ಬಿಜೆಪಿ ಸರ್ಕಾರದಿಂದ ಕ್ಷೇತ್ರದ ಅನುದಾನಕ್ಕೆ ಕತ್ತರಿ : ಸಾ.ರಾ.ಮಹೇಶ್

ಬೆಂಗಳೂರು

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಇಲಾಖೆಗಳಿಂದ ಮಂಜೂರಾಗಿದ್ದ 40 ಕೋಟಿ ರೂ ಅನುದಾನಕ್ಕೆ ಹಾಲಿ ಸರ್ಕಾರ ಕತ್ತರಿ ಹಾಕಿರುವುದನ್ನು ಪ್ರತಿಭಟಿಸಿ ಕೆಡಿಪಿ ಸಭೆಯಿಂದ ದೂರ ಉಳಿಯಲು ಶಾಸಕ,ಮಾಜಿ ಸಚಿವ ಸಾ.ರಾ.ಮಹೇಶ್ ನಿರ್ಧರಿಸಿದ್ದಾರೆ.

     ಈ ಸಂಬಂಧ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು,ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಹಣವನ್ನು ತಡೆಹಿಡಿಯಲಾಗಿದ್ದು ಇದನ್ನು ಬಿಡುಗಡೆ ಮಾಡುವವರೆಗೆ ಕೆಡಿಪಿ ಸಭೆಯಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.

     ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಏಳು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

     ಇದೇ ರೀತಿ ಪೌರಾಡಳಿತ ಇಲಾಖೆಯಿಂದ ಹತ್ತು ಕೋಟಿ ರೂಪಾಯಿ,ಲೋಕೋಪಯೋಗಿ ಇಲಾಖೆಯಿಂದ 11.50 ಕೋಟಿ ರೂಪಾಯಿ,ಪ್ರವಾಸೋದ್ಯಮ ಇಲಾಖೆಯಿಂದ 18 ಕೋಟಿ ರೂಪಾಯಿ ಅನುದಾನವನ್ನು ಸಮ್ಮಿಶ್ರ ಸರ್ಕಾರ ಮಂಜೂರು ಮಾಡಿತ್ತು.
ಹೀಗೆ ವಿವಿಧ ಇಲಾಖೆಗಳಿಂದ ಕ್ಷೇತ್ರದ ಅಭಿವದ್ಧಿಗೆ ಎಂದು ಮಂಜೂರಾದ ಈ ಹಣವನ್ನು ನಿಮ್ಮ ಸರ್ಕಾರ ತಡೆಹಿಡಿದಿದ್ದುಇದನ್ನು ವಿರೋಧಿಸಿ ಕಳೆದ ವರ್ಷದ ಅಕ್ಟೋಬರ್ 1 ರಂದು ನಾನು ನಿಮಗೆ ಪತ್ರ ಬರೆದು ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಸ್ಪಷ್ಟ ಪಡಿಸಿದ್ದೆ.

    ಆ ಸಂದರ್ಭದಲ್ಲಿ ತಾವು ಯಾವುದಾದರೂ ಇಲಾಖೆಯಿಂದ ಅನುದಾನ ಮಂಜೂರಾಗಿ ತಡೆಹಿಡಿಯಲಾಗಿದ್ದರೆ ಅದನ್ನು ನನ್ನ ಗಮನಕ್ಕೆ ತರಲಿ.ತಕ್ಷಣವೇ ಅದನ್ನು ಬಿಡುಗಡೆ ಮಾಡಿಸಿ ಸಾ.ರಾ.ಮಹೇಶ್ ಅವರಿಂದಲೇ ಸದರಿ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸುವುದಾಗಿ ಹೇಳಿದ್ದಿರಿ.

     ಇದಾದ ನಂತರ ನಿಮ್ಮ ಹೇಳಿಕೆಯ ಆಧಾರದ ಮೇಲೆ ಸರ್ಕಾರದ ಯಾವ್ಯಾವ ಇಲಾಖೆಗಳಿಂದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ಬಿಡುಗಡೆಯಾಗಿದೆ ಎಂದು ನಾನು ಹೇಳಿದ್ದೆ.ಆದರೆ ಈ ಸಂಬಂಧ ವಿವರ ನೀಡಿ ಹಲವು ದಿನಗಳು ಕಳೆದರೂ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಹಣವನ್ನು ಬಿಡುಗಡೆ ಮಾಡಿಸಲು ತಾವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾ.ರಾ.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಹಂತದಲ್ಲಿ ನೀವು ಕೆಡಿಪಿ ಸಭೆಗೆ ಬರುವಂತೆ ನನಗೆ ಆಹ್ವಾನ ನೀಡಿದ್ದೀರಿ.ಆದರೆ ನಿಮ್ಮ ಸರ್ಕಾರ ಅಭಿವೃದ್ಧಿಯ ವಿಷಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಹಣವನ್ನು ಇದುವರೆಗೆ ಬಿಡುಗಡೆ ಮಾಡದಿರುವುದೇ ಸಾಕ್ಷಿ.

    ಇದೇ ಕಾರಣಕ್ಕಾಗಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಇದೇ ವಿಷಯದ ಕುರಿತು ಪ್ರಸ್ತಾಪಿಸಿ ನಿಮಗೆ ನೋವುಂಟು ಮಾಡಲು ನಾನು ಬಯಸುವುದಿಲ್ಲ.ಹೀಗಾಗಿ ಸದರಿ ಸಭೆಯಿಂದ ದೂರ ಉಳಿಯುತ್ತೇನೆ ಎಂದು ಅವರು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap