ಚಿತ್ರದುರ್ಗ:
ಕೇಂದ್ರ ಕೋಮುವಾದಿ ಬಿಜೆಪಿ. ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯಿದೆ ತಿದುಪಡಿ ವಿರುದ್ದ ಶಾಂತಿಯುತ ಹೋರಾಟದ ಮೂಲಕ ದ್ವೇಷ ಅಳಿಸಿ ಪ್ರೀತಿ ಉಳಿಸುವ ಕೆಲಸವಾಗಬೇಕಾಗಿದೆ ಎಂದು ಸಾಹಿತಿ ಡಾ.ಬಿ.ಎಲ್.ವೇಣು ತಿಳಿಸಿದರು. ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಏತಕ್ಕಾಗಿ ಚಿತ್ರದುರ್ಗ ಜನಜಾಗೃತಿ ಅಭಿಯಾನದಿಂದ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಜಾತ್ಯಾತೀತ ಭಾರತದಲ್ಲಿ ರಾಜಕಾರಣಿಗಳಿಗೆ ಧರ್ಮವೇ ಬಂಡವಾಳವಾಗಿದೆ. ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಎಂದಿಗೂ ದ್ವೇಷದ ಬೀಜ ಬಿತ್ತಲಿಲ್ಲ. ಕೋಮುವಾದಿ ಬಿಜೆಪಿ ಜಾತಿ,ಧರ್ಮವನ್ನು ವಿಂಗಡಿಸುವ ಕುತಂತ್ರ ನಡೆಸುತ್ತಿರುವುದರ ವಿರುದ್ದ ಯುವಕ/ಯುವತಿಯರು ಮೊದಲು ಜಾಗೃತರಾಗಬೇಕಿದೆ. 370 ನೆ ವಿಧಿ, ತಲಾಖ್, ರಾಮ ಮಂದಿರ-ಬಾಬ್ರಿ ಮಸೀದಿ ವಿವಾದ ಇವುಗಳಿಂದ ದೇಶದಲ್ಲಿ ಎಲ್ಲಿಯೂ ಗಲಭೆಯಾಗಲಿಲ್ಲ.
ಮುಸ್ಲಿಂರನ್ನು ಭಯೋತ್ಪಾದಕರನ್ನಾಗಿ ಮಾಡಬಹುದು ಎಂದುಕೊಂಡಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಷಾ ಇವರುಗಳು ಈಗ ಪೌರತ್ವ ಕಾಯಿದೆ ತಿದ್ದುಪಡಿ ಅಸ್ತ್ರವನ್ನು ಹಿಡಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.ನಮ್ಮದು ಗಾಂಧಿ ಅಹಿಂಸೆ ಸಂಸ್ಕøತಿ, ಗೋಡ್ಸೆ ಸಂಸ್ಕøತಿಯಲ್ಲ. ಮನಸ್ಸಿನಲ್ಲಿ ಗೋಡ್ಸೆ ಬಾಯಲ್ಲಿ ಜೈಶ್ರೀರಾಂ ಎಂದು ಹೇಳುತ್ತಿರುವವರು ಧರ್ಮಗಳ ವಿರುದ್ದ ಕಿತ್ತಾಟವಿಟ್ಟು ಖುಷಿಪಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು.
ದೇಶದ ಸ್ವಾತಂತ್ರಕ್ಕಾಗಿ ಸಾವಿರಾರು ಮುಸ್ಲಿಂರು ಹೋರಾಡಿದ್ದಾರೆ. ಟಿಪ್ಪು ಕೂಡ ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ ವೀರಸೇನಾನಿ ಎಂಬುದನ್ನು ಮರೆತಿರುವ ಕೋಮುವಾದಿಗಳು ಗೋಡ್ಸೆಯನ್ನು ಹೀರೋ ಮಾಡಲು ಹೊರಟಿರುವುದು ದೊಡ್ಡ ದುರಂತ. ಮುಸ್ಲಿಂರನ್ನು ದ್ವೇಷಿಸುವುದೇ ರಾಷ್ಟ್ರೀಯತೆಯಾಗಿದೆ. ಪೌರತ್ವ ಕಾಯಿದೆ ತಿದ್ದುಪಡಿ ಮೂಲಕ ದೇಶದ ಜನರ ದಾಖಲೆ ಕೇಳುತ್ತಿರುವ ಬಿಜೆಪಿ.ಯವರು ರಫೇಲ್ ಹಗರಣದ ದಾಖಲೆ ಕೇಳಿದರೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ ಇವುಗಳ ಕಡೆ ಗಮನ ಕೊಡದ ಬಿಜೆಪಿ. ಸಂವಿಧಾನ ವಿರೋಧಿ ಕಾಯಿದೆ ಜಾರಿಗೆ ತರಲು ಮುಂದಾಗಿದೆ. ಇನ್ನು ಸುಮ್ಮನಿದ್ದರೆ ತೊಂದರೆಯಾಗುವುದು ಖಚಿತ. ಕೇವಲ ಮುಸಲ್ಮಾನರಷ್ಟೆ ಅಲ್ಲ. ದಲಿತರು, ಹಿಂದುಳಿದವರು, ಮಹಿಳೆಯರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು, ಅನಕ್ಷರಸ್ಥರು ದಾಖಲೆಗಳನ್ನು ಪಡೆದುಕೊಳ್ಳಲು ಸರ್ಕಾರಿ ಕಚೇರಿಗಳ ಎದುರು ಸಾಲು ನಿಲ್ಲಬೇಕಾಗುತ್ತದೆ. ಇದರ ವಿರುದ್ದ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮಗಾಂಧಿ, ಸ್ವಾಮಿವಿವೇಕಾನಂದ, ಅಂಬೇಡ್ಕರ್ ಇವರುಗಳನ್ನು ಹೈಜಾಕ್ ಮಾಡಿರುವ ಬಿಜೆಪಿ.ಯವರು ವೀರಸಾರ್ವಕರ್, ಭಗತ್‍ಸಿಂಗ್ ಇವರುಗಳನ್ನು ಮುಂದಿಟ್ಟುಕೊಂಡು ದೇಶಭಕ್ತಿಯ ನಾಟಕವಾಡುತ್ತಿದ್ದಾರೆ. ಚುನಾವಣೆಯಲ್ಲಿ ಮತಗಳನ್ನು ಮಾರಿಕೊಂಡರೆ ಹೆತ್ತ ತಾಯಿಯನ್ನು ಮಾರಿಕೊಂಡಂತೆ. ವರ್ಷಕ್ಕೆ ಎರಡು ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಇರುವ ಉದ್ಯೋಗಗಳನ್ನು ಕಸಿಯುತ್ತಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಕುಸಿದಿದೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಎಲ್‍ಐಸಿ, ಬಿಎಸ್‍ಎನ್‍ಲ್, ರೈಲ್ವೆ, ಏರ್ ಇಂಡಿಯಾವನ್ನು ಮಾರಾಟಕ್ಕಿಟ್ಟಿದ್ದಾರೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗವನ್ನು ಅನುಮಾನದಿಂದ ನೋಡುವಂತಾಗಿರುವುದರಿಂದ ಇದೊಂದು ಸ್ವಾತಂತ್ರ ಸಂಗ್ರಾಮದ ರೀತಿಯಲ್ಲಿ ಚಳುವಳಿಯಾಗಬೇಕು. ಆಗ ಮಾತ್ರ ಸಂವಿಧಾನವನ್ನು ಉಳಿಸಲು ಸಾಧ್ಯ ಎಂದರು.
ಹಿಂದೂ, ಮುಸ್ಲಿಂ, ಸಿಖ್, ಪಾರ್ಸಿ, ಜೈನ್ ಎಲ್ಲರೂ ಒಂದಾಗಬೇಕಿದೆ. ಮಠಾಧೀಶರುಗಳು ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ದ ಬಾಯಿ ಬಿಡುತ್ತಿಲ್ಲ. ಓಬಿಸಿ. ಸ್ವಾಮಿಗಳು ಮುಖ್ಯಮಂತ್ರಿ ಎದುರು ಗುಟುರು ಹಾಕುತ್ತಿದ್ದಾರೆ. ನಮ್ಮ ಉಳಿವಿಗಾಗಿ ಹೋರಾಡಬೇಕಿದೆ ಎಂದು ಯುವ ಸಮೂಹವನ್ನು ಎಚ್ಚರಿಸಿದರು.
ಎಐಡಿವೈಒ ಅಖಿಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡುತ್ತ ಆರ್‍ಎಸ್‍ಎಸ್ ಅಜಂಡವಿಟ್ಟುಕೊಂಡಿರುವ ಕೋಮುವಾದಿ ಬಿಜೆಪಿ.ಗೆ ದೇಶಭಕ್ತಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಆರ್‍ಎಸ್‍ಎಸ್. ನವರು ಯಾರು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿಲ್ಲ. ಬ್ರಿಟೀಷರೊಂದಿಗೆ ಕೈಜೋಡಿಸಿ ಸ್ವಾತಂತ್ರ ಹೋರಾಟಗಾರರನ್ನು ಹಿಡಿದುಕೊಟ್ಟಿದ್ದಾರೆ. ಪೌರತ್ವ ಕಾಯಿದೆ ವಿರುದ್ದ ನಿಜವಾದ ಜನತಂತ್ರ ಪ್ರಜಾತಂತ್ರ ಚಳುವಳಿಯಾಗಬೇಕಿದೆ. ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ನಲವತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡುತ್ತಿದ್ದಾರೆ. ಒಂದು ಸಾವಿರ ಬುದ್ದಿಜೀವಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಅವರ್ಯಾರು ಮುಸ್ಲಿಂರಲ್ಲ. ಓಟಿನ ರಾಜಕಾರಣ ಇಲ್ಲಿ ನುಸುಳಲು ಬಿಡಬಾರದು ಎಂದು ಹೇಳಿದರು.
ಯುವಕರಿಗೆ ನಿರುದ್ಯೋಗ ಕೊಡುವಲ್ಲಿ ಸೋತಿರುವ ಕೇಂದ್ರ ಬಿಜೆಪಿ. ಬಡತನ ನಿರ್ಮೂಲನೆ, ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಫಲವಾಗಿದ್ದು, ದೇಶದ ಜನರನ್ನು ದಿಕ್ಕುತಪ್ಪಿಸುವುದಕ್ಕಾಗಿ ಈಗ ಪೌರತ್ವ ಕಾಯಿದೆ ತಿದ್ದುಪಡಿ ಜಾರಿಗೆ ತಂದಿದೆ. ಮತ ಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಉದ್ದೇಶವಿಟ್ಟುಕೊಂಡಿರುವ ಬಿಜೆಪಿ.ಯಿಂದ ಯಾವ ಅಭಿವೃದ್ದಿಯನ್ನು ನಿರೀಕ್ಷಿಸಲು ಆಗುವುದಿಲ್ಲ. ಬಡವರ ಅಭಿವೃದ್ದಿ ಬದಲಿಗೆ ಉದ್ಯಮಿ, ಬಂಡವಾಳ ಶಾಹಿಗಳು ಬಲಿಷ್ಟರಾಗಿದ್ದಾರೆ. ದೇಶಕ್ಕೆ ಗಂಡಾಂತರ ಬಂದಿರುವುದರಿಂದ ಹೋರಾಟ ನಿರಂತರವಾಗಿರಬೇಕು. ಅದಕ್ಕಾಗಿ ಸಮಿತಿ ರಚಿಸೋಣ ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲರಾದ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಎಐಟಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು, ಕಾರ್ಮಿಕ ಮುಖಂಡ ಸಿ.ಕೆ.ಗೌಸ್‍ಪೀರ್, ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯ ಎಚ್.ರವಿಕುಮಾರ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
