ಬೆಂಗಳೂರು:
ಬಜೆಟ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಚಿಂತನೆ ನಡೆಸಿದ್ದು, ಈ ಸಂಬಂಧ ಕಾಂಗ್ರೆಸ್ ಅತೃಪ್ತರಿಗೆ ಮತ್ತೊಮ್ಮೆ ಗಾಳ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಇದಕ್ಕಾಗಿ ಮುಂಬೈಗೆ ಶಾಸಕ ಅಶ್ವತ್ಥನಾರಾಯಣ್ ಹಾರಿದ್ದು, ಅತೃಪ್ತರ ಭೇಟಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸ್ಟಾರ್ಟ್ ಆಯ್ತಾ ಅನ್ನುವ ಶಂಕೆ ಮೂಡಿದೆ. ಕೊನೆ ಹಂತದ ಕಸರತ್ತಿಗೆ ಮುಂದಾಗಿರುವ ಬಿಜೆಪಿ, ಆಪರೇಷನ್ ಕಮಲಕ್ಕಾಗಿ ಶಾಸಕ ಡಾ. ಅಶ್ವತ್ಥನಾರಾಯಣ್‍ರನ್ನು ಮುಂಬೈಗೆ ಕಳುಹಿಸಿಕೊಟ್ಟಿದೆ.
ಕಾಂಗ್ರೆಸ್‍ನ ರೆಬಲ್ ಶಾಸಕರ ಭೇಟಿಗೆ ತೆರಳಿದ ಡಾ. ಅಶ್ವತ್ಥನಾರಾಯಣ್ ಮುಂಬೈನಲ್ಲೇ ಉಳಿದಿರುವ ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕಮಟಳ್ಳಿ, ಉಮೇಶ್ ಜಾಧವ್ ಅವರನ್ನು ಭೇಟಿ ಮಾಡಲಿದ್ದಾರೆ.
ಜೊತೆಗೆ ಇನ್ನಿಬ್ಬರು ಶಾಸಕರು ಮುಂಬೈನಲ್ಲಿ ಇದ್ದು, ಅವರ ಹೆಸರನ್ನು ಬಿಜೆಪಿ ನಾಯಕರು ಗುಪ್ತವಾಗಿಟ್ಟಿದ್ದಾರೆ. ಇನ್ನೂ 10 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.
ಬಜೆಟ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಸದ್ದಿಲ್ಲದೆ ಗಾಳ ಹಾಕುತ್ತಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಅಧಿವೇಶನದಲ್ಲಿ ಬಹುಮತ ಸಾಬೀತಿಗೆ ಬಿಜೆಪಿ ಪಟ್ಟು ಹಿಡಿಯಲಿದೆ. ಆ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ರಣತಂತ್ರ ರೂಪಿಸಿದೆ ಎನ್ನುವ ಮಾಹಿತಿ ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ತಕ್ಷಣ ಸರ್ಕಾರ ರಚಿಸುವ ಉದ್ದೇಶ ಬಿಜೆಪಿಗೆ ಇಲ್ಲದಿದ್ದರೂ ಶಾಸಕರ ರಾಜೀನಾಮೆ ಕೊಡಿಸಿ ಸದ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಮುಂದಿನ ಹಜ್ಜೆ ಇಡಲಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ