ಬಿಜೆಪಿಯ ಸುಳ್ಳು ಇನ್ನು ಕೆಲಸ ಮಾಡಲ್ಲ:ಕೃಷ್ಣಭೈರೇಗೌಡ

ಬೆಳಗಾವಿ

       ಪಂಚ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.

        ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, `ಐದೂ ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು. ಈಗ ಮೂರು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದ್ದಾರೆ. ಅಂತಿಮ ಫಲಿತಾಂಶಕ್ಕೆ ಕಾಯುತ್ತಿದ್ದೇವೆ, ಕಾಂಗ್ರೆಸ್ ಶಕ್ತಿ ಹೆಚ್ಚಾಗಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಸಚಿವ ಕೃಷ್ಣಭೈರೇಗೌಡ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, `ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ರಾಹುಲ್ ಗಾಂಧಿಯವರು ಈ ಗೆಲುವಿನ ರೂವಾರಿಯಾಗಿದ್ದಾರೆ. ವಿರೋಧ ಪಕ್ಷದವರು ಎಷ್ಟೇ ಅವಮಾನ ಮಾಡಿ ಕುಗ್ಗಿಸಿದರೂ ಅವರು ಕುಗ್ಗಲಿಲ್ಲ’ ಎಂದು ಹೇಳಿದರು.

       ಬಿಜೆಪಿಯ ಸುಳ್ಳು ರಾಜಕಾರಣ ಇನ್ನು ಕೆಲಸ ಮಾಡಲ್ಲ ಎಂಬ ಸಂದೇಶ ಈ ಫಲಿತಾಂಶದಿಂದ ಸಿಕ್ಕಿದೆ. ಅವರ ಸುಳ್ಳು ಭರವಸೆಗಳನ್ನು ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಜನಮನ್ನಣೆ ಗಳಿಸುವಂತಹ ಕೆಲಸ ಮಾಡುತ್ತಿದೆ ಎಂದು ಕೃಷ್ಣಭೈರೇಗೌಡ ಹೇಳಿದ್ದಾರೆ.
ತೆಲಂಗಾಣದಲ್ಲಿ ಸವಾಲಿನ ಚುನಾವಣೆಯಾಗಿತ್ತು. ಅಲ್ಲಿ ಬಹಳ ನಿರೀಕ್ಷೆಯಿತ್ತು, ಆದರೆ ಅದು ಹುಸಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲೂ ಉತ್ತಮ ಫಲಿತಾಂಶ ಸಿಗುವಂತೆ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

      ಮಾಜಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಮಧ್ಯಪ್ರದೇಶದಲ್ಲಿ ಸಮಬಲದ ಹೋರಾಟ ನಡೆದಿದೆ. ರಾಜಸ್ತಾನ, ಛತ್ತೀಸ್‍ಗಢದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಕಾಂಗ್ರೆಸ್‍ನ ವಿಭಜನೆಯ ತಂತ್ರ ಇಲ್ಲಿ ಕೆಲಸ ಮಾಡಿದೆ. ಹಿಂದುತ್ವ ಎಂದು ಹೇಳುವ ಮೂಲಕ ನಾಟಕವಾಡಿ ಮತ ಗಳಿಸಿಕೊಂಡಿದೆ. ಜನ ಕೊಟ್ಟಿರುವುದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದರು.

      ಈ ಫಲಿತಾಂಶದ ಮೂಲಕ ಜನರು ಎಚ್ಚರಿಕೆ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದರೂ ಒಂದೇ ಅಭಿರುಚಿ ಬೇಡ ಎಂಬ ಕಾರಣದಿಂದ ಜನ ತಿರಸ್ಕರಿಸಿದ್ದಾರೆ. ಜನ ಹೊಸ ರೀತಿಯಲ್ಲೂ ಆಲೋಚನೆ ಮಾಡಿದ್ದಾರೆ. ಮೋದಿಯವರ ವರ್ಚಸ್ಸು ಕಡಿಮೆಯಾಗಿಲ್ಲ, ಇವಿಎಂ ಬಗ್ಗೆಯೂ ನಾವು ಆರೋಪ ಮಾಡುವುದಿಲ್ಲ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

        2019 ರ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತಾವು ಸಿದ್ಧಾಂತದ ಜೊತೆ ಹುಟ್ಟಿದವರು. ಅಧಿಕಾರಕ್ಕಾಗಿ ಹುಟ್ಟಿದವರಲ್ಲ. ವಾಜಪೇಯಿ ಮತ್ತು ಅಡ್ವಾಣಿ ಪಕ್ಷ ಬೆಳೆಸುತ್ತಾ ಅವರು ಬೆಳೆದವರು. ಅಲ್ಪಸಂಖ್ಯಾತರ ಮತಗಳು ಬೇಡ ಎಂದು ಹೇಳುವುದಿಲ್ಲ. ಆದರೆ ರಾಷ್ಟ್ರೀಯತೆ ಹೊಂದಿರುವ ಮತಗಳು ಬೇಕು ಎಂದು ಹೇಳಿದರು.

       ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಟ್ರೆಂಡ್ ಕಾಂಗ್ರೆಸ್ ಪಕ್ಷದ ಪರವಾಗಿದೆ. ಪ್ರಧಾನಿ ಮೋದಿ ಅವರು ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದರು. ಅಚ್ಚೇ ದಿನ್ ಎಂದು ಹೇಳಿ ದೇಶಕ್ಕೆ ಮೋಸಮಾಡಿದ್ದರು. ಈ ಚುನಾವಣೆಯ ಮೂಲಕ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ರಾಹುಲ್ ಗಾಂಧಿ ಅಭಿವೃದ್ಧಿ ಪರ ಪ್ರಚಾರಕ್ಕೆ ಜನ ಮತ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ, ಆಪರೇಷನ್ ಮಾಡಲು ಹೋದವರಿಗೇ ಆಪರೇಷನ್ ಆಗಿದೆ ಎಂದು ವ್ಯಂಗ್ಯವಾಡಿದರು.

         ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿ, ಬಿಜೆಪಿಗೆ ನಿರೀಕ್ಷೆಯಂತೆ ಗೆಲುವು ಸಿಕ್ಕಿಲ್ಲ. ಪ್ರಧಾನಿ ಮೋದಿ ಅವರು ಸಾಕಷ್ಟು ಪ್ರಯತ್ನ, ಶ್ರಮ ಹಾಕಿದ್ದಾರೆ. ತಮ್ಮ ಸಂಘಟನೆಯಿಂದ ಸಾಕಷ್ಟು ಶ್ರಮ ಹಾಕಲಾಯಿತು. ನಾಯಕತ್ವ ಮತ್ತು ಸಂಘಟನೆ ಎರಡೂ ಒಟ್ಟೊಟ್ಟಿಗೆ ಹೋದರೆ ಅನುಕೂಲ ಆಗಲಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕುಳಿತು ಚರ್ಚೆ ಮಾಡಿ ಮುಂದುವರೆಯುತ್ತೇವೆ. ಈ ಫಲಿತಾಂಶ ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಆದ ಹಿನ್ನಡೆಯಲ್ಲ ಅಥವಾ ಸಂಘಟನೆಯ ಹಿನ್ನಡೆ ಅಲ್ಲ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವಲ್ಲಿ ಎಡವಿದ್ದೇವೆ ಅನ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶ್ರಮವಹಿಸಿ ಚುನಾವಣೆಗಳನ್ನು ಎದುರಿಸಿ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿ ಮಾಡುತ್ತೇವೆ ಎಂದು ಹೇಳಿದರು.

       ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಪಂಚರಾಜ್ಯಗಳಲ್ಲಿ ಬಿಜೆಪಿ ಒಳ್ಳೆಯ ಪೈಪೆಟಿ ನೀಡಿದೆ. ರಾಜಸ್ತಾನದಲ್ಲೂ ಉತ್ತಮವಾಗಿ ಸ್ಪರ್ಧೆ ಮಾಡಿದ್ದೇವೆ. ಛತ್ತೀಸ್ ಗಡದಲ್ಲಿ ಮೂರು ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿದ್ದು ರಾಜಸ್ತಾನದಲ್ಲಿ ಪ್ರತಿ ಬಾರಿಯೂ ಇದೇ ಫಲಿತಾಂಶ ಬರುತ್ತದೆ. ಇನ್ನು ಪೂರ್ತಿ ಫಲಿತಾಂಶ ಬಂದಿಲ್ಲ, ಆದರೆ ಸಹಜವಾಗಿ ಅಡಳಿತ ವಿರೋಧಿ ಅಲೆಯಿತ್ತು ಎಂದು ಹೇಳಿದರು.
 

       ಮಾಜಿ ಸಚಿವ ಎಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಸಿದಿರುವುದು ಈ ಫಲಿತಾಂಶದಿಂದ ತಿಳಿದುಬರುತ್ತದೆ. ಕಾಂಗ್ರೆಸ್‍ನ ಮಹಾಘಟಬಂಧನ್‍ಗೆ ಲೋಕಸಭೆ ಚುನಾವಣೆಯಲ್ಲಿ ಹೇಗೆ ಬಲ ಬರಲಿದೆ ಎನ್ನುವುದರ ಮುನ್ಸೂಚನೆಯನ್ನು ಈ ಫಲಿತಾಂಶ ಕೊಟ್ಟಿದೆ ಎಂದು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap