್ಯದ ಬಿಜೆಪಿ ಸಂಸದರಿಗೆ ಶಕ್ತಿಯಿಲ್ಲವೇ.ರಾಜ್ಯದಿಂದ 25 ಸಂಸದರು ಆಯ್ಕೆಯಾಗಿ ಹೋಗಿದ್ದಾರೆ
ಅವರೆಲ್ಲಾ ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.ಅವರೆಲ್ಲಾ ಏತಕ್ಕಾಗಿ ನಮ್ಮ ಪ್ರತಿನಿಧಿಗಳಾಗಿರಬೇಕು.ಭಾಷೆ ಹೇರಿಕೆ ಬಗ್ಗೆ ಗೃಹ ಸಚಿವರು ತಕ್ಷಣ ಸ್ಪಷ್ಟೀಕರಣ ನೀಡಬೇಕು ಅಲ್ಲದೆ ದೇಶದ ಜನರ ಕ್ಷಮಾಪಣೆ ಕೋರಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಿಂದಿನ ಸರ್ಕಾರಗಳ ಹಳೆಯ ಯೋಜನೆಗಳನ್ನು ತನಿಖೆ ಮಾಡಿಸಲು ಮುಂದಾಗಿದ್ದಾರೆ. ಬಿಜೆಪಿ ಆಪರೇಷನ್ ಕಮಲಕ್ಕೆ ಕೋಟಿಗಟ್ಟಲೇ ಹಣ ಖರ್ಚು ಮಾಡಿದ್ದಾರೆ. ಈ ಹಣ ಹಿಂತೆಗೆಯಲು ಈಗಾಗಲೇ ಆರಂಭವಾಗಿರುವ ಯೋಜನೆ ಗಳಿಗೆ ತಡೆಯೊಡ್ಡುತ್ತಿದ್ದಾರೆ.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕವೇ ರಾಜ್ಯಕ್ಕೆ ಕರಾಳ ದಿನ ಎದುರಾಗಿದೆ.ರಾಜ್ಯ ಸರ್ಕಾರ ಹಣ ಲೂಟಿ ಮಾಡುತ್ತಿದ್ದು, ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಹಣ ಹೊಡೆಯುವುದರಲ್ಲೇ ಮುಳುಗಿದ್ದಾರೆ .ರಾಜ್ಯದಲ್ಲಿ ಸರ್ಕಾರ ಇದೆಯೇ ? ಎಂಬ ಪ್ರಶ್ನೆ ಮೂಡುವಂತಾಗಿದೆ
ಸರ್ಕಾರ ವರ್ಗಾವಣೆ ದಂಧೆಯಲ್ಲೇ ಮುಳುಗಿದೆ, ಈಗ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರವನ್ನ ನಡೆಸುತ್ತಿದೆ. ನೆಪಕ್ಕೆ ಮಾತ್ರ ಯಡಿಯೂರಪ್ಪ ನೇತೃತ್ವದ ಸರ್ಕಾರವಾಗಿದೆ ಆ ತನಿಖೆ, ಈ ತನಿಖೆ ಎಂದು ವೃಥಾ ಮುಖ್ಯಮಂತ್ರಿ ಅವರು ಕಾಲಹರಣ ಮಾಡುತ್ತಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಅವರೇ ಹೇಳಿದ್ದರು ಈಗ ಅವರು ಮಾಡುತ್ತಿರುವುದಾದರೂ ಏನು ? ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ? ಹಿಂದಿನ ಸರ್ಕಾರದ ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳ ತನಿಖೆ ನಡೆಸಲಿ ಬೇಡ ಅಂದವರು ಯಾರು ? ಎಂದು ದಿನೇಶ್ ಗುಂಡುರಾವ್ ತಿರುಗೇಟು ನೀಡಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ, ಯಾರೋ ಬಿಜೆಪಿ ನಾಯಕರು ಅವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ. ಮೈಸೂರು ಪಾಕ್ನಲ್ಲೇ ಮೂಲ ಅಡಗಿದೆ. ಪಾಕ್ ಮೈಸೂರಿನದ್ದಲ್ಲದೇ ಹೋಗಿದ್ದರೆ ಮಧುರೈ ಪಾಕ್ ಅಂತಾ ಕರೆಯಬೇಕಿತ್ತು. ಇದೀಗ ಬಿಜೆಪಿಯವರು ಏಕೆ ನೆರೆ ಸಂತ್ರಸ್ತರ ಕುರಿತಲ್ಲದೇ ಬೇರೆ ವಿಚಾರಗಳನ್ನು ಮಾತಾಡುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಇನ್ನು ಕೆ.ಎಸ್ ಈಶ್ವರಪ್ಪ ಅವರಿಗೆ ಮಂತ್ರಿಯಾಗುವ ಯೋಗ್ಯತೆ ಇಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಈ ಹಿಂದೆ ಯಾರು ಸಿಎಂ ಮಾಡಿದ್ದರೋ, ಅಂತವರಿಗೆ ಮೋಸ ಮಾಡಿದ ವ್ಯಕ್ತಿ ಸದಾನಂದಗೌಡರು ಎಂದು ಲೇವಡಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ