ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶ

ಚಿಕ್ಕನಾಯಕನಹಳ್ಳಿ

       ತಾಲ್ಲೂಕಿನಲ್ಲಿ ಕನಿಷ್ಠವೆಂದರೂ 90 ಸಾವಿರ ಓಟು ಬಿಜೆಪಿ ಪಕ್ಷಗಳಿಸಲೇಬೇಕು, ಈ ಮೂಲಕ ಜಿ.ಎಸ್.ಬಸವರಾಜುರವರಿಗೆ ಶಕ್ತಿ ತುಂಬಿ, ಯಡಿಯೂರಪ್ಪನವರ ವಿಶ್ವಾಸ ಹಾಗೂ ಅಸೆಂಬ್ಲಿಯಲ್ಲಿ ನಿಂತುಕೊಂಡು ಮಾತನಾಡುವಂತಹ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಶಾಸಕ ಮಾಧುಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

      ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವರಾಜುರವರು ನೀರಿಗಾಗಿ ಜಿಲ್ಲೆಯಲ್ಲಿ ಹೋರಾಟ ಮಾಡಿದವರು, ಅವರ ಆಯ್ಕೆ ಜಿಲ್ಲೆಯಲ್ಲಿ ಆಗಬೇಕು ಆ ಮೂಲಕ ನರೇಂದ್ರಮೋದಿಯವರಿಗೆ ಶಕ್ತಿ ತುಂಬಬೇಕು ಎಂದರು.

        ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ 70ಸಾವಿರ ಮತಗಳನ್ನು ಪಡೆದಿತ್ತು. ಆದರೆ ನನಗೆ ಇನ್ನೂ 10ಸಾವಿರ ಮತಗಳು ದೊರೆತಿಲ್ಲ ಎಂಬ ಭಾವನೆಯಿದೆ. ಆ ಹತ್ತು ಸಾವಿರ ಮತಗಳನ್ನು ಪಡೆಯಲೇಬೇಕು, ಜೊತೆಗೆ ಈ ಬಾರಿ ನಮ್ಮ ಮತಗಳ ಜೊತೆ ಇನ್ನಷ್ಟು ಹೆಚ್ಚಿನ ಮತ ಪಡೆದು ಜಿ.ಎಸ್.ಬಸವರಾಜುರವರಿಗೆ ತಾಲ್ಲೂಕಿನಿಂದ ಶಕ್ತಿ ತುಂಬಬೇಕಾಗಿದೆ ಎಂದ ಅವರು, ಪಾರ್ಲಿಮೆಂಟ್ ಚುನಾವಣೆ ನಂತರ ಈಗಿರುವ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಗೆ ಕೂರುತ್ತಾರೆ ಎಂದರು.

      ತಾಲ್ಲೂಕಿನಲ್ಲಿ ಅಪ್ಪರ್‍ಭದ್ರಾ ಹಾಗೂ ಎತ್ತಿನಹೊಳೆ ಮೂಲಕ ತಾಲ್ಲೂಕಿಗೆ ನೀರು ತರಬೇಕು, ಎತ್ತಿನಹೊಳೆಯಲ್ಲಿಯೂ ತಾಲ್ಲೂಕಿನ ಕೆಲವು ಭಾಗ ಕೈಬಿಟ್ಟಿದ್ದಕ್ಕೆ ಅಧಿಕಾರಿಗಳ ಜೊತೆ ಸತತವಾಗಿ ಸಂಪರ್ಕವಿದ್ದು ಈ ಬಗ್ಗೆ ಸದಾ ಪ್ರಶ್ನಿಸಿದ್ದಕ್ಕೆ ಯೋಜನೆಯಲ್ಲಿ ತಾಲ್ಲೂಕಿನ ಕೆರೆಗಳನ್ನು ಸೇರಿಸಲಾಯಿತು. ಜನರಿಗೆ ಸುಳ್ಳು ಹೇಳಿಕೊಂಡು, ಜಾತಿ ರಾಜಕೀಯ ಮಾಡುವವರನ್ನು ನಂಬಬೇಡಿ. ಕೆಲಸ ಮಾಡುವವರಿಗೆ ಸಹಕಾರ ನೀಡಿ, ರಾಜಕೀಯದಲ್ಲಿ ನಮಗೂ ತಂತ್ರಗಾರಿಕೆ ಗೊತ್ತಿದೆ, ಮನವೊಲಿಸುವುದು ಗೊತ್ತಿದೆ ಎಂದರಲ್ಲದೆ, ಲೋಕಸಭಾ ಚುನಾವಣೆ ಗೆಲುವು ಕಂಡ ನಂತರ ಬರುವ ಸಣ್ಣಪುಟ್ಟ ಚುನಾವಣೆಗಳಲ್ಲೂ ಗೆಲುವು ಕಾಣುವುದರ ಜೊತೆಗೆ ನಮ್ಮ ಪಕ್ಷದ ಮುಖಂಡರು ಸ್ಥಾನಮಾನಗಳನ್ನೂ ಪಡೆಯಬಹುದು ಎಂದರು.

        ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ನರೇಂದ್ರಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಹಾಗೂ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮೋದಿಯವರು ದೇಶಕ್ಕೆ ಬೇಕಾದ ಅಸಮಾನ್ಯ ವ್ಯಕ್ತಿ. ಅವರನ್ನು ವಿಶ್ವದಾದ್ಯಂತ ಗುರುತಿಸಲು ನಿಮ್ಮಗಳ ಶಕ್ತಿ ಅಗತ್ಯ ಎಂದ ಅವರು, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಬಿಜೆಪಿ ಪಕ್ಷಕ್ಕೆ ಮತಚಲಾಯಿಸಿ ಎಂದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಮ್ಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಂಕರಲಿಂಗಯ್ಯ, ತಾ.ಅಧ್ಯಕ್ಷ ಹೆಚ್.ಆರ್.ಶಶಿಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್‍ಕುಮಾರ್, ತಾ.ಪಂ.ಸದಸ್ಯರಾದ ಕೇಶವಮೂರ್ತಿ, ಇಂದಿರಮ್ಮ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಲೋಹಿತಬಾಯಿ, ಮುಖಂಡರಾದ ಬರಗೂರುಬಸವರಾಜು, ನಿರಂಜನ್‍ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link