ಬಡ ಕುಟುಂಬಗಳಿಗೆ ವಿತರಿಸುವ ಆಹಾರದಲ್ಲೂ ರಾಜಕೀಯ ಮಾಡಿದ ಬಿಜೆಪಿ ಮುಖಂಡ

ಬೆಂಗಳೂರು

      ಖ್ಯಾತ ಬರಹಗಾರ್ತಿ ಇನ್ ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಇನ್ ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ಬ್ರಾಹ್ಮಣ ಸಂಘ ಮತ್ತು ಅಕ್ಷಯಪಾತ್ರೆ ಹೆಸರಿನಡಿ ಅಗತ್ಯವಿರುವ ಬಡ ಕುಟುಂಬಗಳಿಗೆ ವಿತರಿಸಬೇಕಿದ್ದ ಆಹಾರ ಧಾನ್ಯ ಪ್ಯಾಕೆಟ್ ಗಳಿಗೆ ತಮ್ಮ ಹೆಸರು ಹಾಕಿಕೊಂಡು ಪುಕ್ಕಟೆ ಪ್ರಚಾರ ಪಡೆದಿರುವ ಗಂಭೀರ ಆರೋಪ ರಾಯಚೂರು ಜಿಲ್ಲೆಯಿಂದ ಕೇಳಿ ಬಂದಿದೆ.

      ರಾಜ್ಯಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಆಹಾರ ಧಾನ್ಯ ವಿತರಿಸಲು ರಾಯಚೂರು ಜಿಲ್ಲೆಗೆ ಈ ಮೇಲ್ಕಂಡ ಹೆಸರಿನಡಿ ಆಹಾರ ಪ್ಯಾಕೇಟ್ ಗಳನ್ನು ರವಾನಿಸಲಾಗಿತ್ತು. ಇದಕ್ಕೆ ಲೇಬಲ್ ಗಳನ್ನು ಸಹ ಅಂಟಿಸಲಾಗಿತ್ತು.ಆದರೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಮಿತಿ ಪ್ರಮುಖರೂ ಆದ ತ್ರಿವಿಕ್ರಮ ಜೋಷಿ ಎಂಬುವರು ತಮ್ಮ ಹೆಸರಿನ ಜನ ಸೇವಾ ಪ್ರತಿಷ್ಠಾನದ ಹೆಸರಿರುವ ಲೇಬಲ್ ಮೆತ್ತಿ ಆಹಾರಧಾನ್ಯಗಳ ಪೊಟ್ಟಗಳನ್ನು ವಿತರಣೆ ಮಾಡಿದ್ದಾರೆ. 

     ರಾಯಚೂರು ಜಿಲ್ಲೆಯಲ್ಲಿ ಆಹಾರ ಧಾನ್ಯಗಳ ಪ್ಯಾಕೆಟ್ ವಿತರಿಸುವ ಜವಾಬ್ದಾರಿಯನ್ನು ತ್ರಿವಿಕ್ರಮ ಜೋಷಿ ಅವರಿಗೆ ವಹಿಸಲಾಗಿತ್ತು. ಆದರೆ ಅವರು ಆಹಾರ ಧಾನ್ಯ ಒದಗಿಸಿದ ಡಾ. ಸುಧಾಮೂರ್ತಿ, ನಾರಾಯಣಮೂರ್ತಿ ಅವರ ಹೆಸರುಗಳನ್ನು ಮರೆ ಮಾಚಿ ತಮ್ಮ ಹೆಸರನ್ನು ಅಂಟಿಸಿಕೊಂಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

      ಡಾ. ಸುಧಾಮೂರ್ತಿ ಅವರ ಅಭಿಮಾನಿಗಳು ಈ ವಿಚಾರದಲ್ಲಿ ತೀವ್ರ ಆಕ್ರೋಶಗೊಂಡಿದ್ದಾರೆ. ಯಾವುದೇ ಪ್ರಚಾರ ಪಡೆಯದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸುಧಾಮೂರ್ತಿ ಅವರನ್ನು ಜೋಷಿ ಅಪಮಾನ ಮಾಡಿದ್ದಾರೆ. ಇನ್ ಫೋಸಿಸ್ ಫೌಂಡೇಷನ್ ಹೆಸರಿನಲ್ಲಿ ಸಹಸ್ರಾರು ಕೋಟಿ ಹಣವನ್ನು ವೆಚ್ಚ ಮಾಡುತ್ತಾ ಎಲ್ಲಾ ವಲಯಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅನ್ನ, ನೀರು, ಆರೋಗ್ಯ, ಶಿಕ್ಷಣ, ಸಮಾಜ ಸೇವೆ ಜತೆಗೆ ಸರ್ಕಾರದ ಕಾರ್ಯಕ್ರಮಗಳಿಗೂ ನೆರವು ನೀಡುತ್ತಿರುವ ಸುಧಾಮೂರ್ತಿ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಜನಾಕ್ರೋಶ ತೀವ್ರಗೊಂಡಿದೆ.

    ತ್ರಿವಿಕ್ರಮ ಜೋಷಿ ಅವರ ವರ್ತನೆ ಬಗ್ಗೆ ರಾಜ್ಯ ಬಿಜೆಪಿ ಘಟಕಕ್ಕೆ ದೂರು ನೀಡಲಾಗಿದೆ. ಬಿಜೆಪಿ ಘಟಕ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತ್ರಿವಿಕ್ರಮ ಜೋಷಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.ಪ್ರತಿಯೊಂದು ಜಿಲ್ಲೆಗಳಲ್ಲೂ ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ಒದಗಿಸುತ್ತಿದ್ದು, ಒಂದೊಂದು ಜಿಲ್ಲೆಗಳಲ್ಲಿ ಒಬ್ಬೊಬ್ಬರಿಗೆ ಜವಾಬ್ದಾರಿ ಕೊಡಲಾಗಿದೆ. ಬ್ರಾಹ್ಮಣ ಸಂಘ ಇದರ ನೇತೃತ್ವ ವಹಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಅಕ್ಕಿ, ಬೇಳೆಕಾಳುಗಳನ್ನು ವಿತರಿಸಬೇಕಿದ್ದ ತ್ರಿವಿಕ್ರಮ ಜೋಷಿ ವಿತರಣೆ ಹೆಸರಿಲ್ಲಿ ತಮ್ಮ ಬೇಳೆ ಬೇಯಿಸಿಕೊಂಡಿರುವ ಕುರಿತು ಬಿಜೆಪಿ ವಲಯದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap