ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಕಾಂಗ್ರೆಸ್ ನಾಯಕರ ಮಾನಸಿಕ ಸ್ಥೈರ್ಯ ಕಸಿದುಕೊಳ್ಳಲು ಸಾಧ್ಯವಿಲ್ಲ, ಅದು ಬಿಜೆಪಿ ನಾಯಕರ ಭ್ರಮೆಯಷ್ಟೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರ ನಿರ್ದೇಶನದಂತೆ ಇಂದು ಡಿ ಕೆ ಶಿವಕುಮಾರ್ ಮನೆ ಮೇಲೆ ರೇಡ್ ಮಾಡಲಾಗಿದೆ. ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುವ ಸಿಬಿಐಗೆ ಕಣ್ಣಿಗೆ ಕಾಣೋದು ಬರೀ ಕಾಂಗ್ರಸ್ ನಾಯಕರೇನಾ ಸಿಎಂ ಯಡಿಯೂರಪ್ಪನವರ ಮಗನ ಭ್ರಷ್ಟಾಚಾರದ ಬ್ರಹ್ಮಾಂಡ ಕಣ್ಣಿಗೆ ಕಾಣಿಸುವುದಿಲ್ಲವೇ, ಯಡಿಯೂರಪ್ಪನವರ ಮಗ ವಿಜಯೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದರೂ ಕ್ರಮ ಕೈಗೊಂಡಿಲ್ಲವೇಕೆ? ಅದರಲೂ ಯಾವುದಾದರೂ ಚುನಾವಣೆ ಅಥವಾ ಉಪಚುನಾವಣೆ ಬಂದರೆ ಸಿಬಿಐ ತಕ್ಷಣ ಜಾಗೃತವಾಗುತ್ತದೆಯಲ್ಲಾ ಅದು ಹೇಗೆ ? ಮತ್ತು ಜಾಗೃತವಾದ ಕ್ಷಣದಲ್ಲಿ ಅವರ ಕಣ್ಣಿಗೆ ಬೀಳುವುದು ಪ್ರತಿಪಕ್ಷದ ನಾಯಕರೇ ಎಂಬುದು ವಿಪರ್ಯಾಸ.
ಇವುಗಳನ್ನೆಲ್ಲಾ ನೋಡಿದರೆ ಇದು ಬಿಜೆಪಿಯ ಕುತಂತ್ರ ಎಂಬುದರಲ್ಲಿ ಸಂಶಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
